ಪರೀಕ್ಷೆ ಎಂದೊಡನೆ ಯಾರಿಗೇ ಆದರೂ ಒಂದು ಕ್ಷಣ ಆತಂಕ ಸಹಜ. ಪರೀಕ್ಷೆ ಬರೆಯುವವರಿಗೆ ಹೇಗೆ ಗೊಂದಲ, ಆತಂಕ ಇರುತ್ತದೆಯೋ, ಅದೇ ರೀತಿ ಅವರ ಮನೆಯವರಿಗೂ ಮನಸ್ಸಿನಲ್ಲಿ ಒಂದಿಷ್ಟು ಕಸಿವಿಸಿ ಇರುತ್ತದೆ. ಪರೀಕ್ಷೆಯನ್ನು ಹೇಗೆ ಸಮಾಧಾನದಿಂದ ಎದುರಿಸಬಹುದು? ಹೆಚ್ಚಿನ ಅಂಕ ಗಳಿಸಲು ಹೇಗೆ ಮಾನಸಿಕ ಸಿದ್ಧತೆ ಮಾಡಿಕೊಳ್ಳಬೇಕು? ಈ ಟಿಪ್ಸ್ ನಿಮಗಾಗಿ.
ಹಳೆಯ ಪ್ರಶ್ನೆ ಪತ್ರಿಕೆ ಗಮನಿಸಿ
ಈ ಹಿಂದಿನ ಪ್ರಶ್ನೆ ಪತ್ರಿಕೆ ಇದ್ದರೆ, ಅದನ್ನು ಸರಿಯಾಗಿ ಗಮನಿಸಿ. ಅದಕ್ಕೆ ಉತ್ತರ ಬರೆದು, ನೀವೇ ಮೌಲ್ಯಮಾಪನ ಮಾಡಿಕೊಳ್ಳಿ. ಹೀಗೆ ಮಾಡಿದರೆ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಜತೆಗೆ, ಪರೀಕ್ಷೆ ಹೇಗಿರಬಹುದು ಎಂಬ ಅರಿವಾಗುತ್ತದೆ.
ನಿರಂತರ ಓದು ಬೇಡ
ಪರೀಕ್ಷೆ ಎಂದು ಹಗಲು ರಾತ್ರಿ ನಿರಂತರ ಓದುವುದು ಸರಿಯಲ್ಲ, ಸತತವಾಗಿ ಓದುವುದರಿಂದ ಕಣ್ಣಿಗೆ ಆಯಾಸವಾಗಬಹುದು ಮತ್ತು ಓದಿದ್ದು ಸರಿಯಾಗಿ ಮನಸ್ಸಿಗೆ ನಾಟದೇ ಇರಬಹುದು. ಅದಕ್ಕಾಗಿ ಓದಿನ ಮಧ್ಯೆ ಅಗತ್ಯ ವಿಶ್ರಾಂತಿ ಪಡೆಯಿರಿ, ಸಣ್ಣಪುಟ್ಟ ವ್ಯಾಯಾಮ ಮಾಡಿ, ಮನಸ್ಸು ಉಲ್ಲಾಸವಾಗುತ್ತದೆ.
ಗಮನವಿಟ್ಟು ಓದಿ, ಅರ್ಥೈಸಿಕೊಳ್ಳಿ
ಕೆಲವರಿಗೆ ಒಮ್ಮೆ ಓದಿದರೆ ಸಾಕಾಗುತ್ತದೆ, ಅದೇ ಮನಸ್ಸಿನಲ್ಲಿ ಉಳಿಯುತ್ತದೆ. ಇನ್ನು ಕೆಲವರಿಗೆ ಎಷ್ಟೇ ಓದಿದರು ಬೇಗ ತಲೆಗೆ ಹೋಗುವುದಿಲ್ಲ. ಹಾಗಾಗಿ ಗಮನವಿಟ್ಟು ಓದಿ, ಸರಳ ತಂತ್ರಗಳ ಮೂಲಕ, ವಾಕ್ಯ ರಚನೆ, ಪದಗಳ ಮೂಲಕ ಉತ್ತರವನ್ನು ನೆನಪಿಟ್ಟುಕೊಳ್ಳಿ ಹಾಗೆ ಮಾಡಿದರೆ, ಮನನ ಮಾಡಿಕೊಳ್ಳಲು ಅನುಕೂಲವಾಗುತ್ತದೆ.
ಸೂಕ್ತ ಉತ್ತರವಷ್ಟೇ ಬರೆಯಿರಿ
ಬಹು ಆಯ್ಕೆಯ ಪ್ರಶ್ನೆಗಳನ್ನು ಹೊರತುಪಡಿಸಿದರೆ, ವಾಕ್ಯ ರಚಿಸಿ, ವಿವರಣಾತ್ಮಕವಾಗಿ ಬರೆಯುವ ಪ್ರಶನಗಳಿಗೆ, ಅಲ್ಲಿ ಕೇಳಿರುವಷ್ಟೇ ಉತ್ತರ ನೀಡಿ. ಅನಗತ್ಯ ಉತ್ತರ ಬರೆದರೆ, ಮಾಲ್ಯಮಾಪಕರಿಗೆ ಕಿರಿಕಿರಿಯಾಗಬಹುದು. ಅದರಿಂದ ನಿಮ್ಮ ಅಂಕಗಳ ಮೇಲೆ ಪರಿಣಾಮವಾಗಬಹುದು.
ಗುಂಪಾಗಿ ಚರ್ಚೆ ಮಾಡಿ
ಪರೀಕ್ಷೆಗೂ ಮೊದಲು ಓದುವ ಸಂದರ್ಭದಲ್ಲಿ ನಿಮಗೆ ಸೂಕ್ತ ಮತ್ತು ಆಪ್ತ ಗೆಳೆಯರ ಜತೆ ಒಟ್ಟಾಗಿ ಓದಿಕೊಳ್ಳಿ. ಅದರಲ್ಲಿ ನಿಮಗೆ ಗೊತ್ತಿರುವುದನ್ನು ಅವರಿಗೆ ಹೇಳಿಕೊಡಿ, ಗೊತ್ತಿಲ್ಲದಿರುವುದನ್ನು ಅವರಲ್ಲಿ ಕೇಳಿ ತಿಳಿದುಕೊಳ್ಳಿ. ಆದರೆ ಅನಗತ್ಯ ಹರಟೆ ಬೇಡ.
ಓದು, ವಿಶ್ರಾಂತಿಯನ್ನು ಸಮತೋಲನ ಮಾಡಿಕೊಳ್ಳಿ
ಪರೀಕ್ಷೆ ಸಮಯದಲ್ಲಿ ಸಾಕಷ್ಟು ಓದಬೇಕು ನಿಜ, ಅದರ ಜತೆಗೆ, ನಿದ್ರೆ ಮತ್ತು ನಿತ್ಯದ ಕೆಲಸಗಳಿಗೆ ಅಗತ್ಯವಿರುವಷ್ಟು ಸಮಯ ಕೊಡಿ. ಆರೋಗ್ಯ ಚೆನ್ನಾಗಿರಲು, ಅಗತ್ಯ ಸಮಯ ನಿದ್ರೆ ಮಾಡಿ ಅದಕ್ಕಾಗಿ ನೀವೇ ಒಂದು ಟೈಂ ಟೇಬಲ್ ಮಾಡಿಕೊಂಡು ಪಾಲಿಸಿ, ಓದು-ನಿದ್ರೆಗೆ ತೊಂದರೆಯಾಗದಂತೆ ನಿರ್ವಹಿಸಿ.