ಕನ್ನಡದ ‘ಬಿಗ್ ಬಾಸ್ ಸೀಸನ್ 11’ರಿಂದ ಗೋಲ್ಡ್ ಮ್ಯಾನ್ ಸುರೇಶ್ ಹೊರಬಂದಿದ್ದಾರೆ. ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಹಿನ್ನೆಲೆ ಗೋಲ್ಡ್ ಸುರೇಶ್ ದೊಡ್ಮನೆಯಿಂದ ನಿರ್ಗಮಿಸಿದ್ದಾರೆ. ಈ ವೇಳೆ, ಸುದೀಪ್ ಮಾತನಾಡಿ, ನೀವು ಸೋತು ಮನೆಯಿಂದ ಹೋಗುತ್ತಿಲ್ಲ, ಗೆದ್ದು ಹೋಗುತ್ತಿದ್ದೀರಿ ಎಂದು ಸುರೇಶ್ ಕುರಿತು ಮೆಚ್ಚುಗೆಯ ಮಾತನ್ನು ಆಡಿದ್ದಾರೆ.
ನಿನ್ನೆಯ (ಡಿ.16) ಸಂಚಿಕೆಯಲ್ಲಿ ಸುರೇಶ್ ನಿರ್ಗಮನದ ಬಗ್ಗೆ ತೋರಿಸಲಾಗಿದೆ. ಅವರ ಕುಟುಂಬದಲ್ಲಿ ಏನಾಗಿದೆ ಎಂಬುದನ್ನು ಇನ್ನೂ ಕ್ಲ್ಯಾರಿಟಿ ಸಿಕ್ಕಿಲ್ಲ. ಇಂದು ಈ ಮನೆಯಲ್ಲಿ ಒಬ್ಬರ ಪ್ರಯಾಣ ಮುಕ್ತಾಯಗೊಂಡು, ನಿಮಗೆ ಹಾಗೂ ಈ ಮನೆಗೆ ವಿದಾಯ ಹೇಳಲಿದ್ದಾರೆ. ಈ ಸಂದರ್ಭದಲ್ಲೇ ಒಂದು ಮುಖ್ಯವಾದ ವಿಷಯವನ್ನು ಹೇಳಬೇಕಿದೆ. ಕೆಲ ಸಮಯದ ಹಿಂದೆ `ಬಿಗ್ ಬಾಸ್’ ತಂಡಕ್ಕೆ ಒಂದು ಸಂದೇಶ ತಲುಪಿದೆ ಎಂದು ಬಿಗ್ ಬಾಸ್ ತಿಳಿಸಿದ್ದಾರೆ.
ಸ್ಪರ್ಧಿಯೊಬ್ಬರ ನಿಕಟ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದ್ದು, ಅವರ ಅವಶ್ಯಕತೆ ಈ ಮನೆಗಿಂತ, ಅವರ ಸ್ವಗೃಹದಲ್ಲಿ, ಅವರ ಕುಟುಂಬ ಸದಸ್ಯರಿಗೆ ಹೆಚ್ಚು ಅವಶ್ಯಕತೆ ಇದೆ. ಸುರೇಶ್, ಈ ಮನೆಗಿಂತ ನಿಮ್ಮ ಸ್ವಗೃಹದಲ್ಲಿ ನಿಮ್ಮ ಉಪಸ್ಥಿತಿ ಬಹಳ ಮುಖ್ಯ ಎಂದು ಬಿಗ್ ಬಾಸ್ ಹೇಳಿದರು. ಆಗ ಸುರೇಶ್ ಗಾಬರಿಯಿಂದ, ಏನು ಕಾರಣ ತಿಳಿಸಿ ಎಂದು ಕೇಳಿಕೊಂಡರು.
ಬಳಿಕ ದೊಡ್ಮನೆಯ ಟಿವಿ ಪರದೆ ಮೇಲೆ ಸುದೀಪ್ ಅವರು ಕಾಣಿಸಿಕೊಂಡರು.ಸುರೇಶ್, ಗಾಬರಿ ಆಗುವಂತಹದ್ದು ಏನಿಲ್ಲ. ಆದರೆ ತಾವು ಮನೆಗೆ ಹೋಗಲೇಬೇಕಾದ ಸಂದರ್ಭ. ನಿಮ್ಮನ್ನು ಕಳುಹಿಸಿಕೊಡಬೇಕು ನಾವು. ನಿಮ್ಮ ಕುಟುಂಬಕ್ಕೆ ನಿಮ್ಮ ಅವಶ್ಯಕತೆ ಇದೆ. ನೀವು ಇಲ್ಲಿದ್ದಷ್ಟು ವಾರಗಳು ತುಂಬ ಮನರಂಜನೆ ನೀಡಿದ್ದೀರಿ. ನಿಮ್ಮ ಇನ್ನೊಂದು ಸೈಡ್ ಏನು ಅಂತ ಜನರಿಗೆ ತೋರಿಸಿಕೊಟ್ಟಿದ್ದೀರಿ. ಒಂದು ಕ್ಯಾಪ್ಟನ್ ಆಗಿ ಮನೆಯಿಂದ ಆಚೆ ಹೋಗುತ್ತಿದ್ದೀರಿ. ಸೋತು ಹೊಗುತ್ತಿಲ್ಲ, ಗೆದ್ದು ಹೋಗುತ್ತಿದ್ದೀರಿ ಎಂದು ಹೇಳುತ್ತಾ, ಬಿಗ್ ಬಾಸ್ ಮನೆಯಲ್ಲಿ ಖಂಡಿತ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಸುರೇಶ್. ನಿಮಗೆ ಧನ್ಯವಾದಗಳು ಎಂದು ಸುದೀಪ್ ಹೇಳಿದ್ದಾರೆ. ಇನ್ನೂ ಅವರ ನಿರ್ಗಮನದ ಬಗ್ಗೆ ಅಸಲಿ ವಿಚಾರ ಏನೆಂಬುದು ಹೊರ ಬೀಳುತ್ತಾ? ಎಂದು ಕಾದುನೋಡಬೇಕಿದೆ.