ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಆಡಳಿತ ಮಂಡಳಿ ಸದಸ್ಯರ ಸಭೆ ನಗರದ ಬಂಟ್ಸ್ ಹಾಸ್ಟೆಲ್ ನಲ್ಲಿರುವ ಅಮೃತೋತ್ಸವ ಕಟ್ವಡದ ಸಭಾಂಗಣದಲ್ಲಿ ಇಂದು ನಡೆಯಿತು.
ಒಕ್ಕೂಟ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ನೇತೃತ್ವದಲ್ಲಿ ನಡೆದ ಸಭೆಯನ್ನು ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಮಾತನಾಡಿ, ಈ ಸಮಾಜದಲ್ಲಿ ಎಷ್ಟೋ ಮಂದಿ ದೇಶಕ್ಕಾಗಿ ತಮ್ಮ ಬದುಕು ಸವೆಸುತ್ತಾರೆ. ಮೊಹಮ್ಮದ್ ಪೈಗಂಬರ್, ಬಸವಣ್ಣ, ಯೇಸು ಕ್ರಿಸ್ತರು ಈ ಲೋಕ ಉದ್ದಾರಕ್ಕಾಗಿ ತಮ್ಮ ಬದುಕು ಸೆವೆಸಿದವರು ಅವರುಗಳು ಬಾಳಿ ಬದುಕಿದ ಜೀವನ ಕ್ರಮ ನಮಗೆ ಮಾದರಿ ಎಂದರು.
ನಮ್ಮ ಕುಡ್ಲ ವಾಹಿನಿಯ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ ಮಾತನಾಡಿ ಪ್ರತಿಯೊಬ್ಬ ಬಂಟರಲ್ಲಿ ನಾಯಕತ್ವದ ಗುಣ ಇದೆ.
ರಾಜಕೀಯ, ವೈದ್ಯಕೀಯ ಕ್ಷೇತ್ರ ಸೇರಿ ಹಲವು ಕ್ಷೇತ್ರದಲ್ಲಿ ಬಂಟರು ಉತ್ತಮ ಸಾಧನೆ ಮಾಡಿದ್ದಾರೆ ಎಂದರು. ಬಂಟರ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಸಮಾಜ ಸೇವೆಯನ್ನು ನಾವೆಲ್ಲರೂ ಪ್ರೀತಿಯಿಂದ ಮಾಡಬೇಕು. ನೊಂದವರ ಪಾಲಿಗೆ ಸ್ಪಂದಿಸುವ ಮಾನವೀಯ ಹೃದಯ ನಮ್ಮದಾಗಬೇಕು ಎಂದರು.
ಕರ್ನಿರೆ ವಿಶ್ವನಾಥ ಶೆಟ್ಟಿ, ಸತೀಶ್ ಅಡಪ, ಒಕ್ಕೂಟದ ಕಾರ್ಯಕರ್ತ ಜಯಕರ ಶೆಟ್ಟಿ ಇಂದ್ರಾಳಿ, ಪಟ್ಲ ಸತೀಶ್ ಶೆಟ್ಟಿ, ಪುರುಷೋತ್ತಮ ಭಂಡಾರಿ ಅಡ್ಯಾರ್ ಸೇರಿದಂತೆ ಹಲವಾರು ಮಂದಿ ಅತಿಥಿ -ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮಂಗಳೂರು/ವಾಷಿಂಗ್ಟನ್ : ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಲಿದ್ದು, ಎಪ್ರಿಲ್‌ನಲ್ಲಿ ಭಾರತಕ್ಕೆ ಪ್ರವಾಸ ಕೈಗೊಳ್ಳುವ ಸಾಧ್ಯತೆಗಳಿವೆ.
ಟ್ರಂಪ್ ಪ್ರಮಾಣವಚನ ಸ್ವೀಕರಿಸಿದ ಮೊದಲ ದಿನವೇ ಶ್ವೇತಭವನದಲ್ಲಿ 100ಕ್ಕೂ ಅಧಿಕ ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಲಿದ್ದಾರೆ. ಟ್ರಂಪ್ ಅವರ ತಂಡವು ಈಗಾಗಲೇ ಅಗತ್ಯ ಸಿದ್ದತೆ ಮಾಡಿಕೊಂಡಿದ್ದು, ಓವಲ್ ಕಚೇರಿಯಲ್ಲಿರುವ ಡೆಸ್ಕ್‌ನಲ್ಲಿ ಆದೇಶ ಪ್ರತಿಗಳು ಸಿದ್ದಗೊಂಡಿದೆ. ಎರಡನೇ ಅವಧಿಗೆ ಅಧ್ಯಕ್ಷರಾಗುತ್ತಿದ್ದಂತೆಯೇ, ಒಂದು ನಿಮಿಷವೂ ವ್ಯರ್ಥ ಮಾಡದಂತೆ, ಚುನಾವಣೆ ಸಂದರ್ಭದಲ್ಲಿ ನೀಡಿದ ಹಲವು ಭರವಸೆಗಳನ್ನು ಈಡೇರಿಸುವ ನಿರೀಕ್ಷೆಗಳಿವೆ.
ಟ್ರಂಪ್ ಭಾರತ ಪ್ರವಾಸ
ಡೊನಾಲ್ಡ್ ಟ್ರಂಪ್ ಅವರು ಈ ವರ್ಷದ ಎಪ್ರಿಲ್‌ನಲ್ಲಿ ಭಾರತಕ್ಕೆ ಪ್ರವಾಸ ಕೈಗೊಳ್ಳುವ ಸಾಧ್ಯತೆಗಳಿವೆ. ಈ ಬಗ್ಗೆ ಅವರು ತಮ್ಮ ಸಲಹೆಗಾರರ ಜತೆಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ತಿಂಗಳು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಮೆರಿಕ ಭೇಟಿ ವೇಳೆ ಈ ಕುರಿತು ಪ್ರಾಥಮಿಕ ಚರ್ಚೆಗಳು ನಡೆದಿವೆ ಎನ್ನಲಾಗಿದೆ.
ಚೀನ ಜತೆಗೆ ಉತ್ತಮ ಬಾಂಧವ್ಯ ಹೊಂದಲು ನಿರ್ಧರಿಸಿರುವ ಟ್ರಂಪ್, ಅಧಿಕಾರ ಸ್ವೀಕಾರ ಬಳಿಕ ಚೀನದ ರಾಜಧಾನಿ ಬೀಜಿಂಗ್‌ಗೆ ಭೇಟಿ ನೀಡಲು ಸಹ ಬಯಸಿರುವುದಾಗಿ ತಮ್ಮ ಸಲಹೆಗಾರರಿಗೆ ಹೇಳಿದ್ದಾರೆ ಎಂದು ವರದಿಯಾಗಿದೆ.
ಭಾರತ ಕ್ವಾಡ್ ಶೃಂಗಸಭೆಯ ಆತಿಥ್ಯ
ಭಾರತ, ಅಮೆರಿಕ, ಜಪಾನ್ ಒಳಗೊಂಡ ಕ್ವಾಡ್ ಶೃಂಗಸಭೆಯ ಆತಿಥ್ಯವನ್ನು ಈ ಬಾರಿ ಭಾರತ ವಹಿಸಲಿದೆ. ಹೀಗಾಗಿ ಟ್ರಂಪ್ ಭಾರತ ಭೇಟಿ ಎಪ್ರಿಲ್ ಅಥವಾ ಈ ವರ್ಷದ ಕೊನೆಗೆ ನಡೆಯಬಹುದು ಎನ್ನಲಾಗಿದೆ. ಜೊತೆಗೆ ಇದೇ ವರ್ಷದಲ್ಲಿ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೂಡ ಅಮೆರಿಕಕ್ಕೆ ಆಹ್ವಾನಿಸುವ ಸಾಧ್ಯತೆಗಳಿವೆ.
ಉಡುಪಿ : ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಹಿಂದಕ್ಕೆ ಸರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ವೈಯಕ್ತಿಕ ಕಾರಣಗಳಿಂದಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ವಿಪರೀತ ಚರ್ಚೆಗಳು ಚಾಲ್ತಿಯಲ್ಲಿರುವಾಗಲೇ ಮಾಜಿ ಸಚಿವ ಸುನಿಲ್ ಕುಮಾರ್ ಪ್ರಯಾಗ್ ರಾಜ್‌ಗೆ ತೆರಳಿದ್ದಾರೆ. ಗಂಗಾ ಯಮುನಾ ಸರಸ್ವತಿ ಸಂಗಮ ಸ್ಥಾನದಲ್ಲಿ ಪುಣ್ಯ ಸ್ನಾನ ಕೈಗೊಂಡಿದ್ದಾರೆ.
ಕುಟುಂಬ ಸಹಿತ ಭಾಗವಹಿಸಿರುವ ಅವರು ಸನಾತನ ಪರಂಪರೆಯ ಈ ಅಪೂರ್ವ ಘಳಿಗೆಯಲ್ಲಿ ಭಾಗಿಯಾಗುತ್ತಿರುವುದು ಸಂತೋಷ ನೀಡಿದೆ ಎಂದು ಹೇಳಿದ್ದಾರೆ. ಉತ್ತರ ಪ್ರದೇಶ ಸರಕಾರ ಕೈಗೊಂಡಿರುವ ಕುಂಭಮೇಳ ವ್ಯವಸ್ಥೆಗಳನ್ನು ಹಾಡಿ ಕೊಂಡಾಡಿದ್ದಾರೆ.
ದೇಶದ ಮೂಲೆ ಮೂಲೆಯಿಂದ ಜನರು ಬಂದು ಕುಂಭಮೇಳದಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.
ಮಂಗಳೂರು/ಪ್ರಯಾಗ್ ರಾಜ್ : ಮಹಾಕುಂಭಮೇಳ ಅದ್ದೂರಿಯಾಗಿ ನಡೆಯುತ್ತಿದೆ. ಕೋಟ್ಯಂತರ ಭಕ್ತರು ತೀರ್ಥ ಸ್ನಾನ ಮಾಡಿ ಪುನೀತರಾಗುತ್ತಿದ್ದಾರೆ. ಕುಂಭಮೇಳ ಎಂದ ಮೇಲೆ ಅಲ್ಲಿಗೆ ಬರುವ ಸಾಧು, ಸಂತರತ್ತ ಎಲ್ಲರ ಚಿತ್ತ ಇರುತ್ತದೆ. ವಿಭಿನ್ನ ಬಗೆಯ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ ನಾಗಸಾಧುಗಳು ಗಮನ ಸೆಳೆಯುತ್ತಿರುತ್ತಾರೆ. ಈ ಬಾರಿಯೂ ಅನೇಕ ಸಾಧುಗಳು ವಿಶಿಷ್ಟವಾಗಿ ಕಂಗೊಳಿಸಿದ್ದಾರೆ. ಅವರಲ್ಲಿ ಐಐಟಿ ಬಾಬಾ ಕೂಡ ಒಬ್ಬರು.
ಮುಂಬೈನ ಪ್ರತಿಷ್ಠಿತ ಸಂಸ್ಥೆಯಲ್ಲಿ ಓದಿರುವ, ಸದ್ಯ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಖ್ಯಾತಿ ಗಳಿಸುತ್ತಿರುವ ಐಐಟಿ ಬಾಬಾ ಅಭಯ್ ಸಿಂಗ್ (ಮಸಾನಿ ಗೋರಖ್) ಬಗ್ಗೆ ಎಲ್ಲೆಡೆ ವೈರಲ್ ಆಗುತ್ತಿದೆ. ಅಭಯ್ ಸಿಂಗ್ ಹರಿಯಾಣದ ಜಜ್ಜರ್ ಜಿಲ್ಲೆಯವರು. ಐಐಟಿ ಪದವೀಧರ ಎಂಬ ವಿಚಾರ ಹೊರಬೀಳುತ್ತಿದ್ದಂತೆ ಎಲ್ಲೆಡೆ ಅವರದ್ದೇ ಸುದ್ದಿ. ಐಐಟಿ ಓದಿ, ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಮಾಡಿ ಈಗ ಎಲ್ಲಾ ತೊರೆದು ಸಾಧುವಾಗಿರುವ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ.
ಇದೀಗ ಅವರ ತಂದೆ, ಮಗನ ಹಂಬಲದಲ್ಲಿದ್ದಾರೆ. ಮರಳಿ ಮನೆಗೆ ಬಾ ಎಂದು ಕರೆಯುತ್ತಿದ್ದಾರೆ. ಅಭಯ್ ಸಿಂಗ್ ತಂದೆ ಕರಣ್ ಗ್ರೆವಾಲ್, ಆರು ತಿಂಗಳ ಹಿಂದೆ ತನ್ನ ಮಗನೊಂದಿಗೆ ಕೊನೆಯದಾಗಿ ಮಾತಾಡಿದ್ದಂತೆ. ಬಳಿಕ ಅಭಯ್ ಕುಟುಂಬದಿಂದ ದೂರವಾಗಿದ್ದರು. ಹಾಗಾಗಿ ಮಗನಿಗಾಗಿ ಹಂಬಲಿಸಿರುವ ಕುಟುಂಬ ಮರಳಿ ಬರಲು ಬೇಡುತ್ತಿದೆ.
ಅಭಯ್ ಸಿಂಗ್ ಓದಿನಲ್ಲಿ ಬುದ್ದಿವಂತನಾಗಿದ್ದ. ಐಐಟಿ ಬಾಂಬೆಯಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದ. ಬಳಿಕ ಸ್ನಾತಕೋತ್ತರ ಪದವಿಯನ್ನು ಪಡೆದ. ದೆಹಲಿ ಮತ್ತು ಕೆನಡಾದಲ್ಲಿ ಕೆಲಸ ಮಾಡಿದ. ಅಂತಿಮವಾಗಿ ಕೆನಡಾವನ್ನು ತೊರೆದು ಭಾರತಕ್ಕೆ ಮರಳಿ, ಶಿಮ್ಲಾ, ಮಸ್ಸೂರಿ ಮತ್ತು ಧರ್ಮಶಾಲಾದಂತಹ ಆಧ್ಯಾತ್ಮಿಕ ಸ್ಥಳಗಳಲ್ಲಿ ಧ್ಯಾನದಲ್ಲಿ ತೊಡಗಿಸಿಕೊಂಡು ಸನ್ಯಾಸದತ್ತ ವಾಲಿದ ಎಂದು ತಂದೆ ಹೇಳಿದ್ದಾರೆ.
ಆರು ತಿಂಗಳ ಹಿಂದೆ ನಾನು ಅವನೊಂದಿಗೆ ಸಂಪರ್ಕದಲ್ಲಿದ್ದೆ. ಅದರ ನಂತರ, ನನ್ನೊಂದಿಗೆ ಎಲ್ಲಾ ಸಂವಹನವನ್ನು ನಿರ್ಬಂಧಿಸಿದ. ಆತ ಹರಿದ್ವಾರದಲ್ಲಿದ್ದ ಎಂದು ಕೇಳಿ ಭೇಟಿ ಮಾಡಲು ಬಯಸಿದ್ದೆ. ಆದರೆ ಸಾಧ್ಯವಾಗಲಿಲ್ಲ, ಈಗ ಮಾಧ್ಯಮಗಳಲ್ಲಿ ವೈರಲ್ ಆಗಿದ್ದಾನೆ ಎಂದು ಭಾವುಕರಾಗಿದ್ದಾರೆ.
ಅಭಯ್ ಸಿಂಗ್ ತಾಯಿಯೂ ಕೂಡ ಸನ್ಯಾಸ ತೊರೆದು ಬರುವಂತೆ ಕೇಳಿಕೊಂಡಿದ್ದರು. ಆದರೆ ಒಮ್ಮೆ ಸಂನ್ಯಾಸದ ನಿರ್ಧಾರ ತೆಗೆದುಕೊಂಡ ಬಳಿಕ ಮರಳಿ ಬರುವುದು ಅಸಾಧ್ಯ ಎನ್ನುವುದು ಆತನ ನಿರ್ಧಾರವಾಗಿತ್ತು ಎಂದು ತಿಳಿಸಿದ್ದಾರೆ.
ಮಹಾಕುಂಭ ಮೇಳದಿಂದ ಐಐಟಿ ಬಾಬಾ ನಾಪತ್ತೆ:
ಇತ್ತ ಮಹಾಕುಂಭ ಮೇಳದಲ್ಲಿ ಸುದ್ದಿಯಾಗಿರುವ ಐಐಟಿ ಬಾಬಾ ಅಭಯ್ ಸಿಂಗ್ ನಾಪತ್ತೆಯಾಗಿದ್ದಾರೆ. ಅವರು ಸಂಗಮ ನಗರ ತೊರೆದಿದ್ದಾರೆ ಎಂದು ಗಾಳಿ ಸುದ್ದಿಯೊಂದು ಹರಿದಾಡುತ್ತಿದೆ.
ಐಐಟಿ ಬಾಬಾ ಜುನಾ ಅಖಾರಾದ ಮಡಿ ಆಶ್ರಮ ಶಿಬಿರದಲ್ಲಿ ವಾಸಿಸುತ್ತಿದ್ದರು. ಅವರನ್ನು ಭೇಟಿ ಮಾಡಲು ಮಾಧ್ಯಮಗಳು ಮತ್ತು ಜನರು ಹೆಚ್ಚಾಗಿ ಬರುತ್ತಿದ್ದರು. ಮನೆಯವರು ಮತ್ತೆ ಮನೆಗೆ ಮರಳುವಂತೆ ಒತ್ತಡ ಹೇರುತ್ತಿದ್ದು, ಈ ಕಾರಣದಿಂದ ಅವರು ಯಾವುದೋ ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಮತ್ತೊಂದು ಕಾರಣ ಹೊರಬಿದ್ದಿದೆ. ಮಾಧ್ಯಮಗಳ ಗಮನಕ್ಕೆ ಬಂದಿದ್ದರಿಂದ ತುಂಬಾ ನೊಂದಿದ್ದೇನೆ ಎಂದು ಸಂತರೊಬ್ಬರು ಐಐಟಿ ಬಾಬಾಗೆ ಹೇಳಿದ್ದಾರೆ. ಆದ್ದರಿಂದ ಮುಖ್ಯ ಗುರುಗಳು ಈ ಸ್ಥಳವನ್ನು ಬಿಟ್ಟು ಪ್ರಯಾಣಕ್ಕೆ ಹೋಗುವಂತೆ ಹೇಳಿದರು. ಅಂದಿನಿಂದ ಅವರು ನಾಪತ್ತೆಯಾಗಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.