ಮಂಗಳೂರು: ಕರ್ಣಾಟಕ ಬ್ಯಾಂಕಿನ ಹೆಚ್ಚುವರಿ ನಿರ್ದೇಶಕರಾಗಿ ಜೀವನ್‍ದಾಸ್ ನಾರಾಯಣ್ ಹಾಗೂ ಕಲ್ಮಂಜೆ ಗುರುರಾಜ ಆಚಾರ್ಯ ಅವರನ್ನು ನೇಮಕ ಮಾಡಲಾಗಿದೆ.
ಜೀವನ್‍ದಾಸ್ ನಾರಾಯಣ್
ಕಂಪನಿ ಕಾಯ್ದೆ 2013ರ ಸೆಕ್ಷನ್ 161ರ ಅಡಿಯಲ್ಲಿ ಮಾಡಿರುವ ಈ ನೇಮಕವನ್ನು, ಮಂಗಳವಾರ ನಡೆದ ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ಅನುಮೋದಿಸಲಾಯಿತು.
ಜೀವನ್‍ದಾಸ್ ನಾರಾಯಣ್ ಅವರು ಮೈಸೂರು ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದವರು. 40 ವರ್ಷಗಳ ಸುದೀರ್ಘ ಅನುಭವವನ್ನು ಬ್ಯಾಂಕಿಂಗ್ ರಂಗ ಹಾಗೂ ಹಣಕಾಸು ವಲಯದಲ್ಲಿ ಹೊಂದಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್‌ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉಪ ವ್ಯವಸ್ಥಾಪಕ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ.
ನಿವೃತ್ತಿಯ ನಂತರ ಅವರು 2017ರಲ್ಲಿ ಅಲ್ಪಾವಧಿಗೆ ‘ಸೋಮಾ ಎಂಟರ್ ಪ್ರೈಸಸ್ ಲಿಮಿಟೆಡ್’ನ ಮಂಡಳಿಯಲ್ಲಿ ಎಸ್‍ಬಿಐನ ನಾಮನಿರ್ದೇಶಿತ ನಿರ್ದೇಶಕರಾಗಿದ್ದರು.
2016ರ ಬಿಎಫ್‌ಎಸ್‌ಐ ಸೆಕ್ಟರ್‌ನ ಬಿಟಿ–ಪಿಡ್ಲ್ಯುಸಿಯಿಂದ ಮಾನ್ಯತೆಗೊಂಡ ಭಾರತದ 40 ಶ್ರೇಷ್ಠ ಸಿಇಒಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಮಂಗಳೂರಿನ ಪ್ರಮುಖ ಮ್ಯಾನೇಜ್‍ಮೆಂಟ್ ಇನ್‌ಸ್ಟಿಟ್ಯೂಟ್ ಎಂಎಸ್‌ಎನ್‌ಐಎಂನ ಆಡಳಿತ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ಅದರ ಕರೆಸ್ಪಾಂಡೆಂಟ್ ಆಗಿ ನಾಮನಿರ್ದೇಶನಗೊಂಡಿದ್ದಾರೆ.
ಆಡಳಿತ ಮಂಡಳಿಯ ಸದಸ್ಯ ಹಾಗೂ ಕರೆಸ್ಪಾಂಡೆಂಟ್ ಈ ಎರಡೂ ಸ್ಥಾನಗಳಿಗೆ ವೇತನರಹಿತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಲ್ಮಂಜೆ ಗುರುರಾಜ ಆಚಾರ್ಯ ಅವರು ಬೆಂಗಳೂರಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು, 30 ವರ್ಷಗಳ ಅನುಭವ ಹೊಂದಿದ್ದಾರೆ. ಬಿಕಾಂ, ಸಿಎಂಎ, ಸಿಎ ಪರೀಕ್ಷೆಯಲ್ಲಿ ಉನ್ನತ ರ್‍ಯಾಂಕ್ ಪಡೆದಿದ್ದಾರೆ.
ಪ್ರಸ್ತುತ ‘ಕೆ.ಜಿ ಆಚಾರ್ಯ ಆಂಡ್ ಕೋ’ ಸಂಸ್ಥೆಯ ಮುಖ್ಯ ಪಾಲುದಾರರಾಗಿದ್ದಾರೆ ಹಾಗೂ ‘ಬೆಂಗಳೂರು- ಫೈನಾನ್ಶಿಯಲ್ ರಿಪೋರ್ಟಿಂಗ್ ರಿವ್ಯೂ ಗ್ರೂಪ್’ ಸದಸ್ಯರಾಗಿದ್ದಾರೆ.
ಈ ಹಿಂದೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್‌ನ ಆಡಳಿತ ಮಂಡಳಿಯಲ್ಲಿ ನಿರ್ದೇಶಕರಾಗಿದ್ದರು ಮತ್ತು ಲೆಕ್ಕ ಪರಿಶೋಧನಾ ಸಮಿತಿಯ ಅಧ್ಯಕ್ಷರೂ ಆಗಿದ್ದರು.
