ಮೀನುಗಾರಿಕಾ ಬೋಟ್ ದುರಂತ : ಸಂತ್ರಸ್ತ ಮೀನುಗಾರರ ಕುಟುಂಬಕ್ಕೆ ತಲಾ ಇಪ್ಪತ್ತೈದು ಲಕ್ಷ ರೂಪಾಯಿ ಪರಿಹಾರಕ್ಕೆ ಡಿವೈಎಫ್ಐ ಆಗ್ರಹ..!
ಮಂಗಳೂರು: ಆಳ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಿದ್ದ ಬೋಟ್ ಅವಘಡಕ್ಕೊಳಗಾಗಿ ಆರು ಜನ ಮೀನುಗಾರರು ಪ್ರಾಣಕಳೆದು ಕೊಂಡಿರುವ ದುರಂತಕ್ಕೆ ಡಿವೈಎಫ್ಐ ದ ಕ ಜಿಲ್ಲಾ ಸಮಿತಿ ತೀವ್ರ ಶೋಕ ವ್ಯಕ್ತ ಪಡಿಸಿದ್ದು, ದುರಂತದಲ್ಲಿ ಬಲಿಯಾದ ಮೀನುಗಾರರ ಬಡ ಕುಟುಂಬಗಳಿಗೆ ತಲಾ ಇಪ್ಪತ್ತೈದು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ಸಮುದ್ರದಲ್ಲಿ ಮೀನು ಹಿಡಿಯುವ ಕಾಯಕ ನಡೆಸುವ ಮೀನುಗಾರರು ಸದಾ ಅಪಾಯವನ್ನು ಎದುರು ನೋಡುತ್ತಾ ತಮ್ಮ ವೃತ್ತಿಯನ್ನು ನಿರ್ವಹಿಸುತ್ತಾರೆ.
ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಬೋಟ್ ಗಳಲ್ಲಿ ವೃತ್ತಿ ನಿರ್ವಹಿಸುವ ಮೀನುಗಾರರು ಬಹುತೇಕರು ಬಡ ಕುಟುಂಬಗಳಿಗೆ ಸೇರಿರುತ್ತಾರೆ.
ಬೋಟ್ ಗಳ ಮಾಲಕರ ಬಳಿ ಕಾರ್ಮಿಕರಾಗಿ ದುಡಿಯುವ ಇವರ ಉದ್ಯೋಗ ಹಾಗು ಬದುಕಿಗೆ ಯಾವುದೇ ಭದ್ರತೆ ಇರುವುದಿಲ್ಲ. ಅಂದಂದಿನ ದುಡಿಮೆಯೇ ಅವರ ಬದುಕಿಗೆ ಆಧಾರ. ಈಗ ಸಂತ್ರಸ್ತರಾಗಿರುವ ಕುಟುಂಬಗಳೂ ಜೀವನ ನಿರ್ವಹಣೆಗೆ ದುರಂತಕ್ಕೆ ಬಲಿಯಾದವರ ದುಡಿಮೆಯನ್ನೇ ಅವಲಂಬಿಸಿದೆ.
ಸಮುದ್ರದಲ್ಲಿ ಯಾವುದೇ ಪ್ರಾಕೃತಿಕ ವೈಪರೀತ್ಯಗಳು ಇಲ್ಲದ ಸಾಮಾನ್ಯ ಸಂದರ್ಭದಲ್ಲಿ ನಡೆದ ಅವಘಡ ಸಹಜವಾಗಿ ಮೀನುಗಾರಿಕೆ ವೃತ್ತಿ ನಿರತರಲ್ಲಿ ಆತಂಕ ಮೂಡಿಸಿದೆ. ಬೋಟ್ ದುರಂತದಲ್ಲಿ ಬಲಿಯಾದ ಆರೂ ಜನರು ತೀರಾ ಬಡತನದ ಕುಟುಂಬಗಳಿಗೆ ಸೇರಿದವರು.
ಇವರ ಕುಟುಂಬಗಳು ಜೀವನ ನಿರ್ವಹಣೆಗೆ ಬಲಿಯಾದವರ ದುಡಿಮೆಯನ್ನೇ ಅವಲಂಬಿಸಿವೆ. ಸರಕಾರ ಸಂತ್ರಸ್ತ ಕುಟುಂಬಗಳ ನೆರವಿಗೆ ಧಾವಿಸದಿದ್ದಲ್ಲಿ ಕುಟುಂಬಗಳು ಬೀದಿಗೆ ಬೀಳಲಿವೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೀನುಗಾರಿಕೆ, ಮತ್ಸ್ಯೋದ್ಯಮ ಸರಕಾರಕ್ಕೆ ವರ್ಷಕ್ಕೆ ನೂರಾರು ಕೋಟಿ ಆದಾಯ ತಂದುಕೊಡುತ್ತಿದೆ.
ಇಂತಹ ಲಾಭದಾಯಕ ಉದ್ಯಮದ ಯಶಸ್ಸಿಗೆ ಕಾರಣರಾದ ಮೀನುಗಾರರು ವೃತ್ತಿ ನಿರತರಾಗಿದ್ದಾಗಲೇ ದುರಂತಕ್ಕೆ ಬಲಿಯಾದಾಗ ಅಂತಹ ಕುಟುಂಗಳಿಗೆ ಆಸರೆ ಒದಗಿಸುವುದು ಸರಕಾರದ ಕರ್ತವ್ಯ.
ಈ ಹಿನ್ನಲೆಯಲ್ಲಿ ಬೋಟ್ ದುರಂತಕ್ಕೆ ಬಲಿಯಾದ ಆರೂ ಜನರ ಕುಟುಂಬಳಿಗೆ ಸರಕಾರ ಕನಿಷ್ಟ ತಲಾ ಇಪ್ಪತ್ತೈದು ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕು, ಮೀನುಗಾರಿಕೆ ವೃತ್ತಿ ನಿರತರ ಜೀವನ ಭದ್ರತೆಗಾಗಿ ಕಲ್ಯಾಣ ಮಂಡಳಿ ಸಹಿತ ನಿಯಮಗಳನ್ನು ರೂಪಿಸಬೇಕು ಎಂದು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.