ನವದೆಹಲಿ: ಸಾಮಾಜಿಕ ಜಾಲತಾಣದ ಕಂಪನಿ ಫೇಸ್ಬುಕ್ ತನ್ನ ಹೆಸರನ್ನು ಬದಲಾವಣೆ ಮಾಡಲು ಬಯಸಿದ್ದು, ಮುಂದಿನ ವಾರ ಮರುನಾಮಕರಣ ಆಗುವ ಸಾಧ್ಯತೆ ಇದೆ.
ಫೇಸ್ಬುಕ್ನ ಸಿಇಒ ಮಾರ್ಕ್ ಜುಕರ್ಬರ್ಗ್ ಕಂಪನಿಯ ಹೆಸರು ಬದಲಾವಣೆ ಮಾಡುವ ಕುರಿತು ಅಕ್ಟೋಬರ್ 28ರಂದು ನಡೆಯಲಿರುವ ವಾರ್ಷಿಕ ಸಭೆಯಲ್ಲಿ ಪ್ರಸ್ತಾಪಿಸಲಿದ್ದಾರೆ ಎನ್ನಲಾಗಿದೆ. ಆದರೆ, ಹೊಸ ಹೆಸರು ಯಾವುದು ಎಂಬ ಸುಳಿವು ನೀಡಿಲ್ಲ.
ಫೇಸ್ಬುಕ್ನ ವ್ಯವಹಾರ ಕುರಿತು ಅಮೆರಿಕದ ಆಡಳಿತ ಪರಿಶೀಲನೆ, ತಪಾಸಣೆಯನ್ನು ಹೆಚ್ಚಿಸಿರುವುದು ಕಂಪನಿಗೆ ತಲೆನೋವಾಗಿದೆ. ಹೀಗಾಗಿ ಹೆಸರು ಬದಲಾವಣೆ ಮಾಡಬೇಕು ಎಂಬ ಆಲೋಚನೆಯನ್ನು ಫೇಸ್ಬುಕ್ ಮಾಡಿದೆ ಎನ್ನಲಾಗಿದೆ.
ಈ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರಕ್ರಿಯಿಸಿರುವ ಫೇಸ್ಬುಕ್, ಊಹಾಪೋಹ ಮತ್ತು ವದಂತಿಗಳಿಗೆ ಉತ್ತರಿಸುವ ಪರಿಪಾಠ ನಮ್ಮಲ್ಲಿ ಇಲ್ಲ ಎಂದಿದೆ.