ಕುವೈಟ್: ಭಾರತೀಯ ಪ್ರವಾಸಿ ಪರಿಷತ್ ಕುವೈಟ್ ನಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಫರ್ವಾನಿಯಾದ ಬದ್ರ್ ಅಲ್ ಸಮಾ ವೈದ್ಯಕೀಯ ಕೇಂದ್ರದ ಸಮನ್ವಯದಲ್ಲಿ ನಡೆಸಲಾಯಿತು.
ಕುವೈಟ್‌ನಲ್ಲಿ ಭಾರತೀಯ ಸಮುದಾಯದ ಸೇವೆಯ ಭಾಗವಾಗಿ ಈ ಶಿಬಿರವನ್ನು ಆಯೋಜಿಸಲಾಗಿದ್ದು, ಮುಖ್ಯ ಅತಿಥಿಗಳಾಗಿ ಇಎನ್ಟಿ ತಜ್ಞೆ ಡಾ.ಸೌಮ್ಯ ಆರ್.ಶೆಟ್ಟಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸೀನಿಯರ್ ಮ್ಯಾನೇಜರ್ ನಾಗರಾಜ ತಂತ್ರಿ ಮತ್ತು ಮನೋಜ್ ಮಾಳೇವಿಕರ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮವು ಬೇಬಿ ಸಾನ್ವಿ ರಾಜೇಶ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, ನಂತರ ಮುಖ್ಯ ಅತಿಥಿಗಳಾದ ಡಾ.ಸೌಮ್ಯ ಆರ್.ಶೆಟ್ಟಿ, ನಾಗರಾಜ್ ತಂತ್ರಿ ಮತ್ತು ಮನೋಜ್ ಮಾಳೇವಿಕರ ದೀಪ ಬೆಳಗಿಸಿದರು. ಇನ್ನು ಕಾರ್ಯಕ್ರಮ ಆಯೋಜಕರಾದ ಭಾರತೀಯ ಪ್ರವಾಸಿ ಪರಿಷತ್ ಕುವೈಟ್ – ಕರ್ನಾಟಕ ವಿಭಾಗದ ಅಧ್ಯಕ್ಷರಾದ ರಾಜ್ ಭಂಡಾರಿಯವರು ಅವರು ಸದಸ್ಯರನ್ನು ಸ್ವಾಗತಿಸಿದರು.
ಬೆಳಗ್ಗೆ ಆರಂಭವಾದ ಶಿಬಿರ ಮಧ್ಯಾಹ್ನ 1.30ರವರೆಗೆ ನಡೆಯಿತು. ಭಾರತೀಯರು ಮತ್ತು ಇತರ ರಾಷ್ಟ್ರೀಯತೆಯ 192 ಕ್ಕೂ ಹೆಚ್ಚು ಸದಸ್ಯರು ಸೇವೆಯ ಪ್ರಯೋಜನ ಪಡೆದರು. ಭಾರತೀಯ ಪ್ರವಾಸಿ ಪರಿಷತ್ತು ಕುವೈತ್ – ಕರ್ನಾಟಕ ವಿಭಾಗದ ತಂಡವು ಶಿಬಿರವನ್ನು ನಿರ್ವಹಿಸುವಲ್ಲಿ ಅತ್ಯುತ್ತಮ ಕಾರ್ಯ ಮಾಡಿ ಇಡೀ ಕಾರ್ಯಕ್ರಮವನ್ನು ಸುಗಮವಾಗಿ ನಿರ್ವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.