ಬೆಂಗಳೂರು: ಇತ್ತೀಚೆಗೆ ನಿಧನರಾಗಿರುವ ನಟ ಪುನೀತ್ ರಾಜ್‌ಕುಮಾರ್ ಅವರ ಸಮಾಧಿ ಇರುವ ಕಂಠೀರವ ಸ್ಟುಡಿಯೋದಲ್ಲಿ ಇಂದು ಬೆಳಿಗ್ಗೆ ಹಾಲು ತುಪ್ಪ ಅರ್ಪಿಸುವ ಕಾರ್ಯಕ್ರಮ ನೆರವೇರಿತು.
ನಟ ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದಿಗೆ 5 ದಿನಗಳಾಗಿದ್ದು, ಕುಟುಂಬದ ಸಂಪ್ರದಾಯದ ಪ್ರಕಾರ ಇಂದು ಬೆಳಿಗ್ಗೆ ಶಾಸ್ತ್ರೋಕ್ತವಾಗಿ ಸಮಾಧಿಗೆ ಹಾಲು ತುಪ್ಪ ಸಮರ್ಪಿಸಲಾಯಿತು.
ಸಹೋದರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ಪತ್ನಿ ಅಶ್ವಿನಿ, ಇಬ್ಬರು ಪುತ್ರಿಯರು, ಕುಟುಂಬ ವರ್ಗ ಸೇರಿದಂತೆ ಆಪ್ತ ಬಳಗ ಭಾಗಿಯಾಗಿತ್ತು.
ಇಂದು ಹಾಲು-ತುಪ್ಪ ಕಾರ್ಯದ ಹಿನ್ನೆಲೆಯಲ್ಲಿ ಅಪ್ಪು ಅಭಿಮಾನಿಗಳು ಸ್ಟುಡಿಯೋ ಮುಂದೆ ಜಮಾಯಿಸುತ್ತಿದ್ದು, ಆದರೆ ಪೊಲೀಸರು ವಾಪಸ್ಸು ಕಳುಹಿಸುತ್ತಿದ್ದಾರೆ.
ಸ್ಟುಡಿಯೋದ ಸುತ್ತಮುತ್ತ ಬಿಗಿಭದ್ರತೆ ಏರ್ಪಡಿಸಲಾಗಿದ್ದು, ಭದ್ರತೆಗಾಗಿ ಸ್ಥಳೀಯ ಪೊಲೀಸರು, ಕೆಎಸ್ಆರ್ಪಿ ತುಕಡಿ, ಆರ್ಎಎಫ್ ಪೊಲೀಸರನ್ನು ನಿಯೋಜಿಸಲಾಗಿದೆ.
ಅಪ್ಪು ಸಮಾಧಿ ಮೇಲೆ ಮಣ್ಣಿನ ಹಣತೆ ಹಚ್ಚಿ ಬಾಳೆ ಎಲೆಯಲ್ಲಿ ಅಪ್ಪುಗೆ ಇಷ್ಟವಾದ ಆಹಾರಗಳನ್ನು ಇಡಲಾಗಿತ್ತು. ಮುದ್ದೆ, ನಾಟಿ, ಕೋಳಿ, ಸಾರು, ಬಿರಿಯಾನಿ, ಕಬಾಬು, ಇಡ್ಲಿ, ಕಡ್ಲೆಕಾಳು, ಗೊಜ್ಜು, ಮೊಟ್ಟೆ, ಬಿರಿಯಾನಿ, ಬಜ್ಜಿ ಇನ್ನಿತರೆ ತಿನಿಸುಗಳು ಹಾಗೂ ಕೆಲವು ಮಾದರಿಯ ಸಿಹಿ ತಿನಿಸುಗಳನ್ನು ಕುಟುಂಬಸ್ಥರು ಮಾಡಿಕೊಂಡು ಬಂದಿದ್ದರು, ಬಾಳೆ ಎಲೆಯಲ್ಲಿ ನೈವೇದ್ಯ ಇಟ್ಟರು.
ಪುನೀತ್ ಅವರು ನಿಧನವಾದ ದಿನದಿಂದ ಅಂತ್ಯಕ್ರಿಯೆ ಮುಗಿಯುವವರೆಗೂ ಮೂರು ದಿನಗಳ ಕಾಲ ಸ್ಥಳದಲ್ಲಿಯೇ ಇದ್ದು ನಿರ್ವಹಣೆ ಮಾಡಿದ್ದ ಅಬಕಾರಿ ಸಚಿವರಾದ ಕೆ.ಗೋಪಾಲಯ್ಯ ಸೇರಿದಂತೆ ಬಿಬಿಎಂಪಿ ಅಧಿಕಾರಿಗಳು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.