ಉಡುಪಿ: ಇಂದಿರಾಗಾಂಧಿ- ದೇವರಾಜ ಅರಸು ಉಳುವವನೇ ಭೂಮಿಯ ಒಡೆಯ ಎಂದಿದ್ದರು. ಆದರೆ ಈಗ ಉಳ್ಳವನೇ ಭೂಮಿಯ ಒಡೆಯನಾಗಿದ್ದಾನೆ. ಭೂಮಸೂದೆ ಕಾಯ್ದೆ ಜಾರಿಗೆ ಬಂದಮೇಲೆ ಕರಾವಳಿಯಲ್ಲೂ ಸಾವಿರಾರು ಜನರು ಭೂಮಿ ಒಡೆಯರಾದರು ಎಂದು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.
ಅವರು ಉಡುಪಿಯ ಹಿರಿಯಡ್ಕದಲ್ಲಿರುವ ಗಾಂಧೀ ಮೈದಾನದಲ್ಲಿ ಇಂದು ನಡೆದ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ “ಭೂ ಮಸೂದೆ ಕಾಯಿದೆಯ” ಸುವರ್ಣ ಮಹೋತ್ಸವ ಸಂಭ್ರಮದ ಉದ್ಘಾಟನೆ ನಡೆಸಿ ಮಾತನಾಡಿದರು.
ಕರ್ನಾಟಕದಲ್ಲಿ ದೇವರಾಜು ಅರಸು ಈ ಕಾನೂನು ಜಾರಿಗೆ ತಂದರು. ಇದು ಜಾರಿಗೆ ಬಂದಮೇಲೆ ಕರಾವಳಿಯಲ್ಲೂ ಸಾವಿರಾರು ಜನರು ಭೂಮಿ ಒಡೆಯರಾದರು. ರಾಜ್ಯದಲ್ಲಿ 6 ಲಕ್ಷ ಕುಟುಂಬಗಳು ಭೂಮಿ ಒಡೆಯರಾದರು. 1974ರ ಭೂಸುಧಾರಣಾ ಕಾಯಿದೆಯ ಪ್ರಕಾರ ಜಮೀನು ಹೊಂದಬೇಕಾದರೆ ಆದಾಯದ ಮಿತಿಯಿತ್ತು.
ಕೃಷಿಕರಲ್ಲದವರಿಗೆ ಭೂಮಿ ಪಡೆಯುವಂತಿರಲಿಲ್ಲ. ಜೊತೆಗೆ ಒಂದು ಕುಟುಂಬಕ್ಕೆ ಇಂತಿಷ್ಟೇ ಜಮೀನು ಎಂಬ ಮಿತಿ ಇತ್ತು. ಅಫಿದಾವಿತ್‌ನಲ್ಲಿ ತಪ್ಪು ಮಾಹಿತಿ ನೀಡಿದವರಿಗೆ ದಂಡಿಸುವ ನಿಯಮವಿತ್ತು. ಕೃಷಿಯೇತರರಿಗೆ ಜಮೀನು ವರ್ಗಾವಣೆ ಮಾಡಲು ತಡೆಯಿತ್ತು.
ಆದರೆ ಇಂದು ಅದನ್ನು ಬಿಜೆಪಿ ಸರ್ಕಾರ ರದ್ದು ಮಾಡಿದೆ. ಇಂದಿರಾಗಾಂಧಿ- ದೇವರಾಜ ಅರಸು ಉಳುವವನೇ ಭೂಮಿಯ ಒಡೆಯ ಎಂದಿದ್ದರು. ಆದರೆ ಈಗ ಉಳ್ಳವನೇ ಭೂಮಿಯ ಒಡೆಯನಾಗಿದ್ದಾನೆ ಇದು ಒಪ್ಪಿಗೆಯಾ? ಎಂದು ಪ್ರಶ್ನಿಸಿದ ಅವರು ಇದು ಒಪ್ಪಿಗೆಯಾಗದಿದ್ದಲ್ಲಿ ರದ್ದುಗೊಳಿಸಿದ ಸರ್ಕಾರವನ್ನು ಕಿತ್ತೊಗೆಯಿರಿ ಎಂದರು.
ಭಾರತದ ಸಂವಿಧಾನದ ಮೂಲ ತತ್ವ ಸಹಿಷ್ಣುತೆ ಮತ್ತು ಸಹಬಾಳ್ವೆ. ಈ ದೇಶದಲ್ಲಿ ಅಭಿವೃದ್ಧಿ ಕಾಣಬೇಕಾದರೆ ಶಾಂತಿ ಮುಖ್ಯ. ಇದು ಬಹುತ್ವದಿಂದ ಕೂಡಿದ ದೇಶ. ಈ ದೇಶ ವಿವಿಧತೆಯಲ್ಲಿ ಏಕತೆ ಹೊಂದಿದ ದೇಶ. ಇಂತಹ ದೇಶದಲ್ಲಿ ಅಭಿವೃದ್ಧಿ ಕಾಣಬೇಕಾದರೆ ದೇಶ ಶಾಂತಿ, ನೆಮ್ಮದಿಯಿಂದ ಇರಬೇಕು.
ಯಾವ ದೇಶದಲ್ಲಿ ಅಶಾಂತಿ, ಅಭದ್ರತೆ ಇರುತ್ತೆ ಅದು ಅಭಿವೃದ್ದಿ ಆಗಲು ಸಾಧ್ಯವಿಲ್ಲ. ಸಮಾಜದಲ್ಲಿ ಇರುವಂತಹ ತಾರತಮ್ಯವನ್ನು ಹೋಗಲಾಡಿಸುವಂತಹ ವ್ಯವಸ್ಥೆ ಇರಲಿ’ ಎಂದು ಅಭಿಪ್ರಾಯ ಪಟ್ಟರು.
ಪ್ರಸ್ತುತ ಅಧಿಕಾರದಲ್ಲಿರುವ ಸರ್ಕಾರದ ಬಗ್ಗೆ ಮಾತನಾಡಿದ ಅವರು ಸಂವಿಧಾನ ಬದ್ಧವಾಗಿ ಚುನಾಯಿತವಾದ ರೂಪಿತವಾದ ಸರ್ಕಾರ. ಹಾಗಂದ ಮೇಲೆ ಅಧಿಕಾರಕ್ಕೆ ಬಂದ ಮೇಲೆ ಸಂವಿಧಾನದ ಧ್ಯೇಯೋದ್ದೇಶಗಳನ್ನು ಈಡೇರಿಸುವುದು ಪ್ರತಿಯೊಬ್ಬ ನಾಗರಿಕ ಸಮುದಾಯದ ಕರ್ತವ್ಯ. ಭಾರತದಂತಹ ದೇಶ ಅಥವಾ ರಾಜ್ಯಗಳು ಪ್ರಗತಿ ಯಾಗಬೇಕಾದರೆ ಶಾಂತಿ, ಸುವ್ಯವಸ್ಥೆ ತುಂಬಾ ಮುಖ್ಯವಾದದ್ದು.
ವ್ಯವಸ್ಥೆ ಸರಿ ಇದ್ದರೆ ಮಾತ್ರ ನೆಮ್ಮದಿ ಕಾಣಲು ಸಾಧ್ಯ. ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶ. ಆದರೂ ಇನ್ನೂ ಕೂಡ ನಾವು ಸಾಮಾಜಿಕ, ಆರ್ಥಿಕವಾಗಿ ತುಂಬಾ ಹಿಂದುಳಿದಿದ್ದೇವೆ, ನಾವು 75ನೇ ಸ್ವಾತಂತ್ರ್ಯವನ್ನು ಆಚರಣೆ ಮಾಡುತ್ತಿದ್ದೇವೆ, ಸಂವಿಧಾನ ಬಂದು 72ನೇ ವರ್ಷ ಸಂದಿದೆ.
ಇನ್ನೂ ಕೂಡ ನಾವು ಜಾತ್ಯಾತೀತ ರಾಷ್ಟ್ರವನ್ನು, ಸಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗದ ವಿಚಿತ್ರವನ್ನು ನೋಡುತ್ತಿದ್ದೇವೆ.
ಅವಕಾಶವಂಚಿತರಿಗೆ ಅವಕಾಶ ಕಲ್ಪಿಸಿಕೊಟ್ಟಾಗ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ. ಕೆಳವರ್ಗದ ಜನರು ಕೂಡ ಮುಖ್ಯವಾಹಿನಿಗೆ ಬರಬೇಕು. ಕರಾವಳಿ ಭಾಗದಲ್ಲಿ, ಮಲೆನಾಡು ಪ್ರದೇಶಗಳಲ್ಲಿ ಅನೇಕ ರೀತಿಯ ಹೋರಾಟಗಳು ನಡೆಯುತ್ತಿರುತ್ತದೆ. ರಾಜಕೀಯ ಭಾಷಣ ಮಾಡಲು ಒಮ್ಮೆ ಬರೋಣ, ನಾನು ಬಿಜೆಪಿ ಜನರ ಜೊತೆ ಚರ್ಚೆ ನಡೆಸಲು ಸಿದ್ಧನಿದ್ದೇನೆ.
ಇವತ್ತು ದೇಶ ಮಾಡಿರುವ ಸಾಲ, ನೀಡಿರುವ ಉದ್ಯೋಗದ ಬಗ್ಗೆ ಕೂಲಂಕುಷವಾಗಿ ಚರ್ಚಿಸೋಣ’ ಎಂದು ಕಿಡಿಕಾರಿದರು.
ದೇಶ, ಸಂವಿಧಾನ, ಸುವ್ಯವಸ್ಥೆ ಉಳಿಯಬೇಕಾದರೆ ನಾವು ಧರ್ಮದ ಆಧಾರದ ಮೇಲೆ ಆಡಳಿತ ನಡೆಸುವವರಿಂದ ದೂರವಿರಬೇಕು. ಆಗ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಮುಖಂಡ ಐವನ್ ಡಿಸೊಜಾ ಉಪಸ್ಥಿತರಿದ್ದರು.