ಮಂಗಳೂರು: ಕುಡ್ಲ ತುಳುಕೂಟದ ಅಧ್ಯಕ್ಷರಾಗಿದ್ದ ದಾಮೋದರ ನಿಸರ್ಗ ಅವರು ಇಂದು(ಆ.31) ವಿಧಿವಶರಾದರು. ಕುಡ್ಲ ತುಳುಕೂಟದ ಹಿರಿಯ ಸದಸ್ಯರಾಗಿದ್ದ ಅವರು ಮರೋಳಿಯ ದಾಮೋದರ ನಿಸರ್ಗ ದಾಮೋದರ ಆರ್ ಸುವರ್ಣ ತುಳು ಕೂಟದಲ್ಲಿ ಆರಂಭಿಸಿದ್ದ ಬಿಸು ಪರ್ಬ ಆಚರಣೆಯನ್ನು 2024ರವರೆಗೆ ನಡೆಸಿಕೊಂಡು ಬಂದಿದ್ದಾರೆ. ಅವರ ಸಾರಥ್ಯದಲ್ಲಿ ತುಳುಕೂಟ ಸುವರ್ಣ ಮಹೋತ್ಸವ ಆಚರಣೆ ಮಾಡಲಾಗಿದ್ದು ಈ ಕಾರ್ಯಕ್ರಮ ವರ್ಷ ಪೂರ್ತಿ ನಡೆದಿತ್ತು.
ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರ್ಪಡೆಗೊಳಿಸಬೇಕೆಂದು ಅವರು ಕುಡ್ಲ ತುಳುಕೂಟದ ವತಿಯಿಂದ ಭಾರೀ ಪ್ರಯತ್ನ ಮಾಡಿದ್ದರು. ಅಖಿಲ ಭಾರತ ತುಳು ಒಕ್ಕೂಟದ ಪದಾಧಿಕಾರಿ ಆಗಿದ್ದ ದಾಮೋದರ ನಿಸರ್ಗ ಇತ್ತೀಚೆಗೆ ಮಂಗಳೂರಿನ ಪುರಭವನದಲ್ಲಿ ಒಕ್ಕೂಟದ ನಡೆಸಿದ ತುಳು ಜನಪದ ಉತ್ಸವದಲ್ಲಿ ಭಾಗವಹಿಸಿದ್ದು ಇದು ಅವರ ಕೊನೆಯ ಕಾರ್ಯಕ್ರಮವಾಗಿತ್ತು.
ಯಕ್ಷಗಾನ ರಂಗದ ಸಾಧಕರಿಗೆ ದಾಮೋದರ ನಿಸರ್ಗ ಅವರ ಪಿತೃಶ್ರೀ ಬೋಳೂರು ದೋಗ್ರ ಪೂಜಾರಿ ಅವರ ಹೆಸರಿನಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ ಮಾಡಿಕೊಂಡು ಬಂದಿದ್ದಾರೆ. ಭಾಗವತ ಪ್ರಸಂಗ ಕರ್ತ ಮಧುಕುಮಾರ್ ನಿಸರ್ಗ ಮತ್ತು ದಿ. ಸಾಹಿತಿ, ಸಿನೆಮಾ ನಿರ್ದೇಶಕ ವಿಶು ಕುಮಾರ್ ಅವರ ಸಹೋದರರಾಗಿದ್ದರು. ಮಂಗಳೂರಿನ ಸಹಕಾರಿ ಬ್ಯಾಂಕುಗಳಲ್ಲಿ ಹೆಸರುವಾಸಿಯಾಗಿರುವ ಗೋಕರ್ಣನಾಥ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ತುಳು ಭಾಷೆಯ ದೊಡ್ಡ ಅಭಿಮಾನಿ, ಪಡ್ಡಾಯಿಲಚ್ಚಿಲ್ ಕುಟುಂಬದ ಹಿರಿಯರಾಗಿದ್ದರು. ತುಳು ಸಾಹಿತ್ಯ, ಸಂಸ್ಕೃತಿಗೆ ಇವರು ನೀಡಿದ ಕೊಡುಗೆಯನ್ನು ಪರಿಗಣಿಸಿ 2020ರಲ್ಲಿ ನಮ್ಮ ಕುಡ್ಲ ಸುದ್ದಿ ವಾಹಿನಿ ನೀಡುವ ನಮ್ಮ ತುಳುವೆರ್ ಪ್ರಶಸ್ತಿ ದಾಮೋದರ ನಿಸರ್ಗ ಅವರಿಗೆ ಪ್ರದಾನ ಮಾಡಲಾಗಿತ್ತು.
ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಚಿನ್ನದ ಚೈನನ್ನು ಒಂದೇ ದಿನದಲ್ಲಿ ಹುಡುಕಿ ವಾಪಾಸು ನೀಡಲಾಗಿದೆ.
ಜನವರಿ 26 ರಂದು ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸಿದ್ದ ರಚನ ಎಂಬವರ ಪುತ್ರನ ಕತ್ತಿನಲ್ಲಿದ್ದ ಚಿನ್ನದ ಚೈನ್ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಿದ್ದು ಹೋಗಿತ್ತು. ಮಂಗಳೂರು ವಿಮಾನ ನಿಲ್ದಾಣ ತಲುಪಿದ 30 ನಿಮಿಷಗಳ ಬಳಿಕ ಈ ವಿಚಾರ ಗೊತ್ತಾಗಿ ತಕ್ಷಣ ಈ ವಿಚಾರವನ್ನು ಸಿಐಎಸ್ ಎಫ್ ಅಧಿಕಾರಿಗಳ ಬಳಿ ಹಂಚಿಕೊಂಡಿದ್ದರು. ಬಳಿಕ ಈ ಬಗ್ಗೆ ದೂರು ನೀಡಿ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಮಾಡಿದ್ದರು.
ಪ್ರಯಾಣಿಕರ ಚೈನ್ ಕಳೆದುಕೊಂಡ ದೂರು ಸ್ವೀಕರಿಸಿದ್ದ ಸಿಐಎಸ್ ಎಫ್ ಅಧಿಕಾರಿಗಳು ವಿಮಾನ ನಿಲ್ದಾಣದ ಸಿಸಿ ಟಿವಿ ಪರಿಶೀಲನೆ ಮೂಲಕ ಚೈನ್ ಕಾರ್ ಪಾರ್ಕಿಂಗ್ ಬಳಿ ಬಿದ್ದಿದ್ದು ಅದನ್ನು ಕಾರು ಚಾಲಕರೊಬ್ಬರು ತೆಗೆದುಕೊಂಡಿರುವುದನ್ನು ಗಮನಿಸಿದ್ದಾರೆ. ಬಳಿಕ ಬಜಪೆ ಪೊಲೀಸರಿಗೆ ಮಾಹಿತಿ ನೀಡಿ ಕಾರು ಚಾಲಕನನ್ನು ಕರೆಯಿಸಿ ಆತನಿಂದ ಚೈನ್ ವಾಪಾಸು ಪಡೆದುಕೊಂಡು ವಾರಸುದಾರರ ಕುಟುಂಬಕ್ಕೆ ಹಿಂತಿರುಗಿಸಿದ್ದಾರೆ.
ಚಾಲಕ ಬಿದ್ದು ಸಿಕ್ಕ ಚೈನ್ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ನೀಡದೆ ತೆಗೆದುಕೊಂಡು ಹೋಗಿದ್ದ ಹಿನ್ನಲೆಯಲ್ಲಿ ಆತನಿಂದ ಕ್ಷಮಾಪಣೆ ಪತ್ರ ಬರೆಯಿಸಿಕೊಂಡಿದ್ದಾರೆ. ಚಿನ್ನದ ಚೈನ್ ಕೆಲವೇ ಗಂಟೆಯಲ್ಲಿ ಪತ್ತೆ ಹಚ್ಚಿ ವಾಪಾಸು ನೀಡಿದ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ರಚನಾ ಅವರು ವಿಶೇಷ ಧನ್ಯವಾದ ಸಲ್ಲಿಸಿದ್ದಾರೆ.
ಮಂಗಳೂರು: ಜನವರಿ 26 ರಂದು ನಿಧನ ಹೊಂದಿದ ಹಿರಿಯ ಪತ್ರಕರ್ತ ಹೊಸ ದಿಗಂತ ಪತ್ರಿಕೆಯ ವಿಶೇಷ ವರದಿಗಾರ ಹಾಗೂ ಹರೇಕಳ ಹಾಜಬ್ಬ ಅವರನ್ನು ಸಮಾಜಕ್ಕೆ ಪರಿಚಯಿಸಿದ್ದ ಗುರುವಪ್ಪ ಬಾಳೆಪುಣಿ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಇಂದು ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್ ಮತ್ತು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಈ ಸಂತಾಪ ಸಭೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಹರೇಕಳ ಹಾಜಬ್ಬ ಅವರೂ ಉಪಸ್ಥಿತರಿದ್ದು, ನುಡಿ ನಮನ ಸಲ್ಲಿಸಿದರು.
2004 ಸಪ್ಟೆಂಬರ್ ತಿಂಗಳಲ್ಲಿ ಗುರುವಪ್ಪ ಬಾಳೆಪುಣಿ ಅವರು ಲೇಖನ ಬರೆದು ನನ್ನನ್ನು ಲೋಕಕ್ಕೆ ಪರಿಚಯಿಸಿದರು. ಇದರಿಂದ ನನ್ನನ್ನು ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಯಿತು. ಬಡವನಾದ ನನಗೆ ಮುಖ್ಯಮಂತ್ರಿ ಮಾತ್ರವಲ್ಲದೆ ಪ್ರಧಾನಿಯವರ ಬಳಿಗೂ ತೆರಳುವ ಅವಕಾಶ ಲಭಿಸಿತು ಎಂದವರು ನೆನಪಿಸಿದರು.
ಹೊಸ ದಿಗಂತ ಪತ್ರಿಕೆಯ ಸಿಇಒ ಪ್ರಕಾಶ್ ಪಿ. ಎಸ್. ಮಾತನಾಡಿ ಗುರುವಪ್ಪ ಬಾಳೆಪುಣಿ ಅವರು ತಾನು ಮಾಡುತ್ತಿರುವ ಕೆಲಸ ಮತ್ತು ಸಂಸ್ಥೆಯನ್ನು ಪ್ರೀತಿಸಿದ್ದರು. ನೇರ ನಡೆ ನುಡಿಯ ವ್ಯಕ್ತಿತ್ವ ಮತ್ತು ಹೊಸತನ್ನು ಹುಡುಕುವ ಕಣ್ಣು ಅವರದಾಗಿತ್ತು. ದೇಹ ದಾನ ಮಾಡಲು ಮುಂದಾಗಿದ್ದರೂ, ಅನಾರೋಗ್ಯದ ಕಾರಣ ಅದು ಸಾಧ್ಯವಾಗಿಲ್ಲ. 10 ಮಂದಿ ವ್ಯಕ್ತಿಗಳ ಬಗ್ಗೆ ಪುಸ್ತಕ ಬರೆಯಲು ಅವರು ಹೊರಟಿದ್ದರು ಎಂದರು.
ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಮಾತನಾಡಿ ಗುರುವಪ್ಪ ಬಾಳೆಪುಣಿ ಅವರಿಗೆ ಹೊಸದಿಗಂತ ಪತ್ರಿಕೆಯಲ್ಲಿ ಕೆಲಸ ತೆಗೆದು ಕೊಡಲು ತಾನು ಮತ್ತು ಆಗಿನ ವಾರ್ತಾಧಿಕಾರಿ ರಾಮಲಿಂಗೇ ಗೌಡ ಅವರು ಪಟ್ಟ ಶ್ರಮವನ್ನು ಮೆಲುಕು ಹಾಕಿದರು.
