ಮಂಗಳೂರು/ಬೆಂಗಳೂರು: ಬೆಂಗಳೂರಿನ ಆರೋಪಿಗಳ ತಂಡವೊಂದು ವ್ಯಕ್ತಿಯೊಬ್ಬರಿಗೆ 88 ಲಕ್ಷ ರೂ. ವಂಚಿಸಿದ್ದು, ಸದ್ಯ ಸೈಬರ್ ಪೊಲೀಸರು ಬಲೆಗೆ ಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇನ್ವೆಸ್ಟ್ ಮೆಂಟ್ ಆ್ಯಡ್ ಬರುತ್ತಿದೆ ಎಂದು ನಂಬಿ ಮೋಸ ಹೋಗುವವರ ಸಂಖ್ಯೆ ಏರಿಕೆಯಾಗುತ್ತಿದ್ದು, ಕೆಲವು ಟೀಂಗಳು ಫೇಕ್ ಆ್ಯಡ್ ಗಳನ್ನ ಕೊಟ್ಟು ಅಮಾಯಕರಿಗೆ ಲಕ್ಷಾಂತರ ರೂ. ಟೋಪಿ ಹಾಕಿರುವ ಘಟನೆ ನಡೆಯುತ್ತಲೇ ಇದೆ. ಈ ಘಟನೆಯೂ ಅಂತಹದ್ದೇ ಆಗಿದ್ದು, ಶ್ರೀನಿವಾಸ್ ರೆಡ್ಡಿ, ಆಕಾಶ್, ಪ್ರಕಾಶ್, ಸುನೀಲ್ ಕುಮಾರ್, ಸಾಯಿ ಪ್ರಜ್ವಲ್, ರವಿಶಂಕರ್, ಮಧುಸೂಧನ್ ರೆಡ್ಡಿ, ಸುರೇಶ್, ಕಿಶೋರ್ ಕುಮಾರ್, ಓಬಲ್ ರೆಡ್ಡಿ ಎಂಬ ಆರೋಪಿಗಳನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ವ್ಯಕ್ತಿಗೆ 88 ಲಕ್ಷ ರೂ. ವಂಚನೆ ಮಾಡಿದ್ದ ಸೈಬರ್ ಕದೀಮರು ನಂತರ ಫೋನ್ ಸ್ವಿಚ್ಡ್ ಆಫ್ ಮಾಡಿ ನಾಪತ್ತೆಯಾಗಿದ್ದರು. ತನಿಖೆ ಕೈಗೊಂಡ ಪೊಲೀಸರು ಹಣ ವರ್ಗಾವಣೆ ಮಾಡಿದ್ದ ವಿವಿಧ ಖಾತೆಗಳ ಖಾತೆದಾರರ ಮಾಹಿತಿ ಸಂಗ್ರಹ ಮಾಡಿದಾಗ ಅದು ಯಶವಂತಪುರದಲ್ಲಿದ್ದ 10 ಆರೋಪಿಗಳಿಗೆ ಸಂಬಂಧಪಟ್ಟಿದ್ದು ಎಂದು ಗೊತ್ತಾಗಿದೆ. ಕೂಡಲೇ ಕಾರ್ಯಚರಣೆಗಿಳಿದ ಪೊಲೀಸರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಗೆ ಸಂಬಂಧಪಟ್ಟ ತ್ಯಾಗರಾಜನಗರ, ಸದಾಶಿವನಗರದ ಕಚೇರಿಗಳ ಮೇಲೆ ದಾಳಿ ಮಾಡಿದಾಗ 51 ಮೊಬೈಲ್ಸ್, 2 ಲ್ಯಾಪ್ ಟಾಪ್, 2 CPU, 108 ಪಾಸ್ ಬುಕ್ ಗಳು ಮತ್ತು ಚೆಕ್ ಬುಕ್ ಗಳು, 480 ಸಿಮ್ ಕಾರ್ಡ್ ಗಳು, 27 ಎಟಿಎಂ ಕಾರ್ಡ್ ಗಳು, 42 ರಬ್ಬರ್ ಸ್ಟಾಂಪ್, 103 ಉದ್ಯಮ್ ಮತ್ತು ಜಿಎಸ್ ಟಿ ದಾಖಲೆಗಳು, 230 ಕರೆಂಟ್ ಅಕೌಂಟ್ ದಾಖಲಾತಿಗಳು ಸಿಕ್ಕಿವೆ
ಮೊಬೈಲ್ ಆ್ಯಪ್ ಮೂಲಕ ಮೋಸ :
ಸಾಮಾಜಿಕ ಜಾಲತಾಣದಲ್ಲಿ ಇನ್ವೆಸ್ಟ್ಮೆಂಟ್ ಬಗ್ಗೆ ಜಾಹೀರಾತು ನೀಡುತ್ತಿದ್ದರು. ಮಾರ್ಕೆಂಟಿಂಗ್ ಲಿಂಕ್ ಕ್ಲಿಕ್ ಮಾಡಿದವರು ವಾಟ್ಸ್ಪ್ ಗ್ರೂಪ್ ಸೇರುತ್ತಿದ್ದರು. ಬಳಿಕ Brandy Speed ಆ್ಯಪ್ ಇನ್ಸ್ಟಾಲ್ ಮಾಡಲು ಪುಸಲಾಯಿಸುತ್ತಿದ್ದರು. ಆ್ಯಪ್ ಇನ್ಸ್ಟಾಲ್ ಮಾಡಿದವರಿಗೆ ಹಣ ಡಬಲ್ ಮಾಡಿಕೊಡುವ ಆಮೀಷವೊಡ್ಡುತ್ತಿದ್ದರು. ಕಳ್ಳರ ಮಾತು ನಂಬಿ ಸಾರ್ವಜನಿಕರು ವಿವಿಧ ಖಾತೆಗಳಿಗೆ ಹಣ ಹಾಕುತ್ತಿದ್ದರು. ಬಳಿಕ ಹಾಕಿರೋ ಹಣವಾಗಲಿ ಲಾಭದ ಹಣವಾಗಲಿ ವಾಪಸ್ ಬರುತ್ತಿರಲಿಲ್ಲ. ಇದರಿಂದ ಮೋಸ ಹೋಗಿದ್ದೇವೆ ಎಂದು ಜನರಿಗೆ ಅರಿವಾಗುತ್ತಿತ್ತು. ಇನ್ನೂ ಈ 10 ಆರೋಪಿಗಳಲ್ಲಿ ಕೆಲವರು ಅಕೌಂಟ್ ಹೋಲ್ಡರ್ ಆಗಿದ್ದು, ಇನ್ನು ಕೆಲವರು ಏಜೆಂಟ್ ಗಳಾಗಿದ್ದಾರೆ. ಇವರೆಲ್ಲ ದುಬೈನಲ್ಲಿ ಕೂತು ಸೈಬರ್ ವಂಚನೆ ಜಾಲ ಆಪರೇಟ್ ಮಾಡೋ ಕಿಂಗ್ ಪಿನ್ ಗಳಿಗೆ ಸಹಾಯ ಮಾಡ್ತಿದ್ರು ಅನ್ನೋ ವಿಚಾರವೂ ಗೊತ್ತಾಗಿದ್ದು, ದುಬೈನಲ್ಲಿರೋ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.
ಸದ್ಯ ಆರೋಪಿಗಳ ಅಕೌಂಟ್ ಗಳಿಗೆ ಸಂಬಂಧಿಸಿದಂತೆ ಎನ್ ಸಿಆರ್ ಪೋರ್ಟನಲ್ಲಿ 1467 ದೂರುಗಳು ದಾಖಲಾಗಿರೋದು ಪತ್ತೆಯಾಗಿದೆ. ಉತ್ತರ ವಿಭಾಗ ಸೈಬರ್ ಪೊಲೀಸರು ತನಿಖೆ ಮುಂದುವರಿಸಿದ್ದು ಸೈಬರ್ ಜಾಲದ ಮತ್ತಷ್ಟು ರಹಸ್ಯ ಹೊರತೆಗೆಯಲು ಮುಂದಾಗಿದ್ದಾರೆ.