ಬೆಂಗಳೂರು : ಬಿಸಿಲಿನ ಉರಿಗೆ ಜನರು ಬೆಂದು ಹೋಗಿದ್ದಾರೆ. ವರುಣ ಕೃಪೆ ತೋರಯ್ಯ ಎಂದು ಬೇಡಿಕೊಳ್ಳುತ್ತಿದ್ದಾರೆ. ಈ ನಡುವೆ ಅಲ್ಲಲ್ಲಿ ಮಳೆಯಾಗಿದ್ರೂ ಸೂರ್ಯ ತಾಪವೇನೂ ಕಮ್ಮಿಯಾಗಿಲ್ಲ. ಇದೀಗ 8 ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಎಲ್ಲೆಲ್ಲಿ ಮಳೆ ?
ರಾಜ್ಯದ ಜನತೆ ಮಳೆರಾಯನಿಗಾಗಿ ಕಾಯುತ್ತಿದ್ದಾರೆ. ಹವಾಮಾನ ಇಲಾಖೆ ಕೆಲವು ಜಿಲ್ಲೆಗಳಿಗೆ ಶುಭ ಸುದ್ದಿ ನೀಡಿದೆ. ಏಪ್ರಿಲ್ 24ರಂದು ಬಾಗಲಕೋಟೆ, ಬೆಳಗಾವಿ, ಬೀದರ್, ಮೈಸೂರು, ಕೊಡಗು, ಹಾಸನ ಸೇರಿ 8 ಜಿಲ್ಲೆಗಳಲ್ಲಿ ಕೆಲವೆಡೆ ಮಳೆ ಬೀಳಬಹುದು ಎಂದು ಹೇಳಿದೆ.
ತಾಪಮಾನ ಹೆಚ್ಚಳ :
ಭಾರತೀಯ ಹವಾಮಾನ ಇಲಾಖೆ ದೇಶದ ಹಲವು ಭಾಗಗಳಲ್ಲಿ ಬಿಸಿಲಿನ ತಾಪ ತೀವ್ರವಾಗಲಿದೆ ಎಂದು ಕೂಡ ಮಾಹಿತಿ ನಡಿದೆ. ಅದರಲ್ಲೂ ಪೂರ್ವ ಮತ್ತು ದಕ್ಷಿಣ ಭಾರತದ ಹೆಚ್ಚಿನ ಭಾಗಗಳಲ್ಲಿ ಶಾಖದ ಅಲೆಗಳು ಹೆಚ್ಚಲಿವೆ ಎಂದಿದೆ. ಏಪ್ರಿಲ್ 25 ರ ವರೆಗೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ. ಏಪ್ರಿಲ್ 27 ರ ವರೆಗೆ ಈ ಪ್ರದೇಶಗಳಲ್ಲಿ ಉಷ್ಣಾಂಶ 2 ರಿಂದ 2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ : ಖತರ್ನಾಕ್ ಕಳ್ಳನನ್ನು ಬಂಧಿಸಿದ ಕೋಟ ಪೊಲೀಸರು; ‘ನನ್ನ ಬಗ್ಗೆ ಮಾಹಿತಿ ಬೇಕಾದ್ರೆ ಯೂಟ್ಯೂಬ್ ನೋಡಿ’ ಎಂದ ಖದೀಮ!
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಏಪ್ರಿಲ್ 6 ರಂದು ರಾಜಧಾನಿಯಲ್ಲಿ ಗರಿಷ್ಠ 37.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಎಂಟು ವರ್ಷಗಳಲ್ಲಿ ಅತಿ ಹೆಚ್ಚು ಎಂದು ವರದಿಯಾಗಿದೆ.
ಮುಂದಿನವಾರ ನಗರದಲ್ಲಿ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.