ಮಂಗಳೂರು/ಅಹಮಾದಾಬಾದ್ : ಗೌತಮ್ ಅದಾನಿ ಮಗ ಜೀತ್ ಅದಾನಿ ಸೂರತ್ ಮೂಲದ ವಜ್ರ ವ್ಯಾಪಾರಿ ಜೈಮಿನ್ ಶಾ ಅವರ ಪುತ್ರಿ ದಿವಾ ಶಾ ಅವರನ್ನು ಫೆಬ್ರವರಿ 7ರಂದು ವಿವಾಹವಾಗಲಿದ್ದಾರೆ.
ಜೀತ್ ಅದಾನಿ ಅವರು ದಿವಾ ಶಾ ಜೈಮಿನ್‌ರವರನ್ನು ಕಳೆದ ವರ್ಷ ಅಹಮದಾಬಾದ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅವರ ವಿವಾಹ ಪೂರ್ವ ಕಾರ್ಯಕ್ರಮವು ಡಿಸೆಂಬರ್ 10-11 ರಂದು ಉದಯಪುರದಲ್ಲಿ ನಡೆದಿತ್ತು.
ಅದ್ದೂರಿ ವಿವಾಹ ಎನ್ನುವ ವದಂತಿ
ಜೀತ್ ಅದಾನಿ ಮದುವೆಗೆ ಜಗತ್ತಿನ ಪ್ರಮುಖ ತಾರೆಯರು, ಸೆಲೆಬ್ರಿಟಿಗಳು ಬರುತ್ತಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವರು ಅಂದಾಜಿಸಿದ್ದರು. ಎಲಾನ್ ಮಸ್ಕ್, ಮಾರ್ಕ್ ಜುಕನ್ ಬರ್ಗ್, ಡೇನಿಯಲ್ ಕ್ರೇಗ್, ಟೇಲರ್ ಸ್ವಿಫ್ಟ್, ರಾಫೆಲ್ ನಡಲ್, ಸುಂದರ್ ಪಿಚೈ, ಸತ್ಯ ನಾಡೆಲ್ಲಾ ಸೇರಿದಂತೆ ಹಲವರ ಹೆಸರುಗಳು ಹರಿದಾಡಿದ್ದವು.
ಅಹಮದಾಬಾದ್‌ನ ಮೊಟೆರಾ ಕ್ರೀಡಾಂಗಣದಲ್ಲಿ ಜೀತ್ ಅದಾನಿ ಅವರ ಮದುವೆ ನಡೆಯಲಿದ್ದು, ಇಲ್ಲಿ ನಡೆಯಬೇಕಿದ್ದ ಭಾರತ-ಇಂಗ್ಲೆಂಡ್ ನಡುವಿನ ಏಕದಿನ ಪಂದ್ಯವನ್ನು ಸ್ಥಳಾಂತರ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವರದಿಗಳು ಹರಿದಾಡಿವೆ. ಅದಾನಿ ತಮ್ಮ ಮಗನ ಮದುವೆಗಾಗಿ 10 ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದಾರೆ ಎಂದು ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿತ್ತು. ಆದರೆ ಇವೆಲ್ಲಾ ಸತ್ಯಕ್ಕೆ ದೂರವಾದ ವರದಿಗಳಾಗಿವೆ ಎಂದು ಗೌತಮ್ ಅದಾನಿ ಸ್ಪಷ್ಟನೆ ನೀಡಿದ್ದಾರೆ.
ಫೆಬ್ರವರಿ 7ರಂದು ಅಹಮಾದಾಬಾದ್‌ನಲ್ಲಿ ಮದುವೆ ನಡೆಯಲಿದೆ. ಅದಾನಿ ಮಗನ ವಿವಾಹಕ್ಕೆ ಜಗತ್ತಿನ ಪ್ರಮುಖ ಸೆಲೆಬ್ರಿಟಿಗಳನ್ನು ಆಹ್ವಾನಿಸಲಾಗಿದೆ ಎನ್ನುವ ವದಂತಿಗಳಿಗೆ ಅವರು ತೆರೆ ಎಳೆದಿದ್ದಾರೆ.
