ಕುಂದಾಪುರ: ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಕಾರಣ ಮನೆಯೊಳಗೆ ಮಂಚದಲ್ಲಿ ಮಲಗಿದ್ದ ವ್ಯಕ್ತಿಗೆ ಬೆಂಕಿ ತಗುಲಿ ಮಲಗಿದ್ದಲ್ಲಿಯೇ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಗಣೇಶ್ ಖಾರ್ವಿ (45) ಎಂದು ಗುರುತಿಸಲಾಗಿದೆ.
ಘಟನೆ ಹಿನ್ನೆಲೆ
ಗಂಗೊಳ್ಳಿ ಗ್ರಾಮದಲ್ಲಿರುವ ಗಣೇಶ್ ಖಾರ್ವಿ ಹಾಗೂ ಪತ್ನಿ ಯಶೋಧ ಖಾರ್ವಿ ಜೊತೆ ವಾಸಿಸುತ್ತಿದ್ದರು. ಎ.3 ರಂದು ಬೆಳಿಗ್ಗೆ 8:15 ಗಂಟೆಗೆ ಕೆಲಸದ ನಿಮಿತ್ತ ಯಶೋಧ ಖಾರ್ವಿ ಮನೆಯಿಂದ ಹೋಗಿದ್ದಾರೆ. ಈ ವೇಳೆ ಮನೆಯಲ್ಲಿ ಅವರ ಗಂಡ ಗಣೇಶ್ ಖಾರ್ವಿರವರು ಒಬ್ಬರೇ ಇದ್ದರು.
ಬೆಳಿಗ್ಗೆ 8:30ಕ್ಕೆ ಪಕ್ಕದ ಮನೆಯ ಗಿರಿಜಾ ಎಂಬ ಮಹಿಳೆ ಯಶೋಧ ಖಾರ್ವಿ ಅವರ ಬಳಿ ಬಂದು ನಿಮ್ಮ ಮನೆಗೆ ಬೆಂಕಿ ಬಿದ್ದಿದೆ ಎಂದು ತಿಳಿಸಿದ್ದಾರೆ. ತಕ್ಷಣ ಮನೆ ಕಡೆ ಓಡಿಹೋದಾಗ ನೆರೆಕೆರೆಯವರೆಲ್ಲ ಸೇರಿ ಬೆಂಕಿಯನ್ನು ನಂದಿಸುತ್ತಿದ್ದರು.
ಈ ವೇಳೆ ಮನೆಯ ಒಳಗೆ ಮಂಚದಲ್ಲಿ ಮಲಗಿದ್ದ ಗಣೇಶ್ ಖಾರ್ವಿ ಸುಟ್ಟ ಗಾಯವಾಗಿ ಮಲಗಿದ್ದಲ್ಲಿಯೇ ಮೃತಪಟ್ಟಿದ್ದರು. ಜೊತೆಗೆ ಮನೆಗೆ ಕಟ್ಟಿದ ಪ್ಲಾಸ್ಟಿಕ್ ಟಾರ್ಪಲ್, ಚಿನ್ನದ ಕರಿಮಣಿ ಸರ ಮತ್ತು ಸ್ವಲ್ಪ ಹಣ ಪ್ಲೈವುಡ್ ಹಲಗೆಗಳು ಸುಟ್ಟುಹೋಗಿತ್ತು.
ಬೆಳಿಗ್ಗೆ 8:30 ಗಂಟೆಗೆ ಮನೆಯಲ್ಲಿ ದೇವರಿಗೆ ಹಚ್ಚಿಟ್ಟ ದೀಪದ ಬೆಂಕಿಯು ಮನೆಗೆ ಕಟ್ಟಿದ ಪ್ಲಾಸ್ಟಿಕ್ ಟಾರ್ಪಲ್‌ಗೆ ತಗುಲಿ ಮನೆಗೆ ಬೆಂಕಿ ತಾಗಿ ಸುಟ್ಟು ಹೋಗಿ ಮನೆಯ ಒಳಗೆ ಮಂಚದಲ್ಲಿ ಮಲಗಿದ್ದ ಗಣೇಶ್ ಖಾರ್ವಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.