ಝಳಕಿ: ಹತ್ತಿ ಹೊತ್ತೊಯ್ಯುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಾಗಿದ್ದರಿಂದ ಲಕ್ಷಾಂತರ ರೂ.ಮೌಲ್ಯದ ಹತ್ತಿ ಲಾರಿ ಸಮೇತ ಸುಟ್ಟು ಕರಕಲಾದ ಘಟನೆ ರಾಷ್ಟ್ರೀಯ ಹೆದ್ದಾರಿ 52 ರ ಝಳಕಿ ಬಳಿ ರಾತ್ರಿ ನಡೆದಿದೆ.
ಆದರೆ ಲಾರಿಗೆ ಬೆಂಕಿ ತಾಗಿದ ವಿಷಯ ತಿಳಿದು ಚಾಲಕ ಹಾಗೂ ಕ್ಲೀನರ್ ವಾಹನದಿಂದ ಕೆಳಗಿಳಿಯುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ದುರ್ಘಟನೆಯಿಂದಾಗಿ ಝಳಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿದ್ದರಿಂದ ಕಿಲೋ ಮೀಟರ್ ಗಟ್ಟಲೆ ವಾಹನಗಳು ಸರದಿ ಸಾಲಿನಲ್ಲಿ ನಿಂತಿದ್ದವು.
ಇದರಿಂದಾಗಿ ದೂರದೂರಿಗೆ ಹೋಗಬೇಕಿದ್ದ ವಾಹನಗಳು ಹಾಗೂ ಪ್ರಯಾಣಿಕರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ಸೋಲಾಪುರದಿಂದ ವಿಜಯಪುರದತ್ತ ಹೊರಟಿದ್ದ ತಮಿಳುನಾಡು ಮೂಲದ ಲಾರಿಗೆ ಬೆಂಕಿ ತಾಗಿ ಅರ್ಧ ಗಂಟೆ ಕಳೆದರೂ ಅಗ್ನಿಶಾಮಕ ಠಾಣೆ ವಾಹನಗಳು ಬೆಂಕಿ ನಂದಿಸಲು ಬರಲಿಲ್ಲ. ಝಳಕಿಯಲ್ಲಿ ಇಂಥ ದುರ್ಘಟನೆಗಳು ಮೇಲಿಂದ ಮೇಲೆ ಸಂಭವಿಸುತ್ತವೆ.
ಆದರೆ ಝಳಕಿಯಲ್ಲಿ ಅಗ್ನಿಶಾಮಕ ಠಾಣೆಯಿಲ್ಲ. ಹಾಗಾಗಿ ಸರಕಾರ ಝಳಕಿಯಲ್ಲಿ ಅಗ್ನಿಶಾಮಕ ಠಾಣೆ ಮಂಜೂರು ಮಾಡಬೇಕೆಂದು ಝಳಕಿ ಹಾಗೂ ಸುತ್ತಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಕುರಿತು ಝಳಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.