Wednesday, February 8, 2023

ವ್ಯಾಟಿಕನ್‌ನಲ್ಲಿ ಆವರಿಸಿದ ಶೋಕ: ಮಾಜಿ ಪೋಪ್ ಬೆನೆಡಿಕ್ಟ್ ನಿಧನ

ವ್ಯಾಟಿಕನ್‌: ಕೆಥೋಲಿಕ್‌ ಕ್ರೈಸ್ತರ ನಿವೃತ್ತ ಪರಮೋಚ್ಛ ಗುರು ಪೋಪ್‌ 16 ನೇ ಬೆನೆಡಿಕ್ಟ್ ಅವರು ಇಂದು ರೋಮ್‌ನಲ್ಲಿರುವ ವ್ಯಾಟಿಕನ್‌ ಸಿಟಿಯ ಮ್ಯಾಟರ್‌ ಇಕ್ಲೇಶಿಯಾ ಮೊನಾಸ್ಟರಿಯಲ್ಲಿ ನಿಧನ ಹೊಂದಿದರು ಎಂದು ವ್ಯಾಟಿಕನ್‌ ಪ್ರಕಟನೆ ತಿಳಿಸಿದೆ.


ಅವರಿಗೆ 95 ವರ್ಷ ವಯಸ್ಸಾಗಿತ್ತು. ಅವರು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೂಲತ: ಜರ್ಮನ್‌ ನಿವಾಸಿಯಾಗಿದ್ದ ಅವರ ಮೂಲ ಹೆಸರು ಜೋಸೆಫ್‌ ರೆಟ್‌ಝಿಂಗರ್‌.


ಪೋಪ್‌ ಪದವಿಗೇರಿದ ಬಳಿಕ ಅವರು 16 ನೇ ಬೆನೆಡಿಕ್ಟ್‌ ಎಂಬ ಅಭಿದಾನ ಪಡೆದುಕೊಂಡಿದ್ದರು. ಅವರು 2005 ಎಪ್ರಿಲ್‌19 ರಿಂದ 2013 ಫೆಬ್ರವರಿ 28 ರ ತನಕ 8 ವರ್ಷಗಳ ಕಾಲ ಪೋಪ್‌ ಅಗಿ ಸೇವೆ ಸಲ್ಲಿಸಿದ್ದರು.


ಅನಾರೋಗ್ಯದ ಕಾರಣದಿಂದ ಅವರು 2013 ರಲ್ಲಿ ಪೋಪ್‌ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅವರ ಉತ್ತರಾಧಿಕಾರಿಯಾಗಿರುವ ಈಗಿನ ಪೋಪ್‌ ಫ್ರಾನ್ಸಿಸ್‌ ಅವರು ಬೆನೆಡಿಕ್ಟ್‌ ಅವರ ಆರೋಗ್ಯ ವಿಚಾರಿಸುತ್ತಿದ್ದು, ಇದೇ ಬುಧವಾರ ಪ್ರಾರ್ಥನೆ ಸಲ್ಲಿಸಲು ಕರೆ ನೀದಿದ್ದರು.

ಅವರ ಪಾರ್ಥಿವ ಶರೀರವನ್ನು ಜನವರಿ 2 ರಂದು ಸೈಂಟ್‌ ಪೀಟರ್ಸ್‌ ಬೆಸಿಲಿಕಾದಲ್ಲಿ ವಿಶ್ವಾಸಿಗಳ ದರ್ಶನಕ್ಕಾಗಿ ಇರಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಪೋಪ್ ಬೆನೆಡಿಕ್ಟ್ 16 ಅವರ ನಿಧನಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಸಂತಾಪ

ಕೆಥೋಲಿಕ್ ಕ್ರೈಸ್ತರ ನಿವೃತ್ತ ಪರಮ ಗುರು ಪೋಪ್ ಬೆನೆಡಿಕ್ಟ್ 16 ಅವರ ನಿಧನಕ್ಕೆ ಮಂಗಳೂರಿನ ಬಿಷಪ್ ಅತಿ ನlವಂದನೀಯ ಪೀಟರ್ ಪಾವ್ಲ್ ಸಲ್ದಾನ ಅವರು ಮಂಗಳೂರು ಧರ್ಮಪ್ರಾಂತ್ಯದ ಸಮಸ್ತ ಕೆಥೋಲಿಕ್ ಕ್ರೈಸ್ತರ ಪರವಾಗಿ ಸಂತಾಪ ವ್ಯಕ್ತಪಡಿಸಿದ್ದಾರೆ.
2005 ಏಪ್ರಿಲ್ 19 ರಿಂದ 2013 ಫೆಬ್ರರಿ 28 ರ ತನಕ ಪೋಪ್ ಆಗಿ ಸಲ್ಲಿಸಿದ ಸೇವೆಯನ್ನು ಬಿಷಪ್ ಸ್ಮರಿಸಿದ್ದು, ಅವರ ಗೌರವಾರ್ಥ ಇಂದು ಎರಡು ಬಾರಿ ಹಾಗೂ ನಾಳೆ ಮತ್ತು ಅಂತ್ಯ ಸಂಸ್ಕಾರ ನಡೆಯುವಂದು ದಿನಕ್ಕೆ ತಲಾ ಮೂರು ಬಾರಿ ಚರ್ಚ್ ಗಂಟೆ ಭಾರಿಸುವಂತೆ ಸೂಚನೆ ನೀಡಿದ್ದಾರೆ.
ಪೋಪ್ ಬೆನೆಡಿಕ್ಟ್ ಅವರ ಪಾರ್ಥಿವ ಶರೀರದ ಅಂತ್ಯವಿಧಿಗಳು ಜನವರಿ 5 ರಂದು ರೋಮ್ ನ ಸೈಂಟ್ ಪೀಟರ್ ಸ್ಕ್ವೇರ್ ನಲ್ಲಿ ಬೆಳಗ್ಗೆ 9.30 ಗಂಟೆಗೆ (ಭಾರತೀಯ ಕಾಲ ಮಾನ ಮಧ್ಯಾಹ್ನ 2 ಗಂಟೆ) ನಡೆಯಲಿದೆ.ಇಂದು ಮತ್ತು ನಾಳೆ ಆರಾಧನೆಯ ಸಂದರ್ಭದಲ್ಲಿ ದಿವಂಗತ ಪೋಪ್ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಪೋಪ್ ಬೆನೆಡಿಕ್ಟ್ ಅವರು ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಈಗಿನ ಪೋಪ್ ಫ್ರಾನ್ಸಿಸ್ ಅವರು ಆಗಿಂದಾಗ್ಗೆ ಬೆನೆಡಿಕ್ಟ್ ಅವರ ನಿವಾಸಕ್ಕೆ ತೆರಳಿ ಅವರ ಆರೋಗ್ಯ ವಿಚಾರಿಸುತ್ತಿದ್ದರು. ಇತ್ತೀಚೆಗೆ ಅವರ ಆರೋಗ್ಯ ವಿಷಮ ಸ್ಥಿತಿಗೆ ತಲುಪಿದಾಗ ಡಿಸೆಂಬರ್ 28 ರಂದು ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ಪೋಪ್ ಫ್ರಾನ್ಸಿಸ್ ಸಾರ್ವಜನಿಕವಾಗಿ ಕರೆ ನೀಡಿದ್ದರು.
ಪೋಪ್ ಬೆನೆಡಿಕ್ಟ್ ಅವರು ಹೆಸರಾಂತ ದೇವ ಶಾಸ್ತ್ರಜ್ಞ ರಾಗಿದ್ದರು ಮಾತ್ರವಲ್ಲದೆ ವಿದ್ವಾಂಸರೂ ಆಗಿದ್ದರು. ಈ ಕುರಿತಂತೆ ಅನೇಕ ಲೇಖನಗಳನ್ನು ಬರೆದಿದ್ದಾರೆ. ಪರಿಸರ ಸಂರಕ್ಷಣೆ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ದೇವರ ಮೇಲೆ ಅಪಾರ ಪ್ರೀತಿ ಮತ್ತು ವಿಶ್ವಾಸ ಹೊಂದಿದ್ದರು. ಅವರ ನಿಧದಿಂದಾಗಿ ಮಹಾನ್ ವ್ಯಕ್ತಿಯನ್ನು ಕಳೆದು ಕೊಂಡಿದ್ದೇವೆ ಎಂದು ಬಿಷಪ್ ಪೀಟರ್ ಪಾವ್ಲ್ ಸಲ್ದಾನ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics