ಪುತ್ತೂರು: ಸ್ನೇಹಿತನ ಹತ್ಯೆಗೆ ಪ್ರತಿಕಾರ ತೀರಿಸಲು ಸಂಚು ರೂಪಿಸಿದ್ದ ನಾಲ್ವರನ್ನು ಪುತ್ತೂರು ನಗರ ಪೊಲೀರು ಬಂಧಿಸಿದ್ದಾರೆ.
ಪುತ್ತೂರಿನ ನೆಹರೂ ನಗರದಲ್ಲಿ 2023 ರ ನವೆಂಬರ್ 6 ರಂದು ದುಷ್ಕರ್ಮಿಗಳಿಂದ ಕೊಲೆಯಾಗಿದ್ದ ಕಲ್ಲೆಗ ಹುಲಿ ತಂಡದ ನಾಯಕ ಅಕ್ಷಯ್ ಹತ್ಯೆಗೆ ಪ್ರತಿಕಾರಕ್ಕೆ ಸಂಚು ರೂಪಿಸಲಾಗಿತ್ತು. ಅಕ್ಷಯ್ ಕೊಲೆ ಪ್ರಕರಣದ ಆರೋಪಿ ಮನೀಶ್ ಸಹೋದರ ಮನೋಜ್‌ಗೆ ಈಗಾಗಲೆ ಜೀವ ಬೆದರಿಕೆಯ ಕರೆಗಳು ಬಂದಿದ್ದು, ನಿನ್ನ ತಮ್ಮ ಜೈಲಿನಲ್ಲಿ ಇದ್ದಾನೆ ಹೀಗಾಗಿ ನಿನ್ನನ್ನು ಮುಗಿಸುವುದಾಗಿ ಬೆದರಿಕೆ ಹಾಕಿದ್ದರು. ಈ ವಿಚಾರವಾಗಿ ಮನೋಜ್ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ಕೇವಲ ಬೆದರಿಕೆ ಹಾಕಿದಷ್ಟೇ ಅಲ್ಲದೆ ಮನೋಜ್ ಚಲನವಲನ ಗಮನಿಸುತ್ತಿದ್ದ ನಾಲ್ವರು ದುಷ್ಕರ್ಮಿಗಳು ಮಂಗಳವಾರ ಮನೋಜ್ ಹತ್ಯೆಗೆ ಸ್ಕೆಚ್ ರೂಪಿಸಿದ್ದರು. ಪುತ್ತೂರಿನ ಮುಕ್ರುಂಪಾಡಿ ಎಂಬಲ್ಲಿ ಕಾರಿನಲ್ಲಿ ಮಾರಕಾಸ್ತ್ರಗಳ ಸಹಿತ ಅವಿತುಕೊಂಡು ಮನೋಜ್‌ನನ್ನು ಮುಗಿಸಲು ಸಿದ್ಧತೆ ನಡೆಸಿದ್ದರು. ಈ ವಿಚಾರ ತಿಳಿದ ಪುತ್ತೂರು ನಗರ ಪೊಲೀಸರು ಮನೋಜ್ ಹತ್ಯೆಗೆ ಸಂಚು ರೂಪಿಸಿದ್ದ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿ ಬಳಿಕ ಬಂಧಿಸಿದ್ದಾರೆ. ಬಂಟ್ವಾಳದ ಕಿಶೋರ್ ಕಲ್ಲಡ್ಕ( 36) , ಪುತ್ತೂರಿನ ಮನೋಜ್ ( 23) , ಆಶಿಕ್ (28) ಹಾಗೂ ಸನತ್ ಕುಮಾರ್ (24) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಕಾರಿನಲ್ಲಿ ಅವಿಕೊಂಡು ಮನೋಜ್ ಬರುವುದನ್ನ ಕಾಯುತ್ತಿದ್ದರು ಹಾಗೂ ಕಾರಿನಲ್ಲಿ ಮನೋಜ್ ಹತ್ಯೆಗೆ ಬೇಕಾದ ಮಾರಕಾಸ್ತ್ರಗಳು ಇದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಕಲ್ಲೆಗ ಟೈಗರ್ ಎಂದೇ ಖ್ಯಾತನಾಗಿದ್ದ ಅಕ್ಷಯ್:
19ನೇ ವಯಸ್ಸಿನಲ್ಲೇ ಪುತ್ತೂರಿನಲ್ಲಿ ಕಲ್ಲೆಗ ಟೈಗರ್ಸ್ ಎಂಬ ಹುಲಿವೇಶದ ತಂಡವನ್ನು ಹುಟ್ಟು ಹಾಕಿದ್ದ ಅಕ್ಷಯ್ ಬಳಿಕ ಕಲ್ಲೆಗ ಟೈಗರ್ ಎಂದೇ ಹೆಸರು ಮಾಡಿದ್ದ. ಜಿಲ್ಲೆಯಲ್ಲಿ ನಡೆಯುವ ಹಲವು ಹುಲಿ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ತಂಡ ಬಹುಮಾನ ಕೂಡಾ ಪಡೆದುಕೊಂಡಿತ್ತು. ಈ ಮೂಲಕ ಪುತ್ತೂರಿನಲ್ಲಿ ಅಕ್ಷಯ್ ಒಂದು ರೀತಿಯಲ್ಲಿ ದೊಡ್ಡ ನಾಯಕನಾಗಿದ್ದು ಮಾತ್ರವಲ್ಲದೆ ತನ್ನನ್ನು ತಾನು ಡಾನ್ ಎಂಬಂತೆ ಬಿಂಬಿಸಿಕೊಂಡಿದ್ದ. ಸ್ಥಳಿಯ ಸಮಸ್ಯೆಗಳಿಗೆ ಮದ್ಯ ಪ್ರವೇಶ ಮಾಡಿ ಪಂಚಾಯಿತಿ ನಡೆಸುವಷ್ಟರ ಮಟ್ಟಿಗೆ ಅಕ್ಷಯ್ ಸ್ಥಳೀಯವಾಗಿ ತನ್ನ ಇಮೇಜ್ ಬೆಳೆಸಿಕೊಂಡಿದ್ದ. ಈ ನಡುವೆ ಬಸ್ ನಿರ್ವಾಹಕನ ಬೈಕ್ ಒಂದು ವಿದ್ಯಾರ್ಥಿಗೆ ತಾಗಿದ ಹಿನ್ನೆಲೆಯಲ್ಲಿ ಬಸ್ ಚಾಲಕ ಮತ್ತು ನಿರ್ವಾಹಕನ ಜೊತೆ ಪರಿಹಾರದ ವಿಚಾರದಲ್ಲಿ ವಿವಾದ ಉಂಟಾಗಿತ್ತು. ಬಸ್ ನಿರ್ವಾಹಕ ವಿದ್ಯಾರ್ಥಿಯ ಆಸ್ಪತ್ರೆಯ ಖರ್ಚು 2 ಸಾವಿರ ನೀಡುವಂತೆ ಅಕ್ಷಯ್ ಆದೇಶ ಮಾಡಿದ್ದ. ಇದೇ ವಿಚಾರಕ್ಕೆ ಸಂಜೆ ಬರುವುದಾಗಿ ಹೇಳಿದ್ದ ಬಸ್ ನಿರ್ವಾಹಕ ಹಾಗೂ ಚಾಲಕ ತಮ್ಮ ಸ್ನೇಹಿತರ ಜೊತೆ ಸೇರಿ ಅಕ್ಷಯ್ ಹತ್ಯೆ ಮಾಡಿದ್ದರು. ಹತ್ಯೆ ಬಳಿಕ ಮನೀಶ್ ಹಾಗೂ ಬಸ್ ಚಾಲಕ ಚೇತನ್ ಪೊಲೀಸರಿಗೆ ಶರಣಾಗಿದ್ದರು. ಬಳಿಕ ಇನ್ನಿಬ್ಬರು ಆರೋಪಿಗಳಾದ ಕೇಶವ ಪಡೀಲ್ ಮತ್ತು ಮಂಜುನಾಥ ಎಂಬವರನ್ನು ಪೊಲೀಸರು ಬಂಧಿಸಿದ್ದರು.
ಸ್ಥಳ ಮಹಜರು ವೇಳೆ ಅಕ್ಷಯ್ ಬೆಂಬಲಿಗರ ಬೆದರಿಕೆ:
ಅಕ್ಷಯ್ ಕೊಲೆ ಪ್ರಕರಣದ ಆರೋಪಿಗಳನ್ನು ಸ್ಥಳ ಮಹಜರಿಗೆ ತಂದ ವೇಳೆಯಲ್ಲೇ ಆರೋಪಿಗಳನ್ನು ಮುಗಿಸುವುದಾಗಿ ಬೆದರಿಕೆ ಹಾಕಲಾಗಿತ್ತು. ಸ್ಥಳ ಮಹಜರು ವೇಳೆ ಸಾವಿರಾರು ಜನ ಅಕ್ಷಯ್ ಬೆಂಬಲಿಗರು ಸ್ಥಳದಲ್ಲಿ ಜಮಾಯಿಸಿದ್ದು, ಬಿಗಿ ಭದ್ರತೆಯಲ್ಲಿ ಸ್ಥಳ ಮಹಜರು ನಡೆಸಲಾಗಿತ್ತು. ಈ ವೇಳೆ ಆರೋಪಿಗಳ ಮೇಲೆ ದಾಳಿ ಮಾಡುವ ಯತ್ನ ಕೂಡಾ ನಡೆದಿದ್ದು, ಪೊಲೀಸರು ಬಿಗಿ ಭದ್ರತೆಯ ಕಾರಣ ಪೊಲೀಸರು ಜನರನ್ನು ಸ್ಥಳದಿಂದ ಚದುರಿಸಿದ್ದರು. ಇದೀಗ ಆರೋಪಿಯ ಸಹೋದರನಿಗೆ ಸ್ಕೆಚ್ ಹಾಕಿರುವ ಅಕ್ಷಯ್ ಬೆಂಬಲಿಗರು ಸದ್ಯ ಪೊಲೀಸರ ಅತಿಥಿಗಳಾಗಿದ್ದಾರೆ.