ವಾರಾಣಾಸಿ: ವಾರಾಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ವೀಡಿಯೊ ಚಿತ್ರೀಕರಣ ಮತ್ತು ಸಮೀಕ್ಷೆಯು ಬಿಗಿ ಭದ್ರತೆಯ ನಡುವೆ ಇಂದು ಬೆಳಗ್ಗೆ ಮತ್ತೆ ಆರಂಭಗೊಂಡಿದೆ.
ಸರ್ವೆ ಕಾರ್ಯಕ್ಕಾಗಿ ನ್ಯಾಯಾಲಯದಿಂದ ನಿಯೋಜನೆಯಾಗಿರುವ ತಂಡದೊಂದಿಗೆ ಸದ್ಯಕ್ಕೆ ಸಹಕರಿಸುವುದಾಗಿ ಮಸೀದಿ ಆಡಳಿತ ಮಂಡಳಿಯು ಹೇಳಿದೆ.
‘ಸರ್ವೆ ಕಾರ್ಯದ ಅಧಿಕೃತ ವ್ಯಕ್ತಿಗಳು, ಎರಡೂ ಕಡೆಯವರು, ಅವರ ವಕೀಲರು, ನ್ಯಾಯಾಲಯದ ಕಮಿಷನರ್‌ಗಳು ಮತ್ತು ವಿಡಿಯೊಗ್ರಾಫರ್‌ಗಳು ಸ್ಥಳಕ್ಕೆ ತಲುಪಿದ್ದಾರೆ. ಸಮೀಕ್ಷೆ ಪ್ರಾರಂಭವಾಗಿದೆ’ ಎಂದು ವಾರಾಣಸಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್ ರಾಜ್ ಶರ್ಮಾ ತಿಳಿಸಿದ್ದಾರೆ.
ಜ್ಞಾನವಾಪಿ ಮಸೀದಿ ಆವರಣದಲ್ಲಿಯೇ ಇರುವ ಶೃಂಗಾರ ಗೌರಿ ದೇವಸ್ಥಾನದಲ್ಲಿ ನಿತ್ಯ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಕೋರಿ ಐವರು ಮಹಿಳೆಯರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿ ಆಧರಿಸಿ ಕೋರ್ಟ್ ಮಸೀದಿ ಒಳಗೆ ಸಮೀಕ್ಷೆ ಮತ್ತು ವಿಡಿಯೊ ಚಿತ್ರೀಕರಣ ನಡೆಸಲು ಆದೇಶಿಸಿದೆ.
ಇದೇ ಪ್ರಕರಣ ಸದ್ಯ ಸುಪ್ರೀಂ ಕೋರ್ಟ್ ಅಂಗಳದಲ್ಲಿದ್ದು, ಇಂದು ಕೂಡ ವಿಚಾರಣೆ ನಿಗದಿಯಾಗಿದೆ.
ಪ್ರಕರಣದ ಹಿನ್ನೆಲೆ
ಜ್ಞಾನವಾಪಿ ಮಸೀದಿಯ ಹೊರಗಿನ ಗೋಡೆ ಮೇಲಿರುವ ಶೃಂಗಾರ್ ಗೌರಿ, ಗಣೇಶ, ಹನುಮಾನ್ ಮತ್ತು ನಂದಿ ವಿಗ್ರಹಗಳಿಗೆ ಪ್ರತಿನಿತ್ಯ ಪೂಜೆ ಮಾಡಲು ಅನುಮತಿ ಕೋರಿ ದೆಹಲಿಯ ಮಹಿಳೆಯರಾದ ರಾಖಿ ಸಿಂಗ್, ಲಕ್ಷ್ಮಿ ದೇವಿ, ಸೀತಾ ಸಾಹು ಮತ್ತು ಇತರರು ಸಲ್ಲಿಸಿದ ಮನವಿಯ ಮೇರೆಗೆ ನ್ಯಾಯಾಧೀಶ ದಿವಾಕರ್ ಅವರು ಮಸೀದಿಯ ವೀಡಿಯೊಗ್ರಫಿ ಮತ್ತು ಸಮೀಕ್ಷೆಗೆ ಆದೇಶಿಸಿದ್ದರು.
ಏಪ್ರಿಲ್ 18, 2021ರಂದು ನ್ಯಾಯಾಲಯದ ಮೆಟ್ಟಿಲೇರಿದ್ದ ಮಹಿಳೆಯರು ಮಸೀದಿ ಗೊಡೆ ಮೇಲಿರುವ ವಿಗ್ರಹಗಳಿಗೆ ಯಾವುದೇ ಹಾನಿ ಮಾಡದಂತೆ ತಡೆಯಲು ನ್ಯಾಯಾಲಯದ ಆದೇಶವನ್ನು ಕೋರಿದ್ದರು. ಆದರೆ, ಮಸೀದಿಯೊಳಗೆ ವಿಡಿಯೊಗ್ರಫಿ ಮಾಡಲು ನ್ಯಾಯಾಲಯವು ಯಾವುದೇ ಆದೇಶವನ್ನು ನೀಡಿಲ್ಲ.
ಮಸೀದಿ ಪ್ರದೇಶವನ್ನು ಸುತ್ತುವರಿದ ಬ್ಯಾರಿಕೇಡ್‌ಗಳ ಹೊರಗೆ ‘ಚಬುತ್ರ’ (ಅಂಗಣ)ವರೆಗೆ ಮಾತ್ರ ಸಮೀಕ್ಷೆ ಮಾಡಬೇಕೆಂದು ಮಸೀದಿ ಆಡಳಿತ ಸಮಿತಿಯ ವಕೀಲರು ಈ ಹಿಂದೆ ವಾದಿಸಿದ್ದರು. ನ್ಯಾಯಾಲಯದ ಆಯುಕ್ತರು ಶುಕ್ರವಾರ ಜ್ಞಾನವಾಪಿ-ಶೃಂಗಾರ್ ಗೌರಿ ಸಂಕೀರ್ಣದಲ್ಲಿರುವ ಮಸೀದಿಯ ಹೊರಗಿನ ಕೆಲವು ಪ್ರದೇಶಗಳಲ್ಲಿ ಎರಡು ಕಡೆಯವರ ಘೋಷಣೆಗಳ ನಡುವೆ ಅನಿರ್ದಿಷ್ಟ ಸಮೀಕ್ಷೆಯನ್ನು ನಡೆಸಿದ್ದರು.
ಈ ವೇಳೆ, ನ್ಯಾಯಾಲಯದಿಂದ ನೇಮಕಗೊಂಡ ಕಮಿಷನರ್ ಪಕ್ಷಪಾತದಿಂದ ವರ್ತಿಸುತ್ತಿದ್ದಾರೆ ಎಂದು ಮುಸ್ಲಿಂ ಕಡೆಯವರು ಆರೋಪಿಸಿದ್ದರು. ಕೋರ್ಟ್ ಆದೇಶವಿಲ್ಲದೆ ಅವರು ಜ್ಞಾನವಾಪಿ ಮಸೀದಿಯೊಳಗೆ ವಿಡಿಯೋಗ್ರಫಿ ಮಾಡಲು ಪ್ರಯತ್ನಿಸಿದ್ದಾರೆ ಎಂದು ದೂರಿದ್ದು, ಅವರನ್ನು ಬದಲಾಯಿಸುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.