ಬೆಂಗಳೂರು: ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಅನರ್ಹ ಫಲಾನುಭವಿಗಳಿಗೆ ಬಿಗ್ ಶಾಕ್ ನೀಡಿದ್ದು, ಇನ್ಮುಂದೆ ಅನರ್ಹ 1.70 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಖಾತೆಗೆ ಬರುವುದಿಲ್ಲ.
ಹೌದು, ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಕೂಡ ಒಂದು.
ಸದ್ಯ ಈ ಯೋಜನೆಯಲ್ಲಿ ಕೆಲ ನಿಯಮಗಳನ್ನು ಸರ್ಕಾರ ಬಿಗಿಗೊಳಿಸಲು ಮುಂದಾಗಿದೆ. ಈ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದು, 1.70 ಲಕ್ಷ ಅನರ್ಹ ಫಲಾನುಭವಿಗಳನ್ನು ಪತ್ತೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇವರು ಯೋಜನೆಯ ಮಾನದಂಡಗಳನ್ನು ಹೊಂದಿಲ್ಲವಾದ್ದರಿಂದ ಯೋಜನೆಗೆ ಅನರ್ಹರಾಗಿದ್ದಾರೆ. ಇವರ ಖಾತೆಗೆ 2 ಸಾವಿರ ರೂಪಾಯಿ ಜಮೆಯಾಗುವುದಿಲ್ಲ. ಇನ್ನುಳಿದಂತೆ ಇತರರಿಗೆ ಯೋಜನೆಯ ಪ್ರಯೋಜನ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ಬೆಳಗಾವಿ: ಮದುವೆ ಮಂಟಪದಿಂದ ಫೋಟೊಗ್ರಾಫರ್ ಕಿಡ್ನ್ಯಾಪ್ ಮಾಡಿ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ಕೆಪಿಟಿಸಿಎಲ್ ಕಲ್ಯಾಣ ಮಂಟಪದಲ್ಲಿ ಘಟನೆ ನಡೆದಿದ್ದು, ಫೋಟೊಗ್ರಾಫರ್ ಕಿಡ್ನ್ಯಾಪ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಫೋಟೋಗ್ರಾಫರ್ ಉಮೇಶ್ ಹೊಸೂರು ಎಂಬುವವರು ಅಪಹರಣವಾಗಿ ಹಲ್ಲೆಗೊಳಗಾದ ವ್ಯಕ್ತಿ ಎಂದು ತಿಳಿದುಬಂದಿದೆ. ನಾಲ್ಕು ದಿನಗಳ ಹಿಂದೆ ಮದುವೆ ಆರ್ಡರ್ ಬೆಳಗಾವಿ ನಗರಕ್ಕೆ ಬಂದಿದ್ದರು. ಕಿಡ್ನಾಪ್ ಮಾಡಿ ಕಾರು ನಿಲ್ಲಿಸಿ ರಾಡ್ನಿಂದ ಹಲ್ಲೆ ಮಾಡಿ ಬಿಟ್ಟು ಹೋಗಿದ್ದಾರೆ. ಬೈಲಹೊಂಗಲ ಖಾಸಗಿ ಆಸ್ಪತ್ರೆಯಲ್ಲಿ ಫೋಟೋಗ್ರಾಫರ್ ಉಮೇಶ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೇಸ್ ದಾಖಲಾಗ್ತಿದ್ದಂತೆ ಇಬ್ಬರು ಮಹಿಳೆಯರು ಸೇರಿ ಎಂಟು ಜನರನ್ನು ಬಂಧಿಸಲಾಗಿದೆ. ವೃತ್ತಿ ವೈಷಮ್ಯದಿಂದ ಹಲ್ಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳಾದ ವಿಕ್ಕಿ, ಪ್ರವೀಣ್ ಉಮರಾಣಿ, ಬಸವರಾಜ ನರಟ್ಟಿ ಸೇರಿ ಎಂಟು ಜನರ ಬಂಧನವಾಗಿದೆ.
ಉಡುಪಿ: ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆಯಲು ನಾನಾ ಕಡೆಗಳಿಂದ ಭಕ್ತರು ಆಗಮಿಸುತ್ತಾರೆ. ಕೇವಲ ಸಾಮಾನ್ಯರು ಮಾತ್ರವಲ್ಲದೆ, ಸೆಲೆಬ್ರಿಟಿಗಳು ಕೂಡ ಇಲ್ಲಿಗೆ ಆಗಮಿಸಿ ದರ್ಶನ ಪಡೆಯುತ್ತಾರೆ. ಕಾಲಿವುಡ್ ನ ಸ್ಟಾರ್ ನಟ ಸೂರ್ಯ ದಂಪತಿ ಕೊಲ್ಲೂರಿನ ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಬಳಿಕ ದೇವಾಲಯದಲ್ಲಿ ನಡೆದ ಚಂಡಿಕಾಯಾಗದಲ್ಲಿ ಪತ್ನಿ ನಟಿ ಜ್ಯೋತಿಕಾ ಜೊತೆ ಭಾಗಿಯಾದರು. ನಿನ್ನೆ ರಾತ್ರಿ ಕೊಲ್ಲೂರಿಗೆ ಆಗಮಿಸಿದ ಕಾಲಿವುಡ್ ದಂಪತಿ ಇಂದು ಪೂರ್ಣಾಹುತಿಯಲ್ಲಿ ಭಾಗಿಯಾದರು.
ನಟ ಸೂರ್ಯ ಹಾಗೂ ಜ್ಯೋತಿಕಾ ಸೆಲೆಬ್ರಿಟಿ ದಂಪತಿಯನ್ನು ನೋಡಲು ಅಭಿಮಾನಿಗಳು ಮುಗಿ ಬಿದ್ದಿದ್ದರು. ಕರ್ನಾಟಕದಲ್ಲೂ ಸಹ ಸೂರ್ಯ ಹಾಗೂ ಜ್ಯೋತಿಕಾಗೆ ಸಾಕಷ್ಟು ಅಭಿಮಾನಿಗಳಿದ್ದಾರೆ.
ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಸಂಭ್ರಮವು ಇಂದಿನಿಂದ ಆರಂಭಗೊಳ್ಳಲಿದೆ. ಬೆಳಿಗ್ಗೆ 10.30 ಗಂಟೆಗೆ ಎಸ್ ಪಿ ಯತೀಶ್ ಎನ್. ಧರ್ಮಸ್ಥಳ ಪ್ರೌಢಶಾಲಾ ವಠಾರದಲ್ಲಿ ರಾಜ್ಯಮಟ್ಟದ ವಸ್ತು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.
ಧರ್ಮಸ್ಥಳದಲ್ಲಿ ನ. 26ರಂದು ಹೊಸ ಕಟ್ಟೆ ಉತ್ಸವ, 27ರಂದು ಕೆರೆಕಟ್ಟೆ ಉತ್ಸವ, 28ರಂದು ಲಲಿತೋದ್ಯಾನ ಉತ್ಸವ, 29ರಂದು ಕಂಚಿ ಮಾರುಕಟ್ಟೆ ಉತ್ಸವ, 30ರಂದು ಗೌರಿ ಮಾರುಕಟ್ಟೆ ಉತ್ಸವ (ಲಕ್ಷದೀಪೋತ್ಸವ) ನಡೆಯಲಿದೆ.
ಡಿ.1ರಂದು ಸಂಜೆ 6.30ಕ್ಕೆ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣಪೂಜೆ ನಡೆಯಲಿದೆ. ನ. 28 ರಂದು ಅಮೃತವರ್ಷಿಣಿ ಸಭಾಭವನದಲ್ಲಿ ಸಂಜೆ 5:30 ರಿಂದ ನಾಗಸ್ವರ ವಾದನ, 7 ಗಂಟೆಯಿಂದ ಸಾತ್ವಿಕ ಸಂಗೀತ, ನೃತ್ಯಾರ್ಚನೆ, ನೃತ್ಯ ರೂಪಕ ಇತ್ಯಾದಿ ಕಾರ್ಯಕ್ರಮಗಳು ಜರುಗಲಿವೆ.
ಸರ್ವಧರ್ಮ ಸಮ್ಮೇಳನ
ಅಮೃತವರ್ಷಿಣಿ ಸಭಾಭವನದಲ್ಲಿ ನ. 29ರಂದು ಸಂಜೆ 5ಗಂಟೆಯಿಂದ ಸರ್ವ ಧರ್ಮ ಸಮ್ಮೇಳನದ 92ನೇ ಅಧಿವೇಶನ ನಡೆಯಲಿದ್ದು ರಾಜ್ಯ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಉದ್ಘಾಟಿಸುವರು. ಬೆಂಗಳೂರು ರಾಜರಾಜೇಶ್ವರಿ ನಗರದ ಶ್ರೀ ಕೈಲಾಸ ಆಶ್ರಮ ಮಹಾ ಸಂಸ್ಥಾನದ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಸಂಶೋಧಕ ಡಾ. ಜಿ. ಬಿ. ಹರೀಶ, ಡಾಕ್ಟರ್ ಜೋಸೆಫ್ ಎನ್ ಎಂ, ಮೆಹತಾಬ ಇಬ್ರಾಹಿಂ ಸಾಬ ಕಾಗವಾಡ ಅವರಿಂದ ಉಪನ್ಯಾಸ ಬಳಿಕ ಭರತನಾಟ್ಯ ಕಾರ್ಯಕ್ರಮ ಇರಲಿದೆ.
ಸಾಹಿತ್ಯ ಸಮ್ಮೇಳನ
ನ. 30ರಂದು ಸಂಜೆ 5 ಗಂಟೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನದ 92ನೇ ಅಧಿವೇಶನ ನಡೆಯಲಿದ್ದು, ಬೆಂಗಳೂರು ಬಹುಶ್ರುತ ವಿದ್ವಾಂಸ ಶತಾವಧಾನಿ ಡಾ.ರಾ. ಗಣೇಶ ಉದ್ಘಾಟಿಸುವರು. ಲೇಖಕ ಸಂಶೋಧಕ ಡಾ. ಪಾದೆಕಲ್ಲು ವಿಷ್ಣುಭಟ್ಟ ಅಧ್ಯಕ್ಷತೆ ವಹಿಸುವರು. ಬಳಿಕ ಡಾ. ಪ್ರಮೀಳಾ ಮಾಧವ, ಡಾ.ಬಿ.ವಿ. ವಸಂತ ಕುಮಾರ್ ಪ್ರೊ. ಮೊರಬದ ಮಲ್ಲಿಕಾರ್ಜುನ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8.30 ರಿಂದ ರಾಜೇಶ್ ಕೃಷ್ಣನ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮವಿದೆ. ಪ್ರತಿದಿನ ಸಂಜೆ 6:30 ರಿಂದ ರಾತ್ರಿ 11 ಗಂಟೆವರೆಗೆ ವಸ್ತು ಪ್ರದರ್ಶನ ಮಂಟಪ ಹಾಗೂ ಅಮೃತವರ್ಷಿಣಿ ವೇದಿಕೆಯಲ್ಲಿ ಸಾಂಸ್ಕೃತಿಕ, ಸಂಗೀತ ಹಬ್ಬ ನಡೆಯಲಿದೆ.