ಪ್ರತಿಷ್ಠಿತ ಜೇನು ತಯಾರಿಕಾ ಕಂಪನಿಗಳ ವಂಚನೆ ಬಯಲು! ಸಿಎಸ್ಇ ನಡೆಸಿದ ಅಧ್ಯಯನದಲ್ಲಿ ಮಾಹಿತಿ ಬಹಿರಂಗ..!
ನವದೆಹಲಿ: ಕಲಬೆರಕೆ ಜೇನುತುಪ್ಪವನ್ನು ಪರಿಶುದ್ಧ ಜೇನುತುಪ್ಪ ಎಂದು ಪತಂಜಲಿ, ಡಾಬರ್, ಬೈದ್ಯನಾಥ್, ಇಮಾಮಿ ಮತ್ತು ಝಂಡು ಸೇರಿದಂತೆ 13 ಪ್ರತಿಷ್ಠಿತ ಕಂಪನಿಗಳು ಗ್ರಾಹಕರನ್ನು ವಂಚಿಸಿಕೊಂಡು ಬಂದಿದೆ ಎಂದು ಕೇಂದ್ರದ ವಿಜ್ಞಾನ ಮತ್ತು ಪರಿಸರ ಕೇಂದ್ರ ಆಘಾತಕಾರಿ ವರದಿ ನೀಡಿದೆ. ಭಾರತದ ಮಾರುಕಟ್ಟೆಯಲ್ಲಿ ಲಭ್ಯ ಇರುವ ಜೇನುತುಪ್ಪ ಬ್ರ್ಯಾಂಡ್‍ಗಳು ಹೆಚ್ಚಿನವು ಕಲಬೆರಕೆ ಜೇನನ್ನು ಗ್ರಾಹಕರಿಗೆ ಮಾರುತ್ತಿವೆ ಎಂಬ ಅಂಶ ಸಿ.ಎಸ್.ಇ ನಡೆಸಿರುವ ಅಧ್ಯಯನದಲ್ಲಿ ಬಹಿರಂಗವಾಗಿದೆ.
ದೇಶದ ಮಾರುಕಟ್ಟೆಗಳಿಂದ 13 ಜೇನುತುಪ್ಪದ ವಿವಿಧ ಬ್ರಾಂಡ್‍ಗಳ ಮೇಲೆ ನಡೆಸಿದ ತನಿಖೆಯನ್ನು ವರದಿ ಉಲ್ಲೇಖಿಸಿದೆ. ಚೀನಾದಲ್ಲಿ ತಯಾರಾಗುವ ವಿಶೇಷ ರೀತಿಯ ಸಕ್ಕರೆ ಪಾಕವನ್ನು ಜೇನಿಗೆ ಬೆರೆಸಿ ಮಾರಾಟ ಮಾಡಲಾಗುತ್ತಿದೆ ಎಂಬ ಅಂಶವು ಈ ಅಧ್ಯಯನದಿಂದ ತಿಳಿದು ಬಂದಿದ್ದು, ಗುಜರಾತ್‍ನಲ್ಲಿರುವ ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿತ್ತು.
ಈ 13 ದೊಡ್ಡ ದೊಡ್ಡ ಕಂಪನಿಯ ಜೇನುತುಪ್ಪಗಳಲ್ಲಿ ಕೇವಲ 3 ಕಂಪನಿಯ ಜೇನುತುಪ್ಪ ಮಾತ್ರ ಗುಣಮಟ್ಟದ ಟೆಸ್ಟ್ ನಲ್ಲಿ ಪಾಸ್ ಆಗಿವೆ. ಉಳಿದ 10 ಕಂಪನಿಗಳು ಕಲಬೆರಕೆಯ ಜೇನು ಮಾರಾಟ ಮಾಡುತ್ತಿವೆ.
ಈ ಕಂಪನಿಗಳ ಜೇನುತುಪ್ಪದಲ್ಲಿ ಸಕ್ಕರೆ ಪಾಕ ಅಥವಾ ಸಕ್ಕರೆ ಸಿರಪ್ ಅಂಶ ಪತ್ತೆಯಾಗಿದೆ. ಸಿಎಸ್‍ಇ ಆಹಾರ ಸಂಶೋಧಕರು ಡಾಬರ್, ಪತಂಜಲಿ, ಬೈದ್ಯನಾಥ್, ಇಮಾಮಿ ಮತ್ತು ಝಂಡು ಸೇರಿದಂತೆ 13 ಬ್ರಾಂಡ್‍ಗಳ ಜೇನುತುಪ್ಪವನ್ನು ರಾಷ್ಟ್ರೀಯ ಆಹಾರ ನಿಯಂತ್ರಣ ಕಾನೂನುಗಳ ಅಡಿಯಲ್ಲಿ ಅಗತ್ಯವಿರುವ 18 ಪರೀಕ್ಷೆಗಳಿಗೆ ಒಳಪಡಿಸಿದಾಗ ಈ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.