ಮಂಗಳೂರು/ಮುಂಬೈ: ಭಾನುವಾರ ನಡೆದ ಸಚಿವ ಸಂಪುಟ ವಿಸ್ತರಣೆ ಬಳಿಕ ಶಿವಸೇನೆ (ಏಕನಾಥ್ ಶಿಂಧೆ ಬಣ)ದಲ್ಲಿ ಅಸಮಾಧಾನ ಉಂಟಾಗಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭಾನುವಾರ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಬಿಜೆಪಿಯ 19 ಮತ್ತು ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್ ಸಿಪಿ (ಅಜಿತ್ ಪವರ್ ಬಣ)ದ ತಲಾ 10 ಶಾಸಕರು ಫಡ್ನವೀಸ್ ಸಂಪುಟಕ್ಕೆ ಸಚಿವರಾಗಿ ಸೇರ್ಪಡೆಗೊಂಡಿದ್ದಾರೆ.
ರಾಜ್ಯದಲ್ಲಿ ಡಿಸೆಂಬರ್ 5ರಂದು ‘ಮಹಾಯುತಿ’ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ, ಏಕನಾಥ್ ಶಿಂಧೆ ಹಾಗೂ ಅಜಿತ್ ಪವಾರ್ ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಭಾನುವಾರ ರಾತ್ರಿ ನಡೆದ ಸಚಿವ ಸಂಪುಟ ವಿಸ್ತರಣೆ ಬಳಿಕ ಶಿವಸೇನೆ (ಏಕನಾಥ್ ಶಿಂಧೆ ಬಣ)ದಲ್ಲಿ ಅಸಮಾಧಾನ ಉಂಟಾಗಿದೆ. ಸಚಿವ ಸ್ಥಾನ ಕೈತಪ್ಪಿದ ಹಿನ್ನಲೆಯಲ್ಲಿ ಶಾಸಕ ನರೇಂದ್ರ ಬೋಂಧೆಕರ್ ಪಕ್ಷದ ಎಲ್ಲಾ ಹುದ್ದಗಳಿಗೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶದ ಸ್ಟಾರ್ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಗೆ ಬೌಲಿಂಗ್ ನಿಷೇಧ !
ಶಾಸಕ ನರೇಂದ್ರ ಬೋಂಧೇಕರ್ 2024ರ ಚುನಾವಣೆಯಲ್ಲಿ ಭಾಂದರ್ ಕ್ಷೇತ್ರದಲ್ಲಿ 1,27,884 ಮತಗಳನ್ನು ಪಡೆದು 38,367 ಮತಗಳ ಅಂತರದಿಂದ ಜಯಗಳಿಸಿದ್ದರು. ಎದುರಾಳಿಯಾಗಿದ್ದ ಕಾಂಗ್ರೆಸ್ ನ ಪೂಜಾ ಗಣೇಶ್ (89,517 ಮತ)ಗಳಿಂದ ಸೋಲಿಸಿದ್ದರು. ಅಲ್ಲದೆ ಶಿವಸೇನೆ (ಏಕನಾಥ್ ಶಿಂಧೆ ಬಣ) ಪಕ್ಷದ ಉಪನಾಯಕ ಮತ್ತು ವಿದರ್ಭ ಭಾಗದ ಪಕ್ಷದ ಸಂಯೋಜಕಾಗಿದ್ದರು. ಆದ್ದರಿಂದ ಶಾಸಕರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು.
ಶಿವಸೇನೆ ಪಕ್ಷ ಮೂರು ಬಾರಿಯ ಶಾಸಕ ನರೇಂದ್ರ ಬೋಂಧೇಕರ್ ಗೆ ಈ ಬಾರಿ ಸಚಿವ ಸ್ಥಾನದ ಭರವಸೆಯನ್ನುನೀಡಿತ್ತು. ಆದರೆ ಶಿವಸೇನೆಯಲ್ಲಿ ಈಗಾಗಲೇ ಏಕನಾಥ್ ಶಿಂಧೆ ಉಪ ಮುಖ್ಯಮಂತ್ರಿಯಾಗಿದ್ದಾರೆ. ಭಾನುವಾರ ಪಕ್ಷಕ್ಕೆ 10 ಸಚಿವ ಸ್ಥಾನವನ್ನು ನೀಡಿದ್ದು, ನರೇಂದ್ರ ಬೋಂಧೆಕರ್ ಗೆ ಸಚಿವ ಸ್ಥಾನ ಕೈತಪ್ಪಿದೆ.
ಸಚಿವ ಸ್ಥಾನ ಸಿಗುವುದಿಲ್ಲ ಎಂಬುದು ಕಚಿತವಾಗುತ್ತಿದ್ದಂತೆಯೇ ನರೇಂದ್ರ ಬೋಂಧೆಕರ್ ಏಕನಾಥ್ ಶಿಂಧೆ, ಪಕ್ಷದ ಹಿರಿಯ ನಾಯಕ ಉದಯ್ ಸಾಮಂತ್ ಮತ್ತು ಶ್ರೀಕಾಂತ್ ಶಿಂಧೆಗೆ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿ, ಪತ್ರವನ್ನು ಕಳಿಸಿದ್ದರು. ಆದರೆ ನಾಯಕರು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.