ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯಿ ಕೋವಿಡ್ ಗೆ ಬಲಿ..!
ಗುವಾಹಟಿ: ಕೋವಿಡ್ 19 ನಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯಿ (84) ನಿಧನರಾಗಿದ್ದಾರೆ.
ಕೋವಿಡ್–19 ನಂತರ ಕಾಣಿಸಿಕೊಂಡ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಾಂಗ್ರೆಸ್ ಮುಖಂಡ ತರುಣ್ ಗೊಗೊಯಿ ದಾಖಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿತ್ತು.
ಸದ್ಯದ ಮಾಹಿತಿ ಪ್ರಕಾರ ಮೃತದೇಹವನ್ನು ಶ್ರೀಮಂತ ಶಂಕರ್‌ದೇವ ಕಲಾಕ್ಷೇತ್ರದಲ್ಲಿರಿಸಲಾಗುವುದು. ನಾಳೆ ಮಂಗಳವಾರ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುವುದು ಸರ್ಕಾರಿ ವಕ್ತಾರರು ಮಾಹಿತಿ ನೀಡಿದ್ದಾರೆ.
ಮೂರು ಬಾರಿ ಅಸ್ಸಾಂ ಮುಖ್ಯಮಂತ್ರಿ ಆಗಿದ್ದ ಗೊಗೊಯಿ ಅವರಿಗೆ ಆಗಸ್ಟ್ 26ರಂದು ಕೋವಿಡ್ ದೃಢಪಟ್ಟ ನಂತರ ಆಸ್ಪತ್ರೆಗೆ ದಾಖಲಾಗಿದ್ದರು.
ಚಿಕಿತ್ಸೆ ಪಡೆದು ಮನೆಗೆ ತೆರಳಿ ಆಮೇಲೆ ನವೆಂಬರ್ 2ರಂದು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು.
ನವೆಂಬರ್ 21ರಂದು ಬಹು ಅಂಗಾಂಗ ವೈಫಲ್ಯದಿಂದಾಗಿ ಆರೋಗ್ಯ ತೀವ್ರ ಹದಗೆಟ್ಟಿತ್ತು. ಭಾನುವಾರ ಅವರಿಗೆ ಡಯಾಲಿಸಿಸ್ ಮಾಡಿದ್ದು ಸೋಮವಾರ ಬೆಳಗ್ಗೆ ಆರೋಗ್ಯ ಸ್ಥಿತಿ ಗಂಭೀರವಾಯಿತು ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.
2001ರಿಂದ ತಿತಬೂರ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ ಗೊಗೊಯಿ. 2 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಅವರು 2 ಬಾರಿ ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.