ಮಂಗಳೂರು: ಸಾಮಾಜಿಕ ಜಾಲತಾಣಗಳು ಸೇರಿದಂತೆ ಎಲ್ಲೆಡೆ ಕನ್ನಡ ಭಾಷೆಯ ವ್ಯಾಪಕ ಬಳಕೆಗೆ ಒತ್ತು ನೀಡಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿನ್ನೆ ನಡೆದ ದ.ಕ.ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಭಾಷೆಯನ್ನು ಪ್ರಧಾನವಾಗಿ ಬಳಸಬೇಕು.
ಬ್ಯಾಂಕುಗಳು, ವಾಹನಗಳ ಸಂಖ್ಯಾ ಫಲಕ, ಸರಕಾರಿ ವಾಹನಗಳ ನಾಮಫಲಕ, ಹೆದ್ದಾರಿ ಫಲಕ, ವಾಣಿಜ್ಯ ಮಳಿಗೆಗಳು, ಸಂಕಿರ್ಣಗಳು, ಖಾಸಗಿ ಕಚೇರಿಗಳು, ಹೋಟೆಲ್, ಚಿತ್ರಮಂದಿರ ಸಹಿತ ಎಲ್ಲೆಡೆ ಕನ್ನಡ ಭಾಷೆಯನ್ನು ಕಡ್ಡಾಯವಾಗಿಸುವ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಕೇಂದ್ರ ಸರಕಾರದ ಕಾರ್ಖಾನೆಗಳು, ಕಚೇರಿಗಳು, ಖಾಸಗಿ ಕಂಪನಿ, ಮತ್ತು ಕೈಗಾರಿಕೆಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಪ್ರಾಧ್ಯಾನ್ಯತೆ ನೀಡುವಂತೆ ಸೂಚಿಸಿದ ಅವರು, ‘ವಾರ್ಷಿಕ ದರ ಪಟ್ಟಿ, ಅಂದಾಜು ಪಟ್ಟಿ, ಟೆಂಡರುಗಳ ಪಟ್ಟಿಯನ್ನು ಕನ್ನಡದಲ್ಲಿ ಮುದ್ರಿಸಬೇಕು’ ಎಂದರು.
ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ.,
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ರಾಮಚಂದ್ರ ಬೈಕಂಪಾಡಿ, ಶಶಿರಾಜ್ ಕಾವೂರು ಮತ್ತಿತರರು ಉಪಸ್ಥಿತರಿದ್ದರು.