ಮಂಗಳೂರು : ಕೊರೋನ ಪಾಸಿಟಿವಿಟಿ ದರ 5 % ಕ್ಕೆ ಇಳಿದಿರುವುದರಿಂದ ಬೆಂಗಳೂರು, ಉಡುಪಿ ಸಹಿತ ರಾಜ್ಯದ 22 ಜಿಲ್ಲೆಗಳಲ್ಲಿ ಮಾಡಿರುವಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಲಾಕ್ ಡೌನ್ ತೆರವುಗೊಳಿಸಿ ಪೂರ್ಣಪ್ರಮಾಣದ ವಾಣಿಜ್ಯ ಚಟುವಟಿಕೆ, ದುಡಿಮೆಗೆ ಅವಕಾಶ ಮಾಡಿಕೊಡುವಂತೆ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಪಾಸಿಟಿವಿಟಿ ದರ 5 ಶೇಕಡಾಕ್ಕೆ ಇಳಿದಿರುವ ಮಾನದಂಡದಲ್ಲಿ ಬೆಂಗಳೂರು ನಗರ ಸಹಿತ ಹದಿನಾರು ಜಿಲ್ಲೆಗಳಲ್ಲಿ ಲಾಕ್ ಡೌನ್ ತೆರವು ಗೊಳಿಸಲಾಗಿತ್ತು. ಇಂದು ಉಡುಪಿ, ಶಿವಮೊಗ್ಗ ಸಹಿತ ಮತ್ತೆ ಆರು ಜಿಲ್ಲೆಗಳ ಜನಪ್ರತಿನಿನಿಧಿಗಳ ಒತ್ತಾಯ, ಪಾಸಿಟಿವಿಟಿ ದರದ ಆಧಾರದಲ್ಲಿ ಲಾಕ್ ಡೌನ್ ತೆರವುಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಪಾಸಿಟಿವಿಟಿ ದರ ಐದು ಶೇಕಡಾ ಸಮೀಪಕ್ಕೆ ಇಳಿದಿದೆ.
ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿ ಹೊರತು ಪಡಿಸಿ ಉಳಿದ ವಾಣಿಜ್ಯ ವ್ಯವಹಾರ, ಸಾರ್ವಜನಿಕ ಸಾರಿಗೆಗೆ ನಿರ್ಬಂಧ ಮುಂದುವರಿಸಿರುವುದು, ಅಗತ್ಯ ವಸ್ತುಗಳ ಖರೀದಿ ಮಧ್ಯಾಹ್ನ ಒಂದು ಗಂಟೆಗೆ ಮಿತಿ ಗೊಳಿಸಿರುವುದು ರಾಜ್ಯ ಸರಕಾರದ ತಾರತಮ್ಯ, ಜಿಲ್ಲೆಯ ಜನಪ್ರತಿನಿಧಿಗಳ ವೈಫಲ್ಯ ಹಾಗೂ ಜನರ ಬದುಕಿನ ಸಂಕಷ್ಟಗಳ ಕುರಿತಾದ ಅವರ ಅನಾದಾರವನ್ನು ಎತ್ತಿ ತೋರಿಸುತ್ತದೆ.
ರಾಜ್ಯದ ಉಳಿದ ಜಿಲ್ಲೆಗಳಿಗೆ ಅನ್ವಯಿಸಿರುವ ಮಾನದಂಡ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಅನ್ವಯಗೊಳ್ಳದಿರುವುದು ದಕ್ಷಿಣ ಕನ್ನಡ ಜಿಲ್ಲಾಡಳಿತ, ಜನಪ್ರತಿನಿಧಿನಿಧಿಗಳ ನಡವಳಿಕೆಯನ್ನು ಪ್ರಶ್ನಾರ್ಹಗೊಳಿಸಿದೆ.
ಅರೆಬರೆ ಲಾಕ್ ಡೌನ್ ವಿನಾಯತಿಗಳು ನಿರ್ಮಾಣ ಕಾಮಗಾರಿ ಸಹಿತ ಎಲ್ಲಾ ವಲಯದ ಅಸಂಘಟಿತ ಕಾರ್ಮಿಕರ ದುಡಿಮೆಯ ಅವಕಾಶಗಳಿಗೆ ಯಾವ ರೀತಿಯಲ್ಲಿಯೂ ಅನುಕೂಲಕರವಾಗಿಲ್ಲ. ಜವಳಿ, ಚಪ್ಪಲಿ, ಗಾರ್ಮೆಂಟ್ಸ್, ಶೃಂಗಾರ, ಉಡುಗೊರೆ ಸಾಧನಗಳ ಸಹಿತ ಸಣ್ಣ ಪುಟ್ಟ ವ್ಯಾಪಾರಿ ಮಳಿಗೆ, ಅಂಗಡಿಗಳನ್ನು ನಡೆಸುವ ವ್ಯಾಪಾರಿಗಳು, ಅದರಲ್ಲಿನ ನೌಕರರು ಲಾಕ್ ಡೌನ್ ಮುಂದುವರಿಕೆಯಿಂದ ದಿವಾಳಿ ಸ್ಥಿತಿಗೆ ತಲುಪಿದ್ದಾರೆ.
ಖಾಸಗಿ ಬಸ್ಸು ಸೇರಿದಂತೆ ಪ್ರಯಾಣ ಸಾರಿಗೆಯ ಮಾಲಕರು, ಕಾರ್ಮಿಕರು ಜಿಲ್ಲೆಯಲ್ಲಿ ಹತ್ತಾರು ಸಾವಿರ ಸಂಖ್ಯೆಯಲ್ಲಿದ್ದು ಅವರ ಬದುಕು ಬೀದಿಗೆ ಬಂದಿದೆ. ಒಟ್ಟು ವಾಣಿಜ್ಯ, ಸಾರಿಗೆ ರಂಗ ತಿಂಗಳುಗಟ್ಟಲೆ ಮುಚ್ಚಲ್ಪಟ್ಟಿರುವುದರಿಂದ ಜಿಲ್ಲೆಯ ಆರ್ಥಿಕತೆ ಸ್ಥಗಿತಗೊಂಡಿದ್ದು ಎಲ್ಲಾ ವಿಭಾಗದ ಜನ ತತ್ತರಿಸಿಹೋಗಿದ್ದಾರೆ.
ಹೀಗಿರುತ್ತಾ, ಪಾಸಿಟಿವಿಟಿ ದರ ಐದಕ್ಕೆ ಇಳಿದಿದ್ದರೂ ಬೆಂಗಳೂರು, ಉಡುಪಿ, ಶಿವಮೊಗ್ಗ ಸಹಿತ ಉಳಿದ ಜಿಲ್ಲೆಗಳಿಗೆ ನೀಡಿದ ಲಾಕ್ ಡೌನ್ ತೆರವು ಅದೇ ಮಾನದಂಡದ ಅಡಿ ದಕ್ಷಿಣ ಕನ್ನಡ ಜಿಲ್ಲೆಗೆ ದೊರಕದಿರುