ವಿಜಯವಾಡ: ಹೊಸದಾಗಿ ಖರೀದಿಸಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿ ಸ್ಪೋಟಗೊಂಡು ಓರ್ವ ಮೃತಪಟ್ಟ ಘಟನೆ ಆಂಧ್ರದ ವಿಜಯವಾಡದಲ್ಲಿ ನಿನ್ನೆ ಬೆಳಿಗ್ಗೆ ನಡೆದಿದೆ.
ವಿಜಯವಾಡದ ನಿವಾಸಿ ಶಿವಕುಮಾರ್ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಶುಕ್ರವಾರವಷ್ಟೇ ದಂಪತಿಗಳು ಬೂಮ್ ಮೋಟಾರ್ಸ್ ಕಾರ್ಬೆಟ್-14 ಸ್ಕೂಟರ್ ಖರೀದಿಸಿದ್ದರು. ಬೆಡ್‌ರೂಂನಲ್ಲಿ ಅದರ ಬ್ಯಾಟರಿಯನ್ನು ಚಾರ್ಜ್‌ಗೆ ಇಟ್ಟು ಮಲಗಿದ್ದರು. ಈ ವೇಳೆ ಇದ್ದಕಿದ್ದಂತೆ ಅದು ಸ್ಫೋಟಗೊಂಡಿದ್ದು ಮಲಗಿದ್ದ ದಂಪತಿ ಗಂಭೀರವಾಗಿ ಗಾಯಗೊಂಡಿದ್ದರು.
ಇಡೀ ಮನೆಯಲ್ಲಿ ಬೆಂಕಿ ವ್ಯಾಪಿಸಿದ್ದು, ಇದನ್ನು ಕಂಡ ತಕ್ಷಣ ನೆರೆಹೊರೆಯವರು ರಕ್ಷಣೆಗೆ ಮುಂದಾದರು. ಉಸಿರುಗಟ್ಟಿ ತೀವ್ರ ಅಸ್ವಸ್ಥಗೊಂಡಿದ್ದ ಮಕ್ಕಳಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪತಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದು ಪತ್ನಿಯ ಸ್ಥಿತಿ ಚಿಂತಾಜನಕವಾಗಿದೆ.
ಶಾರ್ಟ್ ಸರ್ಕ್ಯೂಟ್‌ನಿಂದ ಬ್ಯಾಟರಿ ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ.