ಮಂಗಳೂರು: ಪವಿತ್ರ ರಂಝಾನ್ನ 30 ದಿನಗಳ ಉಪವಾಸ ವ್ರತವನ್ನು ಸಂಪನ್ನಗೊಳಿಸಿ ಇಂದು ಈದುಲ್ ಫಿತ್ರ್ ಹಬ್ಬದ ಪ್ರಯುಕ್ತ ನಗರದ ಬಾವುಟಗುಡ್ಡೆಯ ಈದ್ಗಾ ಮಸೀದಿಯಲ್ಲಿ ಬೆಳಿಗ್ಗೆ 8 ಗಂಟೆಗೆ ಝೀನತ್ ಭಕ್ಷ್ ಕೇಂದ್ರ ಜುಮ್ಮಾ ಮಸೀದಿಯ ಖತೀಬ್ ಅಲ್ ಹಾಜ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಸಡಗರ, ಸಂಭ್ರಮದಿಂದ ಈದುಲ್ ಫಿತ್ರ್ ಹಬ್ಬ ಆಚರಣೆಯಲ್ಲಿ ಮುಸಲ್ಮಾನ ಬಾಂಧವರು ತೊಡಗಿಸಿಕೊಂಡರು.
ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಸರಕಾರದ ಸೂಚನೆ ಮೇರೆ ಅತ್ಯಂತ ಸರಳವಾಗಿ ಈದ್ ಆಚರಿಸಲಾಗಿತ್ತು. ಆದರೆ ಈ ಬಾರಿ ಕೊರೊನಾದ ಯಾವುದೇ ಕಟ್ಟುಪಾಡುಗಳು ಇಲ್ಲದೇ ಇರುವುದರಿಂದ ಬಹುತೇಕ ಎಲ್ಲರೂ ಈದುಲ್ ಫಿತ್ರ್ ಹಬ್ಬದ ಸಂಭ್ರಮದಲ್ಲಿ ತೊಡಗಿಸಿದರು.
ಇದಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯ ಮಸೀದಿ ಮತ್ತು ಈದ್ಗಾಗಳಲ್ಲಿ ಸಾಮೂಹಿಕ ನಮಾಝ್, ಈದ್ ಖುತ್ಬಾ, ಈದ್ ಸಂದೇಶ, ಪ್ರವಚನದ ಬಳಿಕ ಈದ್ ಶುಭಾಶಯ, ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡುವ ಮೂಲಕ ಹಬ್ಬದ ಸಂಭ್ರಮ ಹೆಚ್ಚಿತ್ತು.