ಮಂಗಳೂರು: ದರೋಡೆ ಪ್ರಕರಣವೊಂದರ ಆರೋಪಿಯನ್ನು ‘ಕೇಸ್‌ನಿಂದ ನಿನ್ನ ಹೆಸರು ತೆಗೆಸುತ್ತೇವೆ’ ಎಂದು ಇಬ್ಬರು ವಂಚನೆ ಮಾಡಿದ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣದಲ್ಲಿ ವಂಚನೆಗೈದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಅಬ್ದುಲ್ ಖಾದರ್ ರಿಝ್ವಾನ್(28) ಎಂದು ಗುರುತಿಸಲಾಗಿದೆ.
ಘಟನೆ ವಿವರ
2021 ರ ಡಿಸೆಂಬರ್‌ನಲ್ಲಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣವೊಂದು ದಾಖಲಾಗಿತ್ತು. ಈ ಪ್ರಕರಣದಲ್ಲಿನ ಆರೋಪಿಯ ದಸ್ತಗಿರಿಗಾಗಿ ಹುಡುಕಾಡುತ್ತಿದ್ದರು.
ಈ ಸಮಯದಲ್ಲಿ ದರೋಡೆ ಪ್ರಕರಣದ ಆರೋಪಿಯನ್ನು ಇಬ್ಬರು ಸಂಪರ್ಕಿಸಿ ‘ದರೋಡೆ ಪ್ರಕರಣದಲ್ಲಿದ್ದ ನಿನ್ನ ಹೆಸರನ್ನು ಪೊಲೀಸರಿಗೆ ಹೇಳಿ ತೆಗೆಸುತ್ತೇವೆ ಎಂದು’ ಭರವಸೆ ನೀಡಿದ್ದಾರೆ.
ಅದರಂತೆ ಆತನಿಂದ ಕಂತುಕಂತಾಗಿ ಒಟ್ಟು 2,95,000 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆ. ಇದರ ಜೊತೆ ದರೋಡೆ ಪ್ರಕರಣದ ಆರೋಪಿಯು ನ್ಯಾಯಾಲಯದಲ್ಲಿ
ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿ ಬೇಲ್ ಪಡೆದಿದ್ದನು. ಇದಾದ ನಂತರ ಆತನಿಂದ ಹಣ ಪಡೆದುಕೊಂಡ ವ್ಯಕ್ತಿಗಳಿಂದ ಹಣವನ್ನು ವಾಪಾಸ್ಸು ನೀಡುವಂತೆ ಒತ್ತಾಯ ಮಾಡಿದ್ದಾನೆ.
ಈ ವೇಳೆ ಆತನಿಗೆ ಕರೆ ಮಾಡಿ ‘ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿ. ಮತ್ತೆ 30,000 ರೂ ಹಣವನ್ನು ನೀಡುವಂತೆ ಬೇಡಿಕೆಯಿಟ್ಟಿದ್ದಾರೆ.
ಈ ವೇಳೆ ಹಣ ಕಳೆದುಕೊಂಡ ವ್ಯಕ್ತಿಯು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಂತೆ ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ ಹಣ ವಂಚನೆ ಮಾಡಿದ ಅಬ್ದುಲ್ ಖಾದರ್ ರಿಝ್ವಾನ್ ಎಂಬಾತನನ್ನು ಇದೀಗ ಮಂಗಳೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.