ನ್ಯೂಯಾರ್ಕ್: ವೈದ್ಯಕೀಯ ವಿಜ್ಞಾನ ದಿನನಿತ್ಯ ಒಂದಿಲ್ಲ ಒಂದು ಪವಾಡಗಳು ನಡೆಯುತ್ತಲೇ ಇವೆ. ಸಾಮಾನ್ಯವಾಗಿ ಕ್ಯಾನ್ಸರ್ ರೋಗಗಳಲ್ಲಿ ಹಲವು ವಿಧಗಳಿವೆ.
ಈ ಪೈಕಿ ಗುದನಾಳದ ಕ್ಯಾನ್ಸರ್ ಹೆಚ್ಚು ಅಪಾಯಕಾರಿ ಎಂದು ವೈದ್ಯಕೀಯ ಲೋಕವೇ ಒಪ್ಪಿಕೊಂಡಿದೆ. ಇಂಥ ಅಪಾಯಕಾರಿ ರೋಗಕ್ಕೆ ಮದ್ದು ಕಂಡುಹಿಡಿದಿದ್ದಾರೆ.
ಸಣ್ಣ ಪ್ರಮಾಣದ ವೈದ್ಯಕೀಯ ಪ್ರಯೋಗದ ಭಾಗವಾಗಿ 18 ಮಂದಿ ಗುದನಾಳ ಕ್ಯಾನ್ಸರ್ ಅನ್ನು ಹೊಂದಿರುವ ರೋಗಿಗಳಿಗೆ ದೋಸ್ಟಾರ್ಲಿಮಾಬ್ ಎಂಬ ಔಷಧವನ್ನು ನೀಡಲಾಯಿತು.
ಈ ಔಷಧಿಯನ್ನು 6 ತಿಂಗಳವರೆಗೂ ತೆಗೆದುಕೊಂಡ ರೋಗಿಗಳಲ್ಲಿ ಅದಕ್ಕೂ ಮೊದಲು ಗುದನಾಳದಲ್ಲಿ ಕಾಣಿಸಿಕೊಂಡಿದ್ದ ಕ್ಯಾನ್ಸರ್ ಗಡ್ಡೆಗಳು ಮಾಯವಾಗುವ ಮೂಲಕ ಹೊಸ ಪವಾಡವನ್ನೇ ಸೃಷ್ಟಿಸಿವೆ ಎಂದು ವರದಿಯಾಗಿದೆ.
ನ್ಯೂಯಾರ್ಕ್ ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್ ನ ಡಾ. ಲೂಯಿಸ್ ಎ, ಡೈಯಾಜ್ ಜೆ ಈ ಕುರಿತು ಮಾತನಾಡಿದ್ದಾರೆ. ಕ್ಯಾನ್ಸರ್ ರೋಗಕ್ಕೆ ನೀಡಿದ ಚಿಕಿತ್ಸೆಯು ಇತಿಹಾಸದಲ್ಲಿಯೇ ಮೊದಲ ಬಾರಿ ಯಶಸ್ವಿಯಾಗಿದೆ ಎಂದಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ವೈದ್ಯಕೀಯ ಪ್ರಯೋಗದ ಭಾಗವಾಗಿ ಗುರುತಿಸಿಕೊಂಡ ರೋಗಿಗಳು ಈ ಮೊದಲು ಕೂಡ ಬೇರೆ ಬೇರೆ ಚಿಕಿತ್ಸಾ ವಿಧಾನಗಳನ್ನು ಪಡೆದುಕೊಂಡಿದ್ದರು. ಆದರೆ ಅದ್ಯಾವ ಚಿಕಿತ್ಸೆಗಳೂ ಸಹ ಫಲಕಾರಿ ಎನಿಸಿರಲಿಲ್ಲ.
ಉದಾಹರಣೆಗೆ ಕಿಮೊಥೆರಪಿ, ವಿಕಿರಣ ಮತ್ತು ಆಕ್ರಮಣಕಾರಿ ಶಸ್ತ್ರಚಿಕಿತ್ಸೆಯಂತಹ ಚಿಕಿತ್ಸೆಗಳು ಕರುಳು, ಮೂತ್ರ ಮತ್ತು ಲೈಂಗಿಕ ಅಪಸಾಮಾನ್ಯ ಕ್ರಿಯೆಗೆ ಕಾರಣವಾಗುವ ಅಪಾಯವಿತ್ತು. ಈ ಹಿನ್ನೆಲೆ 18 ರೋಗಿಗಳು
ಮುಂದಿನ ಹಂತದಲ್ಲಿ ತಮ್ಮ ರೋಗವನ್ನು ತೊಡೆದು ಹಾಕುವ ಉದ್ದೇಶದಿಂದಾಗಿಯೇ ಪ್ರಯೋಗದಲ್ಲಿ ಭಾಗವಹಿಸುವುದಕ್ಕೆ ಒಪ್ಪಿಕೊಂಡಿದ್ದು, ಉತ್ತಮ ಫಲಿತಾಂಶವನ್ನು ಕಂಡುಕೊಂಡಿದ್ದಾರೆ.
ಈ ಸಂಶೋಧನೆಯು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಭಾನುವಾರ (ಜೂನ್ 6) ಪ್ರಕಟವಾಗಿದೆ. ಈ ಅಧ್ಯಯನಕ್ಕೆ ಔಷಧ ತಯಾರಕ ಕಂಪನಿ ಗ್ಲಾಕ್ಸೊ ಸ್ಮಿತ್‌ಕ್ಲೈನ್ ಬೆಂಬಲಿಸಿದೆ.