ಆರ್.ಪಿ.ಎಫ್ ವಿಶೇಷ ತಂಡದಿಂದ ಅಕ್ರಮ ಚಿನ್ನ ಸಾಗಾಟ ಜಾಲ ಪತ್ತೆ 2.2 ಕೋಟಿ ಮೌಲ್ಯದ ಚಿನ್ನ ವಶ..!
ಕೋಯಿಕ್ಕೋಡ್ :ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಇತ್ತೀಚಿಗೆ ಕಾನೂನುಬಾಹಿರವಾಗಿ ಯಾವುದೇ ರೀತಿಯ ದಾಖಲೆಗಳಿಲ್ಲದೆ ಅಕ್ರಮವಾಗಿ ಚಿನ್ನ ಸಾಗಾಟ ಮಾಡುವ ಜಾಲ ಹೆಚ್ಚಾಗುತ್ತಿದೆ.
ಲಕ್ಷಗಟ್ಟಲೆ ಲೆಕ್ಕದಲ್ಲಿ ಚಿನ್ನ ಪತ್ತೆಯಾಗುತ್ತಿದ್ದು, ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಳ್ಳುತ್ತಿದ್ದಾರೆ. ಇದೀಗ ನೆರೆಯ ಕೇರಳ ರಾಜ್ಯದಲ್ಲೂ ಅಕ್ರಮವಾಗಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ರಾಜಸ್ಥಾನ ಮೂಲದವನನ್ನು ಬಂಧಿಸಲಾಗಿದೆ.
ನಿನ್ನೆ ನೇತ್ರಾವತಿ ಎಕ್ಸ್ ಪ್ರೆಸ್ ನಲ್ಲಿ ಅಪರಾಧ ಗುಪ್ತಚರ ಶಾಖೆಯ (ಆರ್.ಪಿ.ಫ್) ವಿಶೇಷ ತಂಡವು ಶೋಧ ನಡೆಸಿದಾಗ 4.23 ಕೆ.ಜಿ ಯ ಚಿನ್ನಾಭರಣಗಳನ್ನು ಕಳ್ಳ ಮಾರ್ಗದಲ್ಲಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.
ಕೂಡಲೇ ಅಧಿಕಾರಿಗಳು ರಾಜಸ್ಥಾನ ಮೂಲದ ರಮೇಶ್ ಸಿಂಗ್ ರಾಜಾವತ್ (28) ಎಂಬಾತನನ್ನು ಬಂಧಿಸಿದ್ಧಾರೆ. ಬಂಧಿತನಿಂದ 2.2 ಕೋಟಿ ಮೌಲ್ಯದ ಚಿನ್ನವನ್ನು ಆರ್.ಪಿ.ಎಫ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ಎಲ್ಲಾ ಚಿನ್ನಾಭರಣಗಳು ಉತ್ತಮ ಗುಣಮಟ್ಟದವುಗಳಾಗಿದ್ದು, ಅವುಗಳನ್ನು ಸರಕು ಮತ್ತು ಸೇವಾ ತೆರಿಗೆ ತನಿಖಾ ವಿಭಾಗಕ್ಕೆ ಚಿನ್ನವನ್ನು ಹಸ್ತಾಂತರಿಸಲಾಗಿದೆ.ಬಂಧಿತ ಆರೋಪಿಯನ್ನು ವಡಾಕಾರ ಮತ್ತು ಕೋಯಿಕೋಡ್ ಮಧ್ಯ ಸಂಚರಿಸುತ್ತಿದ್ದ ಸಮಯ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ರೈಲು ಮಾರ್ಗವಾಗಿ ಅಕ್ರಮ ಚಿನ್ನ ಸಾಗಾಟದ ಕುರಿತು ಮಾಹಿತಿ ಸಿಕ್ಕಿದ್ದೇ ಆದಲ್ಲಿ ಕಾನೂನಾತ್ಮಕವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಚಿನ್ನ ಸಾಗಾಟಗಾರರಿಗೆ ಆರ್.ಪಿ.ಫ್ ಎಚ್ಚರಿಕೆ ನೀಡಿದೆ.