ಗೌತಮ್ ಅದಾನಿ ಭಾವಿ ಸೊಸೆ ಯಾರು ಗೊತ್ತಾ?
ದಿವಾ ಶಾ ಅವರು ಸೂರತ್‌ನ ದೊಡ್ಡ ಉದ್ಯಮಿ ಜೈಮಿನ್ ಶಾ ಅವರ ಮಗಳು. ಇವರು ಸಿ ದಿನೇಶ್ ಮತ್ತು ಕಂಪನಿ ಪ್ರೈವೆಟ್ ಲಿಮಿಟೆಡ್‌ನ್ನು ಹೊಂದಿದ್ದಾರೆ. ಅವರ ವ್ಯಾಪಾರ ಸೂರತ್‌ನಿಂದ ಮುಂಬೈವರೆಗೆ ವ್ಯಾಪಿಸಿದೆ. ಕಂಪನಿಯ ವಿತರಣಾ ಕಚೇರಿಗಳು ನೆದರ್‌ಲ್ಯಾಂಡ್ಸ್ ಮತ್ತು ಹಾಂಗ್ ಕಾಂಗ್‌ನಲ್ಲಿವೆ. ಕಂಪನಿಯು 1976 ರಲ್ಲಿ ಚಿನುಭಾಯಿ ದೋಶಿ ಮತ್ತು ದಿನೇಶ್ಬಾಯಿ ಶಾರಿಂದ ಸ್ಥಾಪಿಸಲ್ಪಟ್ಟಿತು. ಈಗ ಜೈಮಿನ್ ಶಾ ನಿರ್ದೇಶಕರಾಗಿದ್ದಾರೆ.
ದಿವಾ ಜೈಮೀನ್ ಶಾ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿಲ್ಲ. ದಿವಾ ವ್ಯಾಪಾರ ಮತ್ತು ಹಣಕಾಸಿನ ಬಗ್ಗೆ ಉತ್ತಮ ಹಿಡಿತವನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೇ ತಂದೆಗೆ ವ್ಯಾಪಾರದಲ್ಲಿಯೂ ಸಹಾಯ ಮಾಡುತ್ತಾರೆ ಎನ್ನಲಾಗಿದೆ.
ಅದಾನಿ ಅವರ ಮಗ ಜೀತ್ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ ಪದವಿಯನ್ನು ಪೂರ್ಣಗೊಳಿಸಿದರು. 2019ರಲ್ಲಿ ಅದಾನಿ ಗ್ರೂಪ್‌ಗೆ ಸೇರುವ ಮೊದಲು, ಅವರು ಹಣಕಾಸು, ಬಂಡವಾಳ ಮಾರುಕಟ್ಟೆಗಳಿಗೆ ಸಂಬಂಧಿಸಿದ ಕೆಲಸ ನಿರ್ವಹಿಸಿದ್ದರು. ಈಗ ಅದಾನಿ ಪೋರ್ಟ್ಸ್, ಅದಾನಿ ಡಿಜಿಟಲ್ ಲ್ಯಾಬ್‌ಗಳಂತಹ ವಿಭಾಗಗಳ ಕೆಲಸವನ್ನು ಜೀತ್ ನೋಡಿಕೊಳ್ಳುತ್ತಾರೆ.
Pingback: ಗಣರಾಜ್ಯೋತ್ಸವಕ್ಕೆ ದಕ್ಷಿಣಕನ್ನಡದ ಮೂವರಿಗೆ ವಿಶೇಷ ಆಹ್ವಾನ - NAMMAKUDLA NEWS - ನಮ್ಮಕುಡ್ಲ ನ್ಯೂಸ್