ವಿಜಯವಾಡ: ಕೆಲವೇ ದಿನಗಳಲ್ಲಿ ಮದುವೆಯಾಗಬೇಕಿದ್ದ ವರನನ್ನು ವಧು ತನ್ನ ಊರಿಗೆ ಕರೆದು ಕುತ್ತಿಗೆ ಕೊಯ್ದು ಗಂಭೀರ ಗಾಯಗೊಳಿಸಿದ ಘಟನೆ ಆಂಧ್ರ ಪ್ರದೇಶದ ಅನಕಪಲ್ಲೆ ಜಿಲ್ಲೆಯ ರವಿಕಾಮತಮ್ ಮಂಡಲದ ಕೋಮಲಪುಡಿ ಗ್ರಾಮದಲ್ಲಿ ನಡೆದಿದೆ.
ಗಂಭೀರ ಗಾಯಗೊಂಡ ವರನನ್ನು ರಾಮು ನಾಯ್ಡು ಎಂದು ಗುರುತಿಸಲಾಗಿದೆ.
ರಾಮು ನಾಯ್ಡು ಜೊತೆ ಕೋಮಲಪುಡಿ ಗ್ರಾಮದ ಯುವತಿ ಜತೆ ಮೇ 26ರಂದು ಮದುವೆ ನಿಶ್ಚಯವಾಗಿತ್ತು. ಎರಡೂ ಕುಟುಂಬಸ್ಥರು ಮದುವೆಗೆ ಬೇಕಾದ ತಯಾರಿಯನ್ನು ನಡೆಸುತ್ತಿದ್ದರು. ಎಂದಿನಂತೆ ವಧು ಹಾಗೂ ವರ ಗಂಟೆಗಟ್ಟಲೆ ಫೋನ್‌ನಲ್ಲಿ ಮಾತನಾಡುತ್ತಿದ್ದರು.
ಅದರಂತೆ ಕೆಲದಿನಗಳ ಹಿಂದೆ ಕರೆ ಮಾಡಿದ ಯುವತಿ ನಿನಗೊಂದು ಸರ್ಪ್ರೈಸ್ ಗಿಫ್ಟ್ ಇದೆ ತನ್ನೂರಿಗೆ ಬರುವಂತೆ ಕೇಳಿದ್ದಳು. ವಧುವಿನ ಮಾತಿಗೆ ಮರುಮಾತಾಡದೇ ಯುವಕ ಈಕೆಯ ಊರಿಗೆ ಬಂದಿದ್ದ. ಊರಿನಲ್ಲಿ ಇಬ್ಬರೂ ಬೆಟ್ಟದ ಮೇಲಿರುವ ಒಂದು ಸಣ್ಣ ದೇವಸ್ಥಾನ ಬಳಿ ಹೋದರು. ಈ ವೇಳೆ ಯುವತಿ ಸರ್ಪ್ರೈಸ್ ಗಿಫ್ಟ್ ಕೊಡುತ್ತೇನೆ ಕಣ್ಣು ಮುಚ್ಚು ಎಂದು ರಾಮ ನಾಯ್ಡುಗೆ ಹೇಳಿದ್ದಾರೆ.
ಆತ ಕಣ್ಣು ಮುಚ್ಚಿದ ಬೆನ್ನಲ್ಲೇ ಯುವತಿ ಹರಿತವಾದ ಚೂರಿಯಿಂದ ಆತನ ಗಂಟಲನ್ನು ಯುವತಿ ಸೀಳಿದ್ದಾಳೆ.
ಒಂದೆಡೆ ಗಂಟಲಿನಿಂದ ರಕ್ತ ಸುರಿಯುತ್ತಿದ್ದರೆ, ಯುವತಿ ಪಕ್ಕದಲ್ಲೇ ನಿಂತು ನೋಡುತ್ತಿದ್ದಳು. ಬೆಟ್ಟದ ಪ್ರದೇಶವಾಗಿದ್ದರಿಂದ ಸಹಾಯಕ್ಕಾಗಿ ಅಂಗಚಾಚಿದರೂ ಯಾರೊಬ್ಬರು ರಕ್ಷಣೆಗೆ ಬರಲಿಲ್ಲ. ಕೊನೆಗೆ ತನ್ನ ಫೋನ್ ತೆಗೆದು 108ಕ್ಕೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಂಬ್ಯುಲೆನ್ಸ್ ಬಂದಿದೆ. ಇದರಿಂದ ರಾಮ ನಾಯ್ಡು ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.
ಮೊದಲು ರಾಮ ನಾಯ್ಡು ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದು ಗಾಯಗೊಂಡಿದ್ದಾನೆಂದು ಯುವತಿ ಕತೆ ಕಟ್ಟಿದ್ದಾಳೆ. ಆದರೆ, ರಾಮ ನಾಯ್ಡು ಹೇಳಿಕೆಯಿಂದ ಯುವತಿಯ ಬಂಡವಾಳ ಬಯಲಾಗಿದ್ದು, ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ. ಇಷ್ಟಕ್ಕೆಲ್ಲಾ ಕಾರಣ ಆಕೆಗೆ ಮದುವೆ ಇಷ್ಟವಿರಲಿಲ್ಲವಂತೆ.