ರಿಸ್ಕ್ ಮ್ಯಾನೇಜ್ಮೆಂಟ್ ಕಮಿಟಿ, ನಾಮಿನೇಷನ್ ಕಮಿಟಿ, ರೆಮ್ಯುನರೇಷನ್ ಕಮಿಟಿ ಹಾಗೂ ಹೈವ್ಯಾಲ್ಯು ಫ್ರಾಡ್ ಕಮಿಟಿ ಗಳಲ್ಲಿ ಆಡಳಿತ ಮಂಡಳಿಯ ಸದಸ್ಯರಾಗಿದ್ದರು.
ಐಸಿಎಐ ನವದೆಹಲಿಯ ತಜ್ಞರ ಸಲಹಾ ಸಮಿತಿಯ ಸದಸ್ಯರೂ ಆಗಿದ್ದರು ಎಂದು ಕರ್ಣಾಟಕ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ದೇವದಾಸ್ ಉಡುಪ ತಿಳಿಸಿದ್ದಾರೆ.
ಮಂಗಳೂರು : ನಗರದ ಜೈಲಿನಲ್ಲಿ ಕೈದಿಗಳು ಜೈಲು ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹ*ಲ್ಲೆಗೆ ಯತ್ನಿಸಿದ ಘಟನೆ ನಡೆದಿದ್ದು, ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಜಿಲ್ಲಾ ಕಾರಾಗೃಹದ ‘ಎ’ ಬ್ಲಾಕ್‌ನ ಸೆಲ್‌ಗಳಲ್ಲಿ ನಿಷೇಧಿತ ವಸ್ತುಗಳಿರುವ ಶಂಕೆಯ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಜೈಲು ಸಿಬಂದಿ ತಪಾಸಣೆಗೆ ತೆರಳಿದ್ದರು. ಈ ವೇಳೆ ವಿಚಾರಣಾಧೀನ ಕೈದಿಗಳು ಬೆದರಿಕೆಯೊಡ್ಡಿ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಜೈಲಿನಲ್ಲಿ ಮೊಬೈಲ್, ಗಾಂಜಾ ಮೊದಲಾದ ನಿಷೇಧಿತ ವಸ್ತುಗಳಿರುವ ಶಂಕೆಯಿಂದ ಜೈಲು ಅಧೀಕ್ಷಕ ಎಂ.ಎಚ್.ಆಶೇಖಾನ್ ನೇತೃತ್ವದಲ್ಲಿ ತಪಾಸಣೆಗೆ ಮುಂದಾಗಿದ್ದರು. ಆಗ ಪಾತ್ರೆ ಮತ್ತಿತರ ವಸ್ತುಗಳಿಂದ ವಿಚಾರಣಾ ಕೈದಿಗಳು ಹಲ್ಲೆಗೆ ಮುಂದಾಗಿದ್ದಾರೆ. ಅಲ್ಲದೆ ಅ*ವಾಚ್ಯ ಶಬ್ದಗಳಿಂದ ಬೈ*ದು ಬೆದರಿಕೆ ಒಡ್ಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಬರ್ಕೆ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಮಂಗಳೂರು/ಕಣ್ಣೂರು : ಮಂಗಳೂರಿನ ಖಾಸಗಿ ಆಸ್ಪತ್ರೆಯ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರನ್ನು ಮನೆಗೆ ಕರೆದುಕೊಂಡು ಹೋಗುವ ವೇಳೆ ಮೃ*ತಪಟ್ಟರೆಂದು ಭಾವಿಸಿ ಕುಟುಂಬ ಸದಸ್ಯರು ಶ*ವಾಗಾರಕ್ಕೆ ಸ್ಥಳಾಂತರಿಸುತ್ತಿದ್ದಂತೆ ಬದುಕುಳಿದ ವಿಚಿತ್ರ ಘಟನೆ ಕಣ್ಣೂರಿನ ಎಕೆಜಿ ಸಹಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಮಂಗಳೂರಿನ ಖಾಸಗಿ ಆಸ್ಪತ್ರೆಯ ವೆಂಟಿಲೇಟರ್ ನಲ್ಲಿದ್ದ ಕೂತುಪರಂಬ್ ಪಾಚ್ಚಪೋಯ್ಕ ಮಹಿಳಾ ಬ್ಯಾಂಕ್ ಬಳಿಯ ವೆಳ್ಳುವಕಂಡಿ ಪವಿತ್ರನ್ (67) ನಿಧನರಾದರೆಂದೂ ಭಾವಿಸಿ ಸೋಮವಾರ ರಾತ್ರಿ ಕಣ್ಣೂರಿನ ಎಕೆಜಿ ಸಹಕಾರಿ ಆಸ್ಪತ್ರೆಯ ಶವಗಾರಕ್ಕೆ ಕರೆದೊಯ್ಯಲಾಗಿತ್ತು.
ಅಂಬ್ಯುಲೆನ್ಸ್ ನಿಂದ ಶವಾಗಾರಕ್ಕೆ ಸ್ಥಳಾಂತರಿಸುವಾಗ ಪವಿತ್ರನ್ ತನ್ನ ಕೈ ಹಿಡಿದಿರುವುದಾಗಿ ಅಲ್ಲಿನ ಸಹಾಯಕ ತಿಳಿಸಿದ್ದಾರೆ. ತಕ್ಷಣವೇ ವೈದ್ಯರಿಗೆ ಮಾಹಿತಿ ನೀಡಲಾಗಿದೆ.
ಉಸಿರಾಟದ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯ ವೆಂಟಿಲೇಟರ್ ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆರೋಗ್ಯದಲ್ಲಿ ಯಾವುದೇ ಸುಧಾರಣೆಯಾಗದ ಕಾರಣ, ಪವಿತ್ರನ್ ಅವರನ್ನು ಸೋಮವಾರ ರಾತ್ರಿ ಕಣ್ಣೂರಿನ ಮನೆಗೆ ಕೊಂಡೊಯ್ಯಲು ನಿರ್ಧರಿಸಲಾಗಿತ್ತು.
ವೆಂಟಿಲೇಟರ್ ನಿಂದ ಹೊರ ತೆಗೆದರೆ, ಜೀವ ಉಳಿಯದು ಎಂದು ವೈದ್ಯರು ತಿಳಿಸಿದ್ದರು. ಆದರೆ, ಸಂಬಂಧಿಕರು ವೆಂಟಿಲೇಟರ್ ನಿಂದ ಹೊರ ತೆಗೆದು ಮನೆಗೆ ಕರೆದೊಯ್ಯಲು ನಿರ್ಧರಿಸಿದ್ದರು. ಕಣ್ಣೂರು ತಲುಪಿದಾಗ ಅವರು ಮೃ*ತಪಟ್ಟರೆಂದು ಭಾವಿಸಿ ಶ*ವಾಗಾರಕ್ಕೆ ತಲುಪಿಸಲಾಗಿತ್ತು.
ಆದರೆ, ಪವಿತ್ರನ್ ತನ್ನ ಕೈ ಹಿಡಿದಿರುವುದಾಗಿ ಅಲ್ಲಿನ ಸಹಾಯಕ ತಿಳಿಸಿದ್ದರಿಂದ, ತಕ್ಷಣವೇ ವೈದ್ಯರಿಗೆ ಮಾಹಿತಿ ನೀಡಿದರು. ಪ್ರಸ್ತುತ ಎಕೆಜಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ನಿನ್ನೆ ಸಂಜೆ ಮತ್ತು ರಾತ್ರಿ ಮಳೆಯಾಗಿದ್ದು, ಕೆಲವೆಡೆ ಮಳೆಗಾಲದಂತೆ ಜೋರಾಗಿ ಮಳೆಯಾಗಿದೆ.
ಬೆಳ್ತಂಗಡಿ,ಸುಳ್ಯ ತಾಲೂಕಿನಲ್ಲಿ ಮಳೆಯಿಂದಾಗಿ ರೈತರು ಒಣ ಹಾಕಿದ್ದ ಅಡಿಕೆಗಳು ಒದ್ದೆಯಾಗಿ ನಷ್ಟ ಉಂಟಾಗಿದೆ. ಬಂಟ್ವಾಳದಲ್ಲಿ ಸಾಧಾರಣ ಮಳೆಯಾಗಿದ್ದು, ಮೆಲ್ಕಾರಿನಲ್ಲಿ ನಡೆಯುತ್ತಿದ್ದ ಕಟೀಲು ಯಕ್ಷಗಾನ ಬಯಲಾಟ ವೀಕ್ಷಣೆ ಮಾಡುತ್ತಿದ್ದವರು ಎದ್ದು ಮಳೆಯಿಂದ ರಕ್ಷಣೆ ಪಡೆದುಕೊಂಡಿದ್ದಾರೆ.
ಮಂಗಳೂರು ಸುತ್ತಮುತ್ತ ಕೂಡಾ ಮಳೆಯಾಗಿದ್ದು ,ಉಳ್ಳಾಲದಲ್ಲಿ ಅರ್ಧಗಂಟೆಗೂ ಅಧಿಕ ಕಾಲ ಮಳೆ ಸುರಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮಧ್ಯ ಪಾಕಿಸ್ತಾನ ಮತ್ತು ಪಶ್ಚಿಮ ರಾಜಸ್ಥಾನದಲ್ಲಿ ಉಂಟಾದ ಹವಾಮಾನ ವೈಪರೀತ್ಯದಿಂದ ಈಶಾನ್ಯ ಅರೇಬಿಯನ್ ಸಮುದ್ರದಿಂದ ಪಶ್ಚಿಮ ಮಾರುತ ಬೀಸುತ್ತಿರುವುದು ಈ ಮಳೆಗೆ ಕಾರಣ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.