ನವದೆಹಲಿ: ಗೋವಾ, ಪಂಜಾಬ್, ಉತ್ತರ ಪ್ರದೇಶ, ಮಣಿಪುರ ಮತ್ತು ಉತ್ತರಾಖಂಡ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ದಿನಾಂಕ ಪ್ರಕಟಿಸಿದ್ದು 7 ಹಂತಗಳಲ್ಲಿ 5 ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10ರಿಂದ ಮಾರ್ಚ್ 7ರವರೆಗೆ 7 ಹಂತಗಳಲ್ಲಿ ಮತದಾನ ನಡೆಯಲಿದೆ.
ಪಂಜಾಬ್, ಉತ್ತರಾಖಂಡ ಮತ್ತು ಗೋವಾದಲ್ಲಿ ಒಂದೇ ಹಂತದಲ್ಲಿ ಫೆಬ್ರುವರಿ 14 ರಂದು ಮತ್ತು ಮಣಿಪುರದಲ್ಲಿ ಫೆಬ್ರವರಿ 27 ಮತ್ತು 3 ರಂದು ಮತದಾನ ನಡೆಯಲಿದೆ.
ಮಾರ್ಚ್ 10 ರಂದು ಮತಗಳ ಎಣಿಕೆ ನಡೆಯಲಿದೆ.
ಎಲ್ಲಾ ಮತಗಟ್ಟೆಗಳಲ್ಲಿ ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ಬಳಸಲಾಗುವುದು.
“ಚುನಾವಣೆ ಸುಗಮವಾಗಿ ನಡೆಯಲು ಸಾಕಷ್ಟು ಸಂಖ್ಯೆಯ ಇವಿಎಂ ಮತ್ತು ವಿವಿಪ್ಯಾಟ್‌ಗಳ ವ್ಯವಸ್ಥೆಯನ್ನು ಚುನಾವಣಾ ಆಯೋಗ ಈಗಾಗಲೇ ವ್ಯವಸ್ಥೆ ಮಾಡಿದೆ ಎಂದು ಅವರು ತಿಳಿಸಿದರು. ಮಾದರಿ ನೀತಿ ಸಂಹಿತೆ(ಎಂಸಿಸಿ) ತಕ್ಷಣದಿಂದಲೇ ಜಾರಿಗೆ ಬಂದಿದೆ.
ಎಂಸಿಸಿ ಮಾರ್ಗಸೂಚಿಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿದೆ.
ಈ ಮಾರ್ಗಸೂಚಿಗಳ ಯಾವುದೇ ಉಲ್ಲಂಘನೆಗಳ ಬಗ್ಗೆ ಕಟ್ಟುನಿಟ್ಟಾಗಿ ವ್ಯವಹರಿಸಲಾಗುತ್ತದೆ” ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹೇಳಿದರು.
80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಕಲಾಂಗ ವ್ಯಕ್ತಿಗಳು ಮತ್ತು ಕೋವಿಡ್ 19 ರೋಗಿಗಳು ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಬಹುದು.
ಕೋವಿಡ್-19 ಹಿನ್ನೆಲೆಯಲ್ಲಿ ಎಲ್ಲಾ ಐದು ರಾಜ್ಯಗಳಲ್ಲಿ ಮತದಾನದ ಸಮಯವನ್ನು ಒಂದು ಗಂಟೆ ಹೆಚ್ಚಿಸಲಾಗುವುದು.
ಎಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ನೌಕರರು ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿರುವುದು ಕಡ್ಡಾಯವಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯವು ಅವರನ್ನು ಮುಂಚೂಣಿ ಕೆಲಸಗಾರರೆಂದು ಘೋಷಿಸಿದೆ, ಆದ್ದರಿಂದ ಅವರು ಬೂಸ್ಟರ್ ಡೋಸ್ ಅರ್ಹರಾಗಿದ್ದಾರೆ ಎಂದು ಸಿಇಸಿ ಸುಶೀಲ್ ಚಂದ್ರ ಹೇಳಿದ್ದಾರೆ.