ಮಂಗಳೂರು/ಬೆಂಗಳೂರು: ಜಾತಿ ನಿಂದನೆ ಹಾಗೂ ಹಲವು ಆರೋಪಗಳ ಮೇಲೆ ಜೈಲಿಗೆ ಹೋಗಿ ಜಾಮೀನಿನ ಮೇಲೆ ಆಚೆ ಬಂದಿರುವ ಮಾಜಿ ಶಾಸಕ ಹಾಗೂ ಕನ್ನಡ ಚಿತ್ರ ನಿರ್ಮಾಪಕ ಮುನಿರತ್ನ ಅವರ ತಲೆಗೆ ಮೊಟ್ಟೆ ಹೊಡೆದ ಘಟನೆ ಲಗ್ಗೆರೆ ಸಮೀಪದ ಲಕ್ಷೀದೇವಿನಗರದಲ್ಲಿ ನಡೆದಿದೆ.
ಲಕ್ಷ್ಮೀ ದೇವಿ ನಗರ ವಾರ್ಡ್ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚಾರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶಾಸಕ ಮುನಿರತ್ನ ಹೋಗುತ್ತಿದ್ದ ವೇಳೆ ಕಂಠೀರವ ಸ್ಟುಡಿಯೋ ಬಳಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದಿದ್ದಾರೆ ಎನ್ನಲಾಗಿದೆ.
ಈ ವೇಳೆ ಶಾಸಕ ಮುನಿರತ್ನ ಅವರು ತಮ್ಮ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ನಂತರ ಅವರು ಅಲ್ಲಿಂದ ತೆರಳಿದ್ದಾರೆ. ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಮುನಿರತ್ನ ಬೆಂಬಲಿಗರ ನಡುವೆ ಗಲಾಟೆ ನಡೆದಿದ್ದು 2ರಿಂದ 3 ಕಾರು ಜಖಂ ಆಗಿ ಹಲವರಿಗೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರ ಮೇಲೂ ಶಾಸಕ ಮುನಿರತ್ನ ಬೆಂಬಲಿಗರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಮಂಗಳೂರು/ಬೆಂಗಳೂರು: ಡಿ ಕೆ ಸುರೇಶ್ ತಂಗಿ ಎಂದು ಹೇಳಿಕೊಂಡು ಮಹಿಳೆಯೊಬ್ಬರು ಚಿನ್ನಾಭರಣ ಖರೀದಿಸಿದ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಡಿಸಿಎಂ ಡಿ.ಕೆ ಶಿವಕುಮಾರ್ ಸಹೋದರ ಡಿ.ಕೆ ಸುರೇಶ್ ಅವರ ತಂಗಿ ಎಂದು ನಂಬಿಸಿ 8.41 ಕೋಟಿ ರೂಪಾಯಿ ಮೌಲ್ಯದ 14 ಕೆಜಿ 660 ಗ್ರಾಂ ಚಿನ್ನ ಖರೀದಿಸಿ ವಂಚನೆ ಮಾಡಿರೋ ಆರೋಪ ಕೇಳಿ ಬಂದಿದೆ.
ಆರ್.ಆರ್ ನಗರದ ಐಶ್ವರ್ಯ ಗೌಡ (ನವ್ಯಶ್ರೀ) ಅವರ ಮೇಲೆ ಈ ವಂಚನೆ ಆರೋಪ ಕೇಳಿ ಬಂದಿದ್ದು, ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.
