ಪಾಟ್ನಾ: ಪಾಟ್ನಾದಿಂದ ದೆಹಲಿಗೆ ತೆರಳುತ್ತಿದ್ದ ಸ್ಪೈಸ್ ಜೆಟ್ ಬೋಯಿಂಗ್ 737 ವಿಮಾನದಲ್ಲಿ ಆಕಸ್ಮಿಕ ಬೆಂಕಿ ಕಂಡು ಬಂದ ಹಿನ್ನೆಲೆ ಟೇಕ್ ಆಫ್ ಕೆಲವೇ ನಿಮಿಷಗಳಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದ್ದು, ಅದೃಷ್ಟವಶಾತ್ ಪೈಲೆಟ್ ಸಮಯ ಪ್ರಜ್ಞೆ 185 ಮಂದಿ ಪ್ರಯಾಣಿಕ ಜೀವ ಉಳಿಸಿದೆ.
ವಿಮಾನ ತುರ್ತು ಭೂ ಸ್ಪರ್ಶದ ಮೂಲಕ ನೂರಾರು ಪ್ರಯಾಣಿಕರ ಜೀವ ರಕ್ಷಣೆಗೆ ಕಾರಣರಾದ ಮಹಿಳಾ ಪೈಲಟ್ ಮೋನಿಕಾ ಖನ್ನಾ ಕಾರ್ಯವನ್ನು ಸಾರ್ವಜನಿಕರು ಮತ್ತು ಅಧಿಕಾರಿಗಳು ಶ್ಲಾಘಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಶ್ ಟ್ಯಾಗ್ ಬಳಸಿ ಮೊನಿಕಾ ಖನ್ನಾ ಎಂದು ಪೋಸ್ಟ್ ಹಾಕಿ ಪ್ರಶಂಸಿದ್ದಾರೆ. ಟೇಕ್ ಆಫ್ ಆದ ಸ್ವಲ್ಪ ಹೊತ್ತಿನಲ್ಲೇ ವಿಮಾನದ ಇಂಜಿನ್‌ಗೆ ಹಕ್ಕಿ ಬಡಿದ್ದರಿಂದ ಬೆಂಕಿ ಕಂಡು ಬಂದ ಪರಿಣಾಮ ಪೈಲಟ್ ವಿಮಾನದ ಒಂದು ಇಂಜಿನ್ ಅನ್ನು ಸ್ಥಗಿತಗೊಳಿಸಿದ್ದಾರೆ.
ನಂತರ ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ ಮೋನಿಕಾ ಒಂದೇ ಇಂಜಿನ್ ಸಹಾಯದಿಂದ ಪುನಃ ಪಾಟ್ನಾಕ್ಕೆ ತಂದು ತುರ್ತು ಭೂಸ್ಪರ್ಶ ಮಾಡಿಸಿದ್ದಾರೆ.
ಇದರಿಂದ ಸಂಭವನೀಯ ಬೃಹತ್ ಅವಘಡವೊಂದು ತಪ್ಪಿದೆ. ಪ್ರಯಾಣಿಕರಲ್ಲಿ ಯಾರಿಗೂ ಗಾಯಗಳಾಗಿಲ್ಲ. ಅವರೆಲ್ಲರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು.