ಉಡುಪಿ: ವಿವಾಹವಾಗಿ ಐದು ದಶಕಗಳ ಕಾಲ ಜೊತೆಯಾಗಿ ಬಾಳಿ, ಮಕ್ಕಳು, ಮೊಮ್ಮಕ್ಕಳನ್ನು ಕಂಡು, ಸಿಹಿ ಕಹಿ, ನೋವು ಕಷ್ಟ ಸವಾಲುಗಳನ್ನು ಒಟ್ಟಿಗೇ ಎದುರಿಸಿದ ದಂಪತಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಉಡುಪಿ ಕಾಪು ತಾಲೂಕಿನ ಬೆಳಪುವಿನಲ್ಲಿ ನಡೆದಿದೆ.
ಬೆಳಪು ಗ್ರಾಮದ ಧೂಮಪ್ಪ ಶೆಟ್ಟಿ ಮನೆ ಕೃಷ್ಣ ಯಾನೆ ಕುಟ್ಟಿ ಶೆಟ್ಟಿ (80) ಮತ್ತು ಅವರ ಪತ್ನಿ ಮುಂಡ್ಕೂರು ಅಂಗಡಿಗುತ್ತು ರೇವತಿ ಕೆ. ಶೆಟ್ಟಿ (75) ಸಾವಿನಲ್ಲೂ ಒಂದಾದ ದಂಪತಿ.
ನಿನ್ನೆ ಕೃಷ್ಣ ಯಾನೆ ಕುಟ್ಟಿ ಶೆಟ್ಟಿ ನಿಧನ ಹೊಂದಿದ್ದರೆ, ಅವರ ಪತ್ನಿ ರೇವತಿ ಕೆ. ಶೆಟ್ಟಿ ಇಂದು ಮುಂಜಾನೆ ದೈವಾಧಿನರಾಗಿದ್ದಾರೆ. ಮೃತರು ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಇನ್ನು ಕೃಷ್ಣ ಯಾನೆ ಕುಟ್ಟಿ ಶೆಟ್ಟಿ ಅವರು ವಯೋ ಸಹಜ ಕಾರಣಗಳಿಂದಾಗಿ ಮೃತಪಟ್ಟಿದ್ದು ಮಕ್ಕಳು ಮುಂಬಯಿ ಸಹಿತ ಬೇರೆ ಕಡೆಗಳಲ್ಲಿ ಇರುವುದರಿಂದ ಅವರ ಶವವನ್ನು ಕುಟುಂಬದ ಮೂಲ ಮನೆಯಲ್ಲಿ ಶೈತ್ಯೀಕರಣದ ವ್ಯವಸ್ಥೆಯೊಂದಿಗೆ ಮನೆಯಲ್ಲೇ ಇರಿಸಲಾಗಿತ್ತು.
ಬುಧವಾರ ಮುಂಜಾನೆ ಮಕ್ಕಳು ಮನೆಗೆ ಬರುತ್ತಲೇ ಅವರ ಮೃತದೇಹವನ್ನು ತಮ್ಮ ಸ್ವಂತ ಮನೆಗೆ ತರಲಾಗಿತ್ತು. ಮೃತದೇಹವನ್ನು ಮನೆಯೊಳಗೆ ತಂದು ನೆಲಕ್ಕೆ ಇಟ್ಟ ಕೆಲವೇ ಕ್ಷಣದಲ್ಲಿ ಪತ್ನಿ ರೇವತಿ ಶೆಟ್ಟಿ ಅವರು ಕುಸಿದು ಬಿದ್ದು ಹೃದಯಘಾತದಿಂದ ಮೃತಪಟ್ಟಿದ್ದಾರೆ.
ಸಾವಿನಲ್ಲೂ ಒಂದಾದ ದಂಪತಿಯ ಮೃತದೇಹವನ್ನು ಮಕ್ಕಳು ಮತ್ತು ಕುಟುಂಬಸ್ಥರು ಜೊತೆ ಸೇರಿ ಸಾಮಾಜಿಕ ಕಾರ್ಯಕರ್ತ ಸೂರಿ ಶೆಟ್ಟಿ ನೇತೃತ್ವದಲ್ಲಿ ಬೆಳಪು ಧೂಮಪ್ಪ ಶೆಟ್ಟಿ ಮನೆ ಬಳಿಯ ಜಮೀನಿನಲ್ಲಿ ಸಿದ್ಧಪಡಿಸಿದ ಚಿತೆಯಲ್ಲಿ ಜೋಡಿಯಾಗಿಯೇ ಅಂತ್ಯಕ್ರಿಯೆ ನಡೆಸಲಾಯಿತು.