Friday, August 12, 2022

ಕಾಲ್ನಡಿಗೆಯಲ್ಲೇ ಪವಿತ್ರ ಹಜ್ ಯಾತ್ರೆಗೆ ಹೊರಟ ಶಿಹಾಬ್‌ಗೆ ಮಂಗಳೂರಿನಲ್ಲಿ ಸ್ವಾಗತ

ಉಳ್ಳಾಲ: ಮಲಪ್ಪುರಂನಿಂದ ಸುಮಾರು 8,600ಕ್ಕೂ ಅಧಿಕ ಕಿ.ಮೀ. ದೂರದಲ್ಲಿರುವ ಪವಿತ್ರ ಮಕ್ಕಾವನ್ನು 9 ತಿಂಗಳ ಅವಧಿಯ ಕಾಲ್ನಡಿಗೆಯಲ್ಲೇ ಕ್ರಮಿಸಿ ಪವಿತ್ರ ಹಜ್ ಯಾತ್ರೆಗೆ ಹೊರಡಲು ಸಂಕಲ್ಪ ಮಾಡಿರುವ ಮುಸ್ಲಿಂ ಯುವಕನಿಗೆ ನಿನ್ನೆ ತಲಪಾಡಿಯಲ್ಲಿ ಭವ್ಯ ಸ್ವಾಗತ ಕೋರಲಾಯಿತು.

ಕೇರಳದ ಮಲಪ್ಪುರಂ ಜಿಲ್ಲೆಯ ಕನಿಪುರದಲ್ಲಿ ಸೂಪರ್ ಮಾರ್ಕೆಟ್ ನಡೆಸುತ್ತಿರುವ ಶಿಹಾಬ್ ಚೊಟ್ಟೂರ್ (30) ಹಜ್ ಯಾತ್ರೆಗೆ ಹೊರಟಿರುವ ಯುವಕ.


ಇವರು ನಿನ್ನೆ ಸಂಜೆ 5.30ಕ್ಕೆ ತಲಪಾಡಿ ಗಡಿ ಮೂಲಕ ದ.ಕ.ಜಿಲ್ಲೆಗೆ ಪ್ರವೇಶಿಸಿದ್ದು, ನೂರಾರು ಮಂದಿ ಭವ್ಯ ಸ್ವಾಗತ ನೀಡಿದರು. ತಲಪಾಡಿ ಪ್ರವೇಶಿಸುತ್ತಲೇ ನೂರಾರು ಮಂದಿ ಬರಮಾಡಿಕೊಂಡರು.

ಗುರುವಾರ ಮಧ್ಯಾಹ್ನ ಕೇರಳದ ಹೊಸಂಗಡಿಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡ ಶಿಹಾಬ್ ಕೆಲವು ಹೊತ್ತು ವಿಶ್ರಾಂತಿ ಪಡೆದು ಬಳಿಕ ಯಾತ್ರೆ ಮುಂದುವರಿಸಿದರು. ಕೋಟೆಕಾರ್ ಸಮೀಪದ ಬೀರಿಯ ಮಸೀದಿಯಲ್ಲಿ ಮಗ್ರಿಬ್ ನಮಾಝ್ ನಿರ್ವಹಿಸಿದ ಶಿಹಾಬ್ ಅವರಿಗೆ ಸಾರ್ವಜನಿಕರು ಶುಭಕೋರಿದರು.

ಈ ಸಂದರ್ಭದಲ್ಲಿ ಭಾರೀ ಜನಜಂಗುಳಿ, ನೂಕು ನುಗ್ಗಲು ಉಂಟಾಗಿ ಶಿಹಾಬ್ ಅವರಿಗೆ ಸಾವಧಾನವಾಗಿ ನಡೆಯುವುದೇ ಕಷ್ಟವಾಯಿತು.

ತಲಪಾಡಿಯಿಂದ ಬೀರಿವರೆಗೂ ಅವರನ್ನು ಸುತ್ತುವರೆದು ಹಿಂಬಾಲಿಸಿಕೊಂಡು ಬಂದ ಜನರ ಅತ್ಯುತ್ಸಾಹ ನೂಕಾಟ, ತಳ್ಳಾಟಕ್ಕೂ ಕಾರಣವಾಯಿತು. ಮೊದಲೇ ನಡೆದು ಸುಸ್ತಾಗಿದ್ದ ಅವರನ್ನು ಜನರು ಮುತ್ತಲು ಹೋದಾಗ ಜತೆಗಿದ್ದವರು ತಡೆದರು, ಹತ್ತಿರ ಬಾರದಂತೆ ಮನವಿ ಮಾಡಿದರು.