ಕಳೆದ 2023 ಅಕ್ಟೋಬರ್‌ನಿಂದ 2024 ಏಪ್ರಿಲ್‌ನವರೆಗೆ ಐಶ್ವರ್ಯ ಗೌಡ ಅವರು ಹಂತ ಹಂತವಾಗಿ ಚಿನ್ನವನ್ನು ಪಡೆದಿದ್ದಾರೆ. ಹಣ ಕೇಳಿದಾಗ ಡಿ.ಕೆ ಸುರೇಶ್ ಅವರಿಂದ ಕರೆ ಮಾಡಿಸಿ ಕಾಲಾವಕಾಶ ಕೋರಿರುವುದಾಗಿ ಎಫ್ಐಆರ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ಅಷ್ಟೇ ಅಲ್ಲ ಸ್ಯಾಂಡಲ್‌ವುಡ್ ನಟ ಧರ್ಮ ಎಂಬುವವರಿಂದ ಕರೆ ಮಾಡಿಸಿ ಕೊಲೆ ಮಾಡಿಸೋದಾಗಿ ಬೆದರಿಕೆ ಹಾಕಿರೋ ಆರೋಪ ಕೂಡ ಮಾಡಲಾಗಿದೆ. ಡಿ.ಕೆ ಸುರೇಶ್ ವಾಯ್ಸ್ನಲ್ಲಿ ನಟ ಧರ್ಮೇಂದ್ರ ಅವರು ಕರೆ ಮಾಡಿ ಮಾತನಾಡಿದ್ದಾರೆ ಎಂದು ಚಿನ್ನದ ವ್ಯಾಪಾರಿ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಚಿನ್ನದ ಅಂಗಡಿ ಮಾಲೀಕರಾದ ವನಿತಾ ಐತಾಳ್ ದೂರಿನಲ್ಲಿ ತಿಳಿಸಿದ್ದಾರೆ.
8.41 ಕೋಟಿ ಮೌಲ್ಯದ ಚಿನ್ನ ಖರೀದಿಸಿ ವಂಚಿಸಿರೋ ಈ ಪ್ರಕರಣದಲ್ಲಿ ಮೂವರ ಮೇಲೆ FIR ದಾಖಲಾಗಿದೆ. ಐಶ್ವರ್ಯ ಗೌಡ, ಅವರ ಪತಿ ಹರೀಶ್ ಕೆ.ಎನ್ ಹಾಗೂ ಸಿನಿಮಾ ನಟ ಧರ್ಮೇಂದ್ರ ವಿರುದ್ಧ ದೂರು ನೀಡಲಾಗಿದೆ.
ಐಶ್ವರ್ಯ ಗೌಡ ಅವರ ಪತಿ ಹರೀಶ್ ಕೆ.ಎನ್ ಕೂಡ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ನಾನು ಡಿ ಕೆ ಸುರೇಶ್ ತಂಗಿ, ನನಗೆ ಅನೇಕ ರಾಜಕೀಯ ವ್ಯಕ್ತಿಗಳ ಸಂಪರ್ಕವಿದೆ. ನಾನು ದೊಡ್ಡ ಬ್ಯುಸಿನೆಸ್ ವುಮೆನ್. ನಿಮಗೆ ಒಳ್ಳೆ ವ್ಯಾಪಾರ ವಹಿವಾಟು ನೀಡುತ್ತೇನೆ ಎಂದೆಲ್ಲ ಹೇಳಿ ವನಿತಾ ಅವರನ್ನು ಐಶ್ವರ್ಯ ನಂಬಿಸಿದ್ದರು ಎನ್ನಲಾಗಿದೆ. ಸಧ್ಯ ಘಟನೆ ಬಗ್ಗೆ ಚಂದ್ರ ಲೇಔಟ್ನಲ್ಲಿರುವ ವಾರಾಹೀ ವರ್ಲ್ಡ್ ಆಫ್ ಗೋಲ್ಡ್ ಜ್ಯುವೆಲ್ಲರಿ ಶಾಪ್ ಮಾಲೀಕರಾದ ವನಿತಾ ಅವರು ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮಂಗಳೂರು/ಮಧುಗಿರಿ: ಕೃಷಿ ಹೊಂಡದಲ್ಲಿ ಸ್ಪೋಟ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಡ್ರೋನ್ ಪ್ರತಾಪ್ ಅವರಿಗೆ ಜಾಮೀನು ಮಂಜೂರಾಗಿದೆ.
ಸೋಮವಾರ (ಡಿ.23 ರಂದು) ಮಧುಗಿರಿ 4ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಡ್ರೋನ್ ಪ್ರತಾಪ್ ಗೆ ಜಾಮೀನು ನೀಡಿದೆ.
ಸೋಡಿಯಂ ಮೆಟಲ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಡ್ರೋನ್ ಪ್ರತಾಪ್ ಗೆ ಜಾಮೀನು ಮಂಜೂರು ಆಗಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜನಕಲೋಟಿ ಬಳಿ ಕೃಷಿ ಹೊಂಡಕ್ಕೆ ಸೋಡಿಯಂ ಎಸೆದು ಡ್ರೋನ್ ಪ್ರತಾಪ್ ಸ್ಪೋಟ ಮಾಡಿದ್ದರು. ಈ ಸಂಬಂಧ ಅವರನ್ನು ಮಿಡಿಗೇಶಿ ಠಾಣೆಯ ಪೊಲೀಸರು ಸ್ವಯಂ ಪ್ರಕರಣವನ್ನು ದಾಖಲಿಸಿಕೊಂಡು ಬಂಧಿಸಿದ್ದರು.
ಪ್ರತಾಪ್ ಅವರನ್ನು ಡಿ.16 ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಆ ಬಳಿಕ ನ್ಯಾಯಾಲಯ ಅವರಿಗೆ 10 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿತ್ತು. ಡಿಸೆಂಬರ್ 26ರ ತನಕ ಅವರು ನ್ಯಾಯಾಂಗ ಬಂಧನದಲ್ಲಿ ಇರಬೇಕಾಗಿತ್ತು.
ಪ್ರಕರಣ ಸಂಬಂಧ ಪ್ರತಾಪ್ ಅವರ ಕ್ಯಾಮೆರಾ ಮ್ಯಾನ್ ವಿನಯ್ ಹಾಗೂ ಸೋಡಿಯಂ ಕೊಡಿಸಿದ್ದ ಪ್ರಜ್ವಲ್ ಅವರನ್ನು ಬಂಧಿಸಿದ್ದರು.
ಮಂಗಳವಾರ (ಡಿ.24ರಂದು) ಜಾಮೀನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅವರು ಜೈಲಿನಿಂದ ಹೊರಬರುವ ಸಾಧ್ಯತೆಯಿದೆ.
ಮಂಗಳೂರು : ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬೆಂಗಳುರು – ಮಂಗಳೂರು ನಡುವೆ ಡಿಸೆಂಬರ್ 23 ಹಾಗೂ 27 ರಂದು ವಿಶೇಷ ರೈಲು ಸಂಚರಿಸಲಿದೆ. ಮತ್ತೆ ಪುನಃ ಅದೇ ರೈಲು (06506) ಡಿಸೆಂಬರ್ 24 ಮತ್ತು 28 ರಂದು ಮಂಗಳೂರು ಜಂಕ್ಷನ್ ನಿಲ್ದಾಣದಿಂದ ಮಧ್ಯಾಹ್ನ 1:00 ಗಂಟೆಗೆ ಹೊರಟು, ಅದೇ ದಿನ ರಾತ್ರಿ 10.30 ಕ್ಕೆ ಯಶವಂತಪುರ ತಲುಪಲಿದೆ.
ಕೆಲಸದ ನಿಮಿತ್ತ ಮಂಗಳೂರಿನ ಹಲವು ಜನ ಬೆಂಗಳೂರಿನಲ್ಲಿ ವಾಸವಿದ್ದಾರೆ. ಇದೀಗ ಕ್ರಿಸ್ಮಸ್ ಹಬ್ಬ ಸಮೀಪಿಸುತ್ತಿದ್ದು, ಊರಿಗೆ ಮರಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಅವರಿಗೆಲ್ಲಾ ಅನುಕೂಲವಾಗಲೆಂದು ಈ ವಿಶೇಷ ರೈಲು ಸಂಚಾರವನ್ನು ಅಳವಡಿಸಿದ್ದು, ಹಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇದರ ಫಲಾನುಭವಿಗಳಾಗಲಿದ್ದಾರೆ.
ಈ ರೈಲು ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು ಮತ್ತು ಬಂಟ್ವಾಳ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ. ಪ್ರಯಾಣಿಕರು ಅಧಿಕೃತ (www.enquiry.indianrail.gov.in) ವೆಬ್ಸೈಟ್ಗೆ ಭೇಟಿ ನೀಡಿ. NTES ಅಪ್ಲಿಕೇಶನ್ ಬಿಳಸಿ ಅಥವಾ 139 ನಂಬರಗೆ ಡಯಲ್ ಮಾಡುವ ಮೂಲಕ ಈ ರೈಲುಗಳ ಪ್ರತಿ ನಿಲ್ದಾಣದ ಆಗಮನ/ನಿರ್ಗಮನ ಸಮಯ ಮತ್ತು ಇತರ ಮಾಹಿತಿಯನ್ನು ವಡೆದುಕೊಳ್ಳಬಹುದು.