ಕಠ್ಮಂಡು: ಸುಮಾರು 72 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಯೇತಿ ಏರ್‌ಲೈನ್ಸ್ ವಿಮಾನ ರವಿವಾರ ಬೆಳಗ್ಗೆ ನೇಪಾಳದ ಪೋಖರಾ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಪತನಗೊಂಡಿದೆ.
ಪತನಗೊಂಡ ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, ರಕ್ಷಣಾ ಕಾರ್ಯಕರ್ತರು ಬೆಂಕಿಯನ್ನು ನಂದಿಸಲು ಯತ್ನಿಸಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಪೋಖರಾ-ಕಠ್ಮಂಡು ವಿಮಾನದಲ್ಲಿ 68 ಪ್ರಯಾಣಿಕರು ಹಾಗೂ ನಾಲ್ವರು ಸಿಬ್ಬಂದಿ ಇದ್ದರು ಎನ್ನಲಾಗಿದೆ. ಯೇತಿ ಏರ್‌ಲೈನ್ಸ್ ಸೇರಿರುವ ಅವಳಿ-ಎಂಜಿನ್ ಎಟಿಆರ್ 72 ವಿಮಾನವು ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಪೋಖರಾಕ್ಕೆ ಹೊರಟಿತ್ತು.
ಪೋಖರಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಗೆ ಸಮೀಪವಿದ್ದಾಗ ಹಳೆಯ ವಿಮಾನ ನಿಲ್ದಾಣ ಹಾಗೂ ಹೊಸ ವಿಮಾನ ನಿಲ್ದಾಣದ ನಡುವಿನ ಸೇಟಿ ನದಿಯ ದಡದಲ್ಲಿ ವಿಮಾನ ಅಪಘಾತಕ್ಕೀಡಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಮಾನ ಟೇಕ್-ಆಫ್ ಆದ ಸುಮಾರು 20 ನಿಮಿಷಗಳ ನಂತರ ಅಪಘಾತ ಸಂಭವಿಸಿದೆ. 32 ಮಂದಿ ಮೃತದೇಹಗಳನ್ನ ಹೊರಕ್ಕೆ ತೆಗೆಯಲಾಗಿದೆ.
ವಿಮಾನವು ರನ್‌ವೇಗೆ ಅಪ್ಪಳಿಸಿದ್ದು, ಅದರ ರಭಸಕ್ಕೆ ಕೂಡಲೇ ಭಾರೀ ಪ್ರಮಾಣದ ಬೆಂಕಿ ಹೊತ್ತಿಕೊಂಡಿದೆ.
ಮುಗಿಲೆತ್ತರ ಚಿಮ್ಮುತ್ತಿದ್ದ ಅಗ್ನಿ ಜ್ವಾಲೆಗಳನ್ನು ನಂದಿಸಲು ರಕ್ಷಣಾ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ರಕ್ಷಣಾ ಕಾರ್ಯಚರಣೆ ಮುಕ್ತಾಯವಾಗುವವರೆಗೂ ವಿಮಾನ ನಿಲ್ದಾಣಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ.
ಈ ವಿಮಾನದಲ್ಲಿ 53 ಮಂದಿ ನೇಪಾಳಿಗರು, ಐವರು ಭಾರತೀಯರು, ನಾಲ್ವರು ರಷ್ಯನ್ನರು, ಇಬ್ಬರು ಕೊರಿಯನ್ಸ್, ಅರ್ಜೆಂಟೀನಿಯಾ ಹಾಗೂ ಐರಿಶ್ ದೇಶದ ಒಬ್ಬೊಬ್ಬರು ಪ್ರಯಾಣಿಸುತ್ತಿದ್ದರು.
ಪೋಖ್ರಾ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕ ವಿಮಾನ ಅಪಘಾತ ಹಿನ್ನೆಲೆಯಲ್ಲಿ ನೇಪಾಳ ಸರ್ಕಾರ ತುರ್ತು ಕ್ಯಾಬಿನೆಟ್ ಸಭೆ ಕರೆದಿದೆ. ರಕ್ಷಣಾ ಕಾರ್ಯಚರಣೆ ಬಗ್ಗೆ ಚರ್ಚೆಗೆ ತಕ್ಷಣವೇ ಬರುವಂತೆ ಸೂಚನೆ ನೀಡಿದೆ.