ವಿಟ್ಲ: ಬಂಟ್ವಾಳ ತಾಲ್ಲೂಕಿನ ಕೆಲಿಂಜ ಸಮೀಪದ ಕಲ್ಮಲೆಯ ಗುಡ್ಡದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳೀಯರು ಭಯಭೀತರಾಗಿದ್ದು ಯಾರೋ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಗುಡ್ಡೆಗೆ ಬೆಂಕಿ ಕೊಟ್ಟಿರಬೇಕು ಎಂಬ ಸಂಶಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಶನಿವಾರ ಮದ್ಯಾಹ್ನದಿಂದ ಬೆಂಕಿಯ ಕೆನ್ನಾಲಿಗೆಗೆ ಗುಡ್ಡವು ಸುಟ್ಟು ಕರಕಲಾಗುತ್ತಿದೆ. ಅಷ್ಟೇ ಅಲ್ಲದೆ ಬೆಲೆಬಾಳುವ ಮರಗಳ ಸಹಿತ ಗುಡ್ಡದಲ್ಲಿ ಮುಳಿ ಹುಲ್ಲು ಹೆಚ್ಚಾಗಿದ್ದು ಬೆಂಕಿ ವೇಗವಾಗಿ ಹರಡುತ್ತಿದೆ. ಅಧಿಕಾರಿಗಳಿಗೆ ಈ ಬಗ್ಗೆ ಸ್ಥಳೀಯರು ಮಾಹಿತಿಯನ್ನು ನೀಡಿದ್ದು ನಿನ್ನೆಯಿಂದ ಅಧಿಕಾರಿಗಳು ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಶತಪ್ರಯತ್ನ ನಡೆಸುತ್ತಿದ್ದಾರೆ.
ಆದರೂ ಬೆಂಕಿಯ ತೀವ್ರತೆ ಕಡಿಮೆಯಾಗಿಲ್ಲ. ಬೆಂಕಿಯ ತೀವ್ರತೆ ಹೆಚ್ಚಾಗಿ ಗುಡ್ಡೆಯ ಹತ್ತಿರದಲ್ಲಿರುವ ಮನೆಗಳಿಗೆ ಹಾನಿಯಾಗುವ ಅಪಾಯವು ಹೆಚ್ಚಾಗಿ ಇರುವುದರಿಂದ ಇಲ್ಲಿನ ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಇದಕ್ಕೆ ಅನುಗುಣವಾಗಿ ಕೆಲಿಂಜದ ಈ ಗುಡ್ಡಕ್ಕೆ ಹೋಗಲು ರಸ್ತೆಯ ಸಮಸ್ಯೆಯಿರುವುದರಿಂದ ಬೆಂಕಿ ನಂದಿಸಲು ನಡೆಸುವ ಪ್ರಯತ್ನ ಗಳು ವಿಫಲವಾಗುತ್ತಿದೆ.
ಅಗ್ನಿಶಾಮಕದಳದ ವಾಹನ ಹೋಗಲು ದಾರಿಯಿಲ್ಲ. ಹಾಗಾಗಿ ಸ್ಥಳೀಯರು ಅಧಿಕಾರಿಗಳು ಹಸಿರು ಗಿಡಗಳಿಂದ ಬೆಂಕಿ ನಂದಿಸಲು ಪ್ರಯತ್ನ ಮಾಡುತ್ತಿದ್ದಾರೆ.
ನಿರಂತರವಾಗಿ ಇಲ್ಲಿನ ಯುವಕರ ತಂಡ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಗುಡ್ಡ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.