ಕೇರಳದ ಎಂಟು ದಿನಗಳಲ್ಲೂ ಶಿಹಾಬ್ ಜೊತೆ ಜನಜಂಗುಳಿಯೇ ಸೇರಿತ್ತು. ಸುರಿಯುವ ಮಳೆಗೆ ಕೊಡೆ ಹಿಡಿಯಲು ಸಾವಿರಾರು ಮಂದಿ ಸಾಥ್ ನೀಡುತ್ತಿದ್ದರು.

ಪಾದಯಾತ್ರೆ ಮೂಲಕ ಹಜ್ ಯಾತ್ರೆಗೆ ಹೊರಡಬೇಕೆಂದು ಸುಮಾರು 8 ತಿಂಗಳಿಂದ ಸಿದ್ಧತೆ ಮಾಡಿಕೊಂಡ ಶಿಹಾಬ್‌ಗೆ ವಿದೇಶಾಂಗ ವ್ಯವಹಾರ ಸಚಿವಾಲಯದಿಂದ ಎಲ್ಲ ಅನುಮತಿ ಪಡೆದುಕೊಳ್ಳಲು ಕೇಂದ್ರ ಸಚಿವ ವಿ. ಮುರುಳೀಧರನ್ ಸಹಿತ ಹಲವರು ನೆರವಾಗಿದ್ದಾರೆ.

ಕೇರಳ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ತಾನ್, ಹರಿಯಾಣ, ಪಂಜಾಬ್, ವಾಘಾ ಗಡಿ ಮೂಲಕ ಪಾಕಿಸ್ತಾನ, ಇರಾಕ್, ಇರಾನ್, ಕುವೈಟ್ ಮತ್ತು ಸೌದಿ ಅರೇಬಿಯಾ ತೆರಳುವ ಅವರು, ಆಯಾ ವಿವಿಧ ದೇಶಗಳ ಗಡಿ ದಾಟಲು ವೀಸಾ ಹಾಗೂ ರಾಯಭಾರ ಕಚೇರಿಗಳಿಂದ ಅನುಮತಿ ಪತ್ರಗಳನ್ನು ಪಡೆದುಕೊಂಡಿದ್ದಾರೆ.

ಈ ಯಾತ್ರೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಶಿಹಾಬ್ ‘ಒಟ್ಟು 8640ಕಿ,ಮೀ ಹಾದಿಯನ್ನು 280 ದಿನಗಳಲ್ಲಿ ತಲುಪುವುದು ನನ್ನ ಗುರಿ. ಪ್ರತಿದಿನ 25ಕಿ.ಮೀ ನಡೆಯುತ್ತಿದ್ದೇನೆ. ಒಂಭತ್ತು ತಿಂಗಳು 10 ದಿನಕ್ಕಿಂತ ಹೆಚ್ಚಿನ ದಿನದ ಪ್ರಯಾಣದ ಬಳಿಕ ಸೌದಿ ಅರೇಬಿಯಾ ತಲುಪಿ, 2023ನೇ ಸಾಲಿನ ಹಜ್‌ಗೆ ಅರ್ಜಿ ಹಾಕಿ ಹಜ್ ಪ್ರಕ್ರಿಯೆ ನಡೆಸುವುದು ನನ್ನ ಉದ್ದೇಶ. ಇದಕ್ಕೆ ನನ್ನ ಕುಟುಂಬ, ಗೆಳೆಯರ ಸಹಕಾರವಿದೆ’ ಎಂದು ಹೇಳಿದ್ದಾರೆ.

ತನ್ನ ಜೊತೆ 10 ಕೆ.ಜಿ ತೂಕದ ಬ್ಯಾಗ್‌ ಒಂದಿದೆ. ಅದರಲ್ಲಿ ಮಲಗಲು ಹಾಸುವ ಬಟ್ಟೆ, ನಾಲ್ಕು ಟೀ ಶರ್ಟ್ಸ್ ಮತ್ತು ಪ್ಯಾಂಟ್‌ಗಳು, ಕೈಯಲ್ಲೊಂದು ಉದ್ದದ ಕೊಡೆ ಇದೆ. ದಾರಿ ಮಧ್ಯೆ ರಾತ್ರಿ ಮಸೀದಿಗಳಲ್ಲಿ ತಂಗುತ್ತಿದ್ದಾರೆ.

ಜನರು ಅವರಿಗೆ ಅನ್ನಾಹಾರ ಕೊಟ್ಟು ಸತ್ಕರಿಸಿ ಬೀಳ್ಕೊಡುತ್ತಿದ್ದಾರೆ.
ಇನ್ನು ನಿನ್ನೆ ಇವರು ನಗರದ ಪಂಪ್‌ವೆಲ್‌ನ ತಖ್ವಾ ಮಸ್ಜಿದ್‌ನಲ್ಲಿ ರಾತ್ರಿ ತಂಗುವ ಬಗ್ಗೆ ನಿರ್ಧರಿಸಿದ್ದರೂ ಸಾರ್ವಜನಿಕರ ನೂಕುನುಗ್ಗಾಟದಿಂದ ಕ್ಲಪ್ತ ಸಮಯಕ್ಕೆ ನಿಗದಿತ ಸ್ಥಳವನ್ನು ತಲುಪಲು ಸಾಧ್ಯವಾಗಲಿಲ್ಲ.

ಹಾಗಾಗಿ ಕೋಟೆಕಾರ್ ಬೀರಿಯ ಹನಫಿ ಮಸ್ಜಿದ್‌ನಲ್ಲೇ ರಾತ್ರಿ ತಂಗಿದರು.
ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್, ರಾಜ್ಯ ಹಜ್ ಕಮಿಟಿಯ ಮಾಜಿ ಸದಸ್ಯ ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಮತ್ತಿತ್ತರರು ಶಿಹಾಬ್ ಅವರನ್ನು ಗಡಿಪ್ರದೇಶದಲ್ಲಿ ಬರ ಮಾಡಿಕೊಂಡರು.

LEAVE A REPLY

Please enter your comment!
Please enter your name here

Hot Topics

ಕಟೀಲು ಕಾಲೇಜಿನ ವಿದ್ಯಾರ್ಥಿಗಳೇ ತಯಾರಿಸಿದ ರಾಷ್ಟ್ರಧ್ವಜ: ಮನೆಮನೆಗೆ ವಿತರಣೆ

ಕಟೀಲು: ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳೇ ತಯಾರಿಸಿ ಸಿದ್ಧಪಡಿಸಿದ ರಾಷ್ಟ್ರಧ್ವಜವನ್ನು ಸರಕಾರದ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಮನೆಗಳಿಗೆ ವಿತರಿಸಲು ವಿದ್ಯಾರ್ಥಿಗಳಿಗೆ ನೀಡಲಾಯಿತು.ಈ ಸಂದರ್ಭ ಕಟೀಲು ದೇಗುಲದ...

ಸಮುದ್ರ ದಡದಲ್ಲಿ ತೇಲಿ ಬಂತು ರಾಶಿ ಮುರವ (ಗೊಬ್ರ) ಮೀನು

ಉತ್ತರ ಕನ್ನಡ: ಉತ್ತರಕನ್ನಡದ ಮಂಕಿ ಸಮುದ್ರ ದಡದಲ್ಲಿ ರಾಶಿ ಮುರವ (ಗೊಬ್ರ) ಮೀನುಗಳು ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವ ದೃಶ್ಯ ಕಂಡುಬಂದಿದೆ.ಹೆಚ್ಚು ತೂಪಾನ್ ಆದಾಗ ನೀರು ಅತೀ ಹೆಚ್ಚು ಕೋಲ್ಡ್ ಆದಾಗ ಮೀನುಗಳು ಅರೆ...

ಶಿವಳ್ಳಿ ಸ್ಪಂದನ ಅಧ್ಯಕ್ಷರಾಗಿ ಯಕ್ಷಗುರು ರಾಮಚಂದ್ರ ಭಟ್‌ ಎಲ್ಲೂರು ಆಯ್ಕೆ

ಮಂಗಳೂರು: ಕದ್ರಿ ವಲಯ ಶಿವಳ್ಳಿ ಸ್ಪಂದನ ಅಧ್ಯಕ್ಷರಾಗಿ ಯಕ್ಷಗುರು ರಾಮಚಂದ್ರ ಭಟ್‌ ಎಲ್ಲೂರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.ಕದ್ರಿ ಮಲ್ಲಿಕಟ್ಟೆ ಶ್ರೀಕೃಷ್ಣ ಮಂದಿರದಲ್ಲಿ ನಡೆದ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ಘೋಷಿಸಲಾಯಿತು.ಅದರಲ್ಲಿ ಶಿವಳ್ಳಿ ಸ್ಪಂದನ ಉಪಾಧ್ಯಕ್ಷರು- ಸದಾನಂದ...