ತುಳು ಅಕಾಡೆಮಿಯ ಅಧ್ಯಕ್ಷ ತಾರನಾಥ ಗಟ್ಟಿ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಪತ್ರಿಕಾ ಛಾಯಾಗ್ರಾಹಕ ರವಿ ಪೊಸವಣಿಕೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರೆಸ್ ಕ್ಲಬ್ ಅಧ್ಯಕ್ಷ ಪಿ. ಬಿ. ಹರೀಶ್ ರೈ, ಆನಂದ ಶೆಟ್ಟಿ, ಭಾಸ್ಕರ್ ರೈ ಕಟ್ಟ, ಗುರುವಪ್ಪ ಬಾಳೆಪುಣಿ ಅವರ ಅಣ್ಣನ ಮಗ ಸುಧೀರ್ ಮುಂತಾದವರು ನುಡಿ ನಮನ ಸಲ್ಲಿಸಿದರು. ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ್ ವಂದಿಸಿದರು.
ಪುತ್ತೂರು: ರಕ್ಷಣೆಗೆಂದು ಬಂದ ಅಗ್ನಿಶಾಮಕದಳದ ಸಿಬ್ಬಂದಿಗಳ ಮೇಲೆ ಬೆಕ್ಕೊಂದು ಅಟ್ಯಾಕ್ ಮಾಡಿರುವ ಘಟನೆ ಪುತ್ತೂರಿನ ತೆಂಕಿಲ ಕ್ರಾಸ್ ಬಳಿ ನಡೆದಿದೆ.
ಅಗ್ನಿಶಾಮಕ ದಳದ ಸಿದ್ದರೂಢ ಮತ್ತು ಮೌನೇಶ್ ಎಂಬವರಿಗೆ ಗಂಭೀರ ಗಾಯಗಳಾಗಿವೆ.
ಏನಿದು ಘಟನೆ ?
ನಿನ್ನೆ (ಜ.27) ತೆಂಕಿಲ ಬಳಿಯ ಲಕ್ಷ್ಮೀ ಎಂಬವರ ಮನೆಯ ಬಾವಿಗೆ ಬೆಕ್ಕು ಬಿದ್ದಿತ್ತು. ಅದರಂತೆ ಇಂದು (ಜ.28) ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಕ್ಕಿನ ರಕ್ಷಣೆಗೆಂದು ಧಾವಿಸಿದ್ದರು. ಬೆಕ್ಕನ್ನ ಹಿಡಿಯಲು ಬಾವಿಯೊಳಗಡೆ ಸಿದ್ದರೂಢ ಮತ್ತು ಮೌನೇಶ್ ಎಂಬವರು ಇಳಿದಿದ್ದರು. ಬಾವಿಯೊಳಗಿನ ಒಂದು ಬಿಲದೊಳಗೆ ಬೆಕ್ಕು ಅವಿತುಕೊಂಡಿತ್ತು. ಬೆಕ್ಕನ್ನ ಹಿಡಿಯಲು ಪ್ರಯತ್ನಿಸಿದಾಗ ಏಕಾಏಕಿ ಅಗ್ನಿಶಾಮಕದಳದ ಇಬ್ಬರ ಮೇಲೆ ಎರಗಿ ಗಂಭೀರ ಗಾಯಗೊಳಿಸಿದೆ. ಸರಿ ಸುಮಾರು ಏಳು ನಿಮಿಷಗಳ ಕಾಲ ಅಗ್ನಿಶಾಮಕ ದಳದ ಸಿಬ್ಬಂದಿಯ ಕೈಯನ್ನ ಬೆಕ್ಕು ಕಚ್ಚಿ ಹಿಡಿದಿತ್ತು.
ಪರಿಣಾಮ ಬೆಕ್ಕು ಕಚ್ಚಿದ ರೋಷಕ್ಕೆ ಬಾವಿಯೊಳಗಡೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ಗಾಯಾಳುಗಳು ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.