ಲಂಡನ್ : ಇಂಗ್ಲೆಡ್ ರಾಣಿ ಎಲಿಜಬೆತ್-II ಅವರ ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಬ್ರಿಟನ್‌ನ ಬಲ್‌ಮೋರಾಲ್‌ನಲ್ಲಿ ಸೂಕ್ತ ವೈದ್ಯಕೀಯ ನಿಗಾದಡಿ ರಾಣಿಗೆ ಚಿಕಿತ್ಸೆ ಮಂದುವರೆದಿದೆ ಎಂದು ಬಂಕಿಂಗ್ ಹ್ಯಾಮ್ ಅರಮನೆಯ ಪ್ರಕಟಣೆ ತಿಳಿಸಿದೆ.
ಗುರುವಾರ ಬೆಳಗ್ಗೆ ರಾಣಿ ಎಲಿಜಬೆತ್-II ಅವರ ಆರೋಗ್ಯ ತಪಾಸಣಾ ವರದಿಗಳನ್ನು ಪರಿಶೀಲನೆ ನಡೆಸಿದ ತಜ್ಞ ವೈದ್ಯರು ರಾಣಿಯವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ರಾಣಿ ಅವರನ್ನು ಸೂಕ್ತ ವೈದ್ಯಕೀಯ ನಿಗಾದಲ್ಲಿ ಇರಿಸಿ ಚಿಕಿತ್ಸೆ ಮುಂದುವರೆಸುವಂತೆ ಸೂಚಿಸಿದ್ದಾರೆ ಎಂದು ಬಂಕಿಂಗ್ ಹ್ಯಾಮ್ ಅರಮನೆ ತನ್ನ ಅಧಿಕೃತ ಪ್ರಕಟಣೆಯಲ್ಲಿ ವಿವರಿಸಿದೆ.
ರಾಣಿ ಎಲಿಜಬೆತ್-II ಅವರ ಆರೋಗ್ಯ ಸದ್ಯ ಸ್ಥಿರವಾಗಿದ್ದು, ಬಲ್‌ಮೋರಾಲ್‌ನಲ್ಲಿ ಅವರು ಇದ್ದಾರೆ, ಚಿಕಿತ್ಸೆ ಮುಂದುವರೆದಿದೆ ಎಂದಷ್ಟೇ ಮಾಹಿತಿ ನೀಡಲಾಗಿದೆ.
ಬಂಕಿಂಗ್ ಹ್ಯಾಮ್ ಪ್ಯಾಲೇಸ್‌ನಿಂದ ಹೊರಬಿದ್ದಿರುವ ಈ ಪ್ರಕಟಣೆಯಿಂದ ಇಡೀ ಬ್ರಿಟನ್ ದೇಶವೇ ಇದೀಗ ಕಳವಳಗೊಂಡಿದೆ ಎಂದು ಬ್ರಿಟನ್‌ನ ನೂತನ ಪ್ರಧಾನಿ ಲೀಸ್ ಟ್ರಸ್ ಅವರು ಹೇಳಿದ್ದಾರೆ.
ಈ ಕುರಿತು ಟ್ವಿಟ್ಟರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಬ್ರಿಟನ್‌ನ ನೂತನ ಪ್ರಧಾನಿ ಲೀಸ್ ಟ್ರಸ್, ಇಡೀ ದೇಶವೇ ರಾಣಿಯವರ ಆರೋಗ್ಯದ ಕುರಿತು ಕಳವಳಗೊಂಡಿದೆ. ಮಧ್ಯಾಹ್ನದ ವೇಳೆಗೆ ಬಂಕಿಂಗ್ ಹ್ಯಾಮ್ ಪ್ಯಾಲೇಸ್‌ನಿಂದ ಹೊರಬಿದ್ದ ಸುದ್ದಿ ಕೇಳಿ ಆತಂಕಿತರಾಗಿದ್ದೇವೆ.
ನನ್ನನ್ನೂ ಒಳಗೊಂಡಂತೆ ಇಡೀ ದೇಶವು ರಾಣಿ ಎಲಿಜಬೆತ್-II ಹಾಗೂ ಅವರ ಕುಟುಂಬಸ್ಥರ ಜೊತೆಗೆ ಇದೆ ಎಂದು ಹೇಳಿದ್ದಾರೆ.