ಮಂಗಳೂರು: ಉಳ್ಳಾಲ ಠಾಣಾ ವ್ಯಾಪ್ತಿಯ ಕೆ.ಸಿ ರೋಡು ನಿವಾಸಿ ಆಕೀಫ್ (12) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ರಕ್ಷಣೆ ನೀಡಿದ್ದ ಆತನ ತಂದೆಯನ್ನು ಉಳ್ಳಾಲ ಪೊಲೀಸರು ಸೋಮವಾರ ಬಂಧಿಸಿದ್ದಾರೆ.ಆರೋಪಿ ದೀಪಕ್ ನನ್ನು ರಿಮಾಂಡ್ ಹೋಂಗೆ ಕಳುಹಿಸಲಾಗಿದೆ.ಉತ್ತರಪ್ರದೇಶ ಮೂಲದ ಕೆ.ಸಿ ರೋಡು ಪಿಲಿಕೂರು ನಿವಾಸಿ ಸಂತೋಷ್ (45) ಎಂಬಾತನನ್ನು ಬಂಧಿಸಲಾಗಿದೆ.
ಆಕೀಫ್ ನನ್ನು ಹತ್ಯೆ ನಡೆಸಿ ಬಂದಿದ್ದ ದೀಪಕ್ ತನ್ನ ತಂದೆ ಸಂತೋಷ್ ಅವರಲ್ಲಿ ವಿಚಾರ ತಿಳಿಸಿದ್ದನು. ಘಟನೆ ಕುರಿತು ಯಾರಲ್ಲೂ ತಿಳಿಸದಂತೆ ಹೇಳಿರುವುದು ಮತ್ತು ದೀಪಕ್ ನನ್ನು ಮನೆಯಲ್ಲೇ ರಕ್ಷಣೆ ನೀಡಿದ ಆರೋಪದ ಮೇರೆಗೆ ಪೊಲೀಸರು ಸಂತೋಷ್ನನ್ನು ಬಂಧಿಸಿದ್ದಾರೆ. ಸಂತೋಷ್ ಕಳೆದ 30 ವರ್ಷಗಳಿಂದ ತಲಪಾಡಿಯಲ್ಲೇ ಇದ್ದು, ಲಾರಿ ಚಾಲಕನಾಗಿ ದುಡಿಯುತ್ತಿದ್ದರು.ದೀಪಕ್ (17) ಬಾಲಪರಾಧಿ ಆಗಿರುವ ಹಿನ್ನೆಲೆಯಲ್ಲಿ ಉಡುಪಿ ದೊಡ್ಡಣಗುಡ್ಡೆಯ ಬಾಲ ನ್ಯಾಯ ಮಂಡಳಿಗೆ ಸೋಮವಾರ ಹಾಜರುಪಡಿಸಲಾಗಿದೆ.
ನ್ಯಾಯಾಲಯ ಆರೋಪಿಗೆ ರಿಮಾಂಡ್ ಹೋಂ ಶಿಕ್ಷೆ ವಿಧಿಸಿ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ, ರಿಮಾಂಡ್ ಹೋಂಗೆ ದಾಖಲಿಸಲಾಗಿದೆ. ಇನ್ನೂ ಆಕೀಫ್ ಕೊಲೆ ಕೃತ್ಯವನ್ನು ಪೊಲೀಸರು ಬೇಧಿಸುತ್ತಿದ್ದಂತೆ ದೀಪಕ್ ಮನೆಮಂದಿಗೆ ಸ್ಥಳೀಯರು ಬೆದರಿಕೆಯನ್ನು ಒಡ್ಡಲು ಆರಂಭಿಸಿದ್ದರು.
ಮನೆಯಲ್ಲಿ ಆರೋಪಿ ದೀಪಕ್ ನ ತಾಯಿ ಮತ್ತು ಸಹೋದರ ಮಾತ್ರ ಇರುವ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸರು ಭದ್ರತೆಯನ್ನು ಮುಂದುವರಿಸಿದ್ದಾರೆ.