ಮಂಗಳೂರು/ಶ್ರೀಹರಿಕೋಟ :ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇಂದು ಬುಧವಾರ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESE) ಗಾಗಿ ಅತ್ಯಾಧುನಿಕ ತಂತ್ರಜ್ಞಾನ ಪ್ರದರ್ಶನ ಮಿಷನ್ ಪ್ರೊಬಾ-3 ಬಾಹ್ಯಾಕಾಶ ನೌಕೆಯನ್ನು ಉಡಾಯಿಸಲು ಸಜ್ಜಾಗಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಕಾಲಮಾನ ಇಂದು ಅಪರಾಹ್ನ 4:08 ನಿಮಿಷಕ್ಕೆ ಉಡಾವಣೆಯಾಗಲಿದ್ದು, ಇದು ಇಸ್ರೋದ ವಾಣಿಜ್ಯ ಬಾಹ್ಯಾಕಾಶ ಪ್ರಯತ್ನಗಳಲ್ಲಿ ಮಹತ್ವದ ಮೈಲಿಗಲ್ಲಾಗಿರುತ್ತದೆ.
ಇದನ್ನೂ ಓದಿ: ಭಾರತೀಯ ನೌಕಪಡೆಯ ದಿನದ ವಿಶೇಷತೆಗಳೇನು ಗೊತ್ತಾ ?
ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESE) ಜತೆ ಒಪ್ಪಂದವನ್ನು ಪಡೆದುಕೊಂಡಿರುವ ಇಸ್ರೋ ಈ ಮಿಷನ್ ಅನ್ನು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL)ನ ವಾಣಿಜ್ಯ ವಿಭಾಗದ ಅಡಿಯಲ್ಲಿ ಲಾಂಚ್ ಮಾಡುತ್ತಿದೆ. ಇದು ಪೋಲಾರ್ ಸ್ಯಾಟ್ ಲೈಟ್ ಲಾಂಚ್ ವಹಿಕಲ್ (ಪಿಎಸ್ ಎಲ್ ವಿ ರಾಕೆಟ್)ನ 61ನೇ ಹಾರಾಟವಾಗಿದೆ. ಹೆಚ್ಚು ತೂಕದ ಬಾಹ್ಯಾಕಾಶ ಮಿಷನ್ ಕೈಗೊಳ್ಳುವಲ್ಲಿ ಪಿಎಸ್ ಎಲ್ ವಿ ರಾಕೆಟ್ ಹೆಸರುವಾಸಿಯಾಗಿದೆ.ಈ ಮಿಷನ್ ಅಡಿ ಕರೋನಾಗ್ರಾಫ್ ಮತ್ತು ಆಕಲ್ಚರ್ ಎಂಬ ಎರಡು ಬಾಹ್ಯಾಕಾಶ ನೌಕೆಗಳನ್ನು ನಭಕ್ಕೆ ಕೊಂಡೊಯ್ಯಲಾಗುತ್ತದೆ. ಇದು ಸೂರ್ಯನ ಹೊರಗಿನ ವಾತಾವರಣ ಅಧ್ಯಯನ ಮಾಡುವ ಸಲುವಾಗಿ ವಿಶೇಷವಾಗಿ ವಿನ್ಯಾಸ ಮಾಡಿರುವ ನೌಕೆಗಳಾಗಿವೆ.
ಈಯೋಜನೆಯಲ್ಲಿ ಇಸ್ರೋ ಪಾತ್ರ
ಐರೋಪ್ಯ ಬಾಹ್ಯಾಕಾಶ ಸಂಸ್ಥೆಯು ಪ್ರೋಬಾ-3 ಮಿಷನ್ ನ ವೈಜ್ಞಾನಿಕ ಅಂಶಗಳನ್ನು ಮುನ್ನಡೆಸುತ್ತದೆ. ಈ ಯೋಜನೆಯ ಉಡಾವಣೆ ಯಶಸ್ಸಿಗೆ ಇಸ್ರೋ ಪಲ್ಗೊಳ್ಳುವಿಕೆ ಅತ್ಯಂತ ನಿರ್ಣಾಯಕವಾಗಿದೆ. ಈ ಯೋಜನೆಗಾಗಿ ಇಸ್ರೋ ಪಿಎಸ್‌ಎಲ್‌ವಿ-ಎಕ್ಸ್‌ಎಲ್ ರಾಕೆಟ್ ಅನ್ನು ಒದಗಿಸುತ್ತದೆ. ನಿಗದಿತ ಕಕ್ಷೆಗೆ 500 ಕೆಜಿವರೆಗಿನ ಪೇಲೋಡ್‌ಗಳನ್ನು ಕೊಂಡೊಯ್ಯುವ ವಿಷಯದಲ್ಲಿ ಪಿಎಸ್‌ಎಲ್‌ವಿ ರಾಕೆಟ್ ಹೆಸರುವಾಸಿಯಾಗಿದೆ. ಈ ಬಾಹ್ಯಾಕಾಶ ನೌಕೆಗಳನ್ನು ನಿಗದಿಪಡಿಸಿದ ಕಕ್ಷೆಗೆ ನಿಯೋಜಿಸುವಲ್ಲಿ ಇಸ್ರೋದ ಪಾತ್ರ ಮಹತ್ವದ್ದಾಗಿದೆ.
ಈಗಾಗಲೇ ಭಾರತವು ಸೌರ ಮಿಷನ್ ಕೈಗೊಂಡಿದೆ. ಆದಿತ್ಯ-L1 ಅನ್ನು ಸೆಪ್ಟೆಂಬರ್ 2023 ರಲ್ಲಿ ಯಶಸ್ವಿಯಾಗಿ ನಿಯೋಜಿಸಿದೆ. ಇಸ್ರೋದ ಈ ಪರಿಣತಿಯನ್ನು ಮನಗಂಡು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಭಾರತಕ್ಕೆ ಈ ಮಹತ್ವದ ಕೆಲಸವನ್ನು ನೀಡಿದೆ.
ಸೌರ ಕರೋನಾದ ಅಧ್ಯಯನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಈ ಮಿಷನ್ ಕೊಡುಗೆ ನೀಡಲಿದೆ.