ಮಂಗಳೂರು/ವಿಜಯನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮಹತ್ವದ ಯೋಜನೆಯಾಗಿ ‘ಪಂಚ ಗ್ಯಾರಂಟಿ’ ಜಾರಿತಲ್ಲಿದೆ. ಐದು ಗ್ಯಾರಂಟಿಗಳಲ್ಲಿ ಎರಡನ್ನು ಕೈ ಬಿಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನಿಗೆ ಕಾಂಗ್ರೆಸ್ ಪಕ್ಷದ ಶಾಸಕ ಗವಿಯಪ್ಪ ಮನವಿ ಮಾಡಿದ್ದಾರೆ.
ಹೊಸಪೇಟೆಯ ಇಪ್ಪಿತೇರಿ ಮಾಗಾಣಿಯಲ್ಲಿ ನಡೆದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಗ್ಯಾರಂಟಿಗಳಿಂದ ಆಶ್ರಯ ಮನೆಗಳು ಬರುತ್ತಿಲ್ಲ. ಶಕ್ತಿ ಯೋಜನೆ ಸೇರಿದಂತೆ ಇನ್ನೆರೆಡು ಗ್ಯಾರಂಟಿಗಳು ಕಡಿಮೆ ಮಾಡಲು ಮುಖ್ಯಮಂತ್ರಿಗಳಿಗೆ ಹೇಳುತ್ತೇವೆ. ಅವರೇನು ತೀರ್ಮಾನ ಮಾಡುತ್ತಾರೆ ನೋಡೋಣ” ಎಂದು ಹೇಳಿದರು.
ಸರ್ಕಾರದಿಂದ ಯಾವುದೇ ಅನುದಾನ ಬರುತ್ತಿಲ್ಲ :
“ನಮ್ಮ ಕ್ಷೇತ್ರಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಬರುತ್ತಿಲ್ಲ ಎಂದು ಶಾಸಕ ಗವಿಯಪ್ಪ ಹೇಳಿದ್ದರು. ಇದಕ್ಕೆ ಸ್ಥಳೀಯ ಕಾಂಗ್ರೆಸ್ ಮುಖಂಡರೇ ಶಾಸಕರ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಶಾಸಕ ಹೆಚ್ಆರ್ ಗವಿಯಪ್ಪ ಹೊಸಪೇಟೆ ಪಾಲಿಗೆ ಶಾಪವಾಗಿದ್ದಾರೆ ಎಂದು ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ ಕಿಡಿಕಾರಿದ್ದರು. ವಿಜಯನಗರ ಕ್ಷೇತ್ರಕ್ಕೆ ಅಂದಾಜು 150 ಕೋಟಿ ರೂಪಾಯಿ ಅನುದಾನ ಬಂದರೂ ಶಾಸಕ ಗವಿಯಪ್ಪ ಸುಳ್ಳು ಹೇಳುತ್ತಾರೆ” ಎಂದು ಇಮಾಮ್ ನಿಯಾಜಿ ಅಸಮಾಧಾನ ಹೊರಹಾಕಿದ್ದರು.
ಐದು ಗ್ಯಾರಂಟಿಗಳನ್ನು ಸಮರ್ಪಕವಾಗಿ ನೀಡಲು ಸರ್ಕಾರದ ಬಳಿ ಹಣವಿಲ್ಲ ಎಂದು ವಿಪಕ್ಷಗಳು ಆರೋಪ ಮಾಡುತ್ತಿರುವ ನಡುವೆಯೇ ಸ್ವತಃ ಕಾಂಗ್ರೆಸ್ ಪಕ್ಷದ ಶಾಸಕರ ಈ ಹೇಳಿಕೆಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಬೆಂಗಳೂರು: ಬಿಪಿಎಲ್ ಕಾರ್ಡ್ ರದ್ದಾದ ಅರ್ಹ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಸಮಾಧಾನಕರ ಸುದ್ದಿ ನೀಡಿದೆ. ಬಿಪಿಎಲ್ ಕಾರ್ಡ್ ಸಮಸ್ಯೆ ಪರಿಹಾರಕ್ಕೆ ಆಹಾರ ಇಲಾಖೆ ಅಧಿಕಾರಿಗಳಿಗೆ ಹೊಸ ಡೆಡ್ ಲೈನ್ ನೀಡಿದೆ. ಇದೇ ನವೆಂಬರ್ 28ರವರೆಗೆ ಸರಿಪಡಿಸಲು ಸಮಯಾವಕಾಶವನ್ನು ಆಹಾರ ಸಚಿವ ಮುನಿಯಪ್ಪ ನೀಡಿದ್ದಾರೆ.
ಅರ್ಹರಾಗಿದ್ದು ಬಿಪಿಎಲ್ ಕಾರ್ಡ್ ವಂಚಿತರಾದವರು ಚಿಂತೆ ಮಾಡಬೇಕಾಗಿಲ್ಲ. ಇನ್ನೂ 3 ದಿನದೊಳಗಡೆ ಪಡಿತರ ಪಡೆಯಬಹುದು ಎಂದು ಆಹಾರ ಸಚಿವರು ಹೇಳಿದ್ದಾರೆ. ಪರಿಶೀಲನೆ ಮಾಡಿ ಅರ್ಹರಿಗೆ ಬಿಪಿಎಲ್ ಕಾರ್ಡ್ ವಾಪಸ್ ಆಗಲಿದೆ. ನವೆಂಬರ್ 28ರೊಳಗೆ ಸಮಸ್ಯೆಗೆ ಪರಿಹಾರ ಕೊಡಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಬಿಪಿಎಲ್ ಕಾರ್ಡ್ಗಳ ಗೊಂದಲ ನಿವಾರಣೆ ಆಗಿದೆ. ಒಂದು ವಾರದಲ್ಲಿ ಗೊಂದಲ ಪರಿಹರಿಸುವುದಾಗಿ ಹೇಳಿದ್ದೆ. ನವೆಂಬರ್ 28 ರ ನಂತರ ಹಿಂದಿನಂತೆ ಬಿಪಿಎಲ್ ಕಾರ್ಡ್‌ನವರು ಪಡಿತರ ಪಡೆಯಬಹುದು. ಬಿಪಿಎಲ್ ಕಾಡ್೯ ಪರಿಷ್ಕರಣೆಯಲ್ಲಿ ನಾವು ಕೇಂದ್ರ ಸರ್ಕಾರದ ಮಾನದಂಡಗಳು ಅನುಸರಿಸಿದ್ದೇವೆ ಹೊರತು ಯಾವುದೇ ಅವೈಜ್ಞಾನಿಕ ಕ್ರಮ ಅನುಸರಿಸಿಲ್ಲ ಎಂದಿದ್ದಾರೆ.
ಸುಬ್ರಹ್ಮಣ್ಯ : ರೈಲ್ವೇ ಇಲಾಖೆಯ ವಸತಿ ನಿಲಯದ ರಿಪೇರಿ ಹೆಸರಿನಲ್ಲಿ ಪ್ರತಿ ವರ್ಷ ಹಣ ಪೋಲು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಸುಬ್ರಹ್ಮಣ್ಯ ರೋಡ್ ರೈಲ್ವೇ ವಸತಿ ನಿಲಯ ಹಳೆಯ ಕಟ್ಟಡವಾಗಿದ್ದು, ಇದಕ್ಕೆ ಈ ರೀತಿ ಪ್ರತಿ ವರ್ಷ ಹೊಸ ಶೀಟ್ ಅಳವಡಿಸಲಾಗುತ್ತಿದೆ. ಪ್ರತಿ ವರ್ಷ ಶೀಟ್ ಹಾಳಾಗದೇ ಇದ್ರೂ ಅದನ್ನು ಪುಡಿ ಮಾಡಿ ಮತ್ತೆ ಹೊಸ ಟೆಂಡರ್ ಕರೆಯಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದೊಂದು ಅಧಿಕಾರಿಗಳ ಹಣ ಮಾಡುವ ಹುನ್ನಾರವಾಗಿದ್ದು, ಇದನ್ನು ಯಾರೂ ಪ್ರಶ್ನೆ ಮಾಡುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಕಳೆದ ವರ್ಷ ಹಾಕಿದ್ದ ಸಿಮೆಂಟ್ ಶೀಟ್ ಹಾಳಾಗದೇ ಇದ್ರೂ ಈ ಬಾರಿ ಮತ್ತೆ ಹೊಸ ಟೆಂಡರ್ ಕರೆಯಲಾಗಿದೆ. ಹಳೆಯ ಸಿಮೆಂಟ್ ಶೀಟ್ ಸರಿಯಾಗಿದ್ದರೂ ಅದನ್ನು ಪುಡಿ ಮಾಡಲಾಗುತ್ತಿದೆ. ಈ ಕುರಿತು, ರೈಲ್ವೇ ಇಲಾಖೆ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಮಂಗಳೂರು/ಬೆಂಗಳೂರು : ಸಾಮಾನ್ಯವಾಗಿ ಪಬ್ ಎಂದ ಮೇಲೆ ಹುಡಗ ಹುಡುಗಿಯರು ಸ್ನೇಹಿತರು, ಗರ್ಲ್‌ಫ್ರೆಂಡ್ ಬಾಯ್‌ಫ್ರೆಂಡ್‌ಗಳೇ ತುಂಬಿರುತ್ತಾರೆ. ಕೆಲವೊಂದು ಪಬ್‌ಗಳಲ್ಲಿ ಹುಡುಗಿ ಜೊತೆ ಬಂದ್ರೆ ಹುಡುಗರಿಗೆ ಫ್ರಿ ಎಂಟ್ರಿ ನೀಡುತ್ತವೆ. ಆದರೆ ಕೇವಲ ಹುಡುಗಿಯರಿಗೆ ಮಾತ್ರ ಪ್ರವೇಶ ಇರುವ ಪಬ್ ಇದೆ ಎಂದರೆ ಅದು ಆಶ್ಚರ್ಯವೇ ಸರಿ.
ಬೆಂಗಳೂರಿನ ಒಂದು ಪಬ್‌ನಲ್ಲಿ ಮಹಿಳೆಯರೇ ಮಹಿಳೆಯರಿಗಾಗಿ ನಡೆಸುತ್ತಿದ್ದು, ಮಹಿಳೆಯರಿಗೆ ಮಾತ್ರ ಅವಕಾಶ ಕಲ್ಪಿಸಿಕೊಟ್ಟಿದೆ. ಅಲ್ಲಿ ಪುರುಷರಿಗೆ ನೋ ಎಂಟ್ರಿ. ಒಳಗಿರುವ ಸಿಬ್ಬಂದಿ ಕೂಡ ಮಹಿಳೆಯರೇ ಆಗಿದ್ದಾರೆ. ಕೇವಲ ಮಹಿಳೆಯರಿಗೆ ಮಾತ್ರ ಎಂಟ್ರಿ ಕೊಡುವ ಇಂತಹ ಪರಿಕಲ್ಪನೆಯ ಪಬ್ ಬೆಂಗಳೂರಿನಲ್ಲಿ ಮಾತ್ರವಲ್ಲ, ದೇಶದಲ್ಲೇ ಮೊದಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಪಬ್ ಇರುವುದು ಬೆಂಗಳೂರಿನ ಬನ್ನೆರುಘಟ್ಟದಲ್ಲಿ ‘ಮಿಸ್ & ಮಿಸೆಸ್’ ಎಂಬ ಹೆಸರನ್ನಿಟ್ಟಿದ್ದು, ಕೇವಲ ಮಹಿಳೆಯರು ಹಾಗೂ ನವ ತರುಣಿಯರಿಗೆ ಮಾತ್ರ ಅವಕಾಶವಿದೆ. ಎಲ್ಲಾ ಮಾಮೂಲಿ ಪಬ್‌ಗಳಂತೆ ಇಲ್ಲಿಯೂ ಮಹಿಳೆಯರು ತಮ್ಮಗಿಷ್ಟ ಬಂದ ಆಹಾರ ಸೇವಿಸಬಹುದು, ಮದ್ಯ/ಪಾನ ಪ್ರಿಯರಾಗಿದ್ದಲ್ಲಿ ಇಷ್ಟವಾಗಿರುವ ಡ್ರಿಂಕ್ಸನ್ನು ಆರ್ಡರ್ ಮಾಡಿ ಎಂಜಾಯ್ ಮಾಡಬಹುದು. ಆದರೆ ಪುರುಷರಿಗೆ ಮಾತ್ರ ಪ್ರವೇಶವಿಲ್ಲ,
‘ಕರ್ಲಿ ಟೇಲ್ಸ್’ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವಿಷಯ ಕುರಿತು ಮಾಹಿತಿ ಹಂಚಿಕೊಂಡಿದ್ದು, ಪಬ್‌ನಲ್ಲಿ ಏನೆಲ್ಲಾ ಸೌಲಭ್ಯಗಳಿವೆ ಎಂಬುದನ್ನು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ವಿವರಿಸಿದ್ದಾರೆ. ‘300 ರೂಪಾಯಿಗಳಿಗೆ ನಿಮಗೆ ಇಲ್ಲಿ ನಿಮಗೆ 2 ಗಂಟೆಯವರೆಗೆ ಅನ್‌ಲಿಮಿಟೆಡ್ ಆಹಾರ ಹಾಗೂ ಕುಡಿಯಲು ವೈನ್ ಸಿಗಲಿದೆ. ಅಲ್ಲದೇ ನೀವು ನಿಮ್ಮ ಉಗುರಿಗೆ ನೇಲ್ ಆರ್ಟ್ ಕೂಡ ಮಾಡಬಹುದು. ಈ ನೇಲ್ ಆರ್ಟ್‌ಗೆ ಮಾತ್ರ ಚಾರ್ಜ್ ಮಾಡಲಾಗುತ್ತದೆ. ಇದು ನಿಮಗೆ ಅಗತ್ಯವಿದ್ದಲ್ಲಿ ಮಾತ್ರ ಮಾಡಿಸಿಕೊಳ್ಳಬಹುದಾಗಿದೆ. ಇದರ ಜೊತೆಗೆ ನೀವು ಇಲ್ಲಿ ವೈನ್ ಕುಡಿಯುತ್ತಾ ಫಿಸ್ ಪ್ರೈಸ್ ಅಥವಾ ಇನ್ಯಾವುದೇ ವೆಜ್ ಅಥವಾ ನಾನ್‌ವೆಜ್ ಸ್ನ್ಯಾಕ್ಸ್ ತಿನ್ನುತ್ತಾ ನಿಮ್ಮ ಉಗುರುಗಳ ಬ್ಯೂಟಿ ಕೇರ್ ಮಾಡಬಹುದಾಗಿದೆ’ ಎಂದಿದ್ದಾರೆ.
‘ಇದು ಮಹಿಳೆಯರಿಗೆ ಸರಿಯಾದ ಸ್ಥಳ, ಒಳ್ಳೆಯ ಆಹಾರ, ಡ್ರಿಂಕ್ಸ್, ನೇಲ್ ಸಲೂನ್ ಹಾಗೂ ಹುಡುಗರಿಗೆ ಎಂಟ್ರಿ ಇಲ್ಲದಿರುವುದು ಈ ಕ್ಲಬ್‌ನ ವಿಶೇಷ’ ಎಂದು ವಿವರ ನೀಡಲಾಗಿದೆ. ಅನೇಕರು ಈ ಪಬ್ ಬಗ್ಗೆ ಖುಷಿ ವ್ಯಕ್ತಪಡಿಸಿದ್ದು ಕಾಮೆಂಟ್ ಮಾಡಿದ್ದಾರೆ. ‘ನಾನು ಈ ಪಬ್‌ಗೆ ಹೋಗ್ಬೇಕು ಕನಿಷ್ಟ ಗುರಾಯಿಸುವವರಿಂದ ಮುಕ್ತಿ ಸಿಗುವುದು’ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ಮತ್ತೊಬ್ಬ ‘ಬಿಲ್ ಯಾರು ಪೇ ಮಾಡ್ತಾರೆ’ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಆತನಿಗೆ ಮಹಿಳೆಯರು ಕ್ಲಾಸ್ ತೆಗೆದುಕೊಂಡಿದ್ದು, ‘ನೀವಿನ್ನೂ 90ರ ದಶಕದಲ್ಲಿ ಜೀವನ ಮಾಡ್ತಿದ್ದಂಗೆ ಕಾಣ್ತಿದೆ’ ಎಂದು ಎದುರುತ್ತರ ನೀಡಿದ್ದಾರೆ. ಹಾಗೆಯೇ ಮತ್ತೆ ಕೆಲವರು ತಾವು ಅಲ್ಲಿಗೆ ಹೋಗಿದ್ದಾಗಿ ಹೇಳಿಕೊಂಡಿದ್ದು, ‘ಹೆಣ್ಣು ಮಕ್ಕಳಿಗೆ ಒಳ್ಳೆಯ ಸ್ಥಳ’ ಎಂದು ಕಾಮೆಂಟ್ ಮಾಡಿದ್ದಾರೆ. ‘ಇನ್ನಾದರೂ ಪುರುಷರು ತಮಗಿಷ್ಟ ಬಂದಂತೆ ಆರಾಮವಾಗಿ ಕುಡಿದು ನೆಮ್ಮದಿಯಾಗಿ ಇರಬಹುದು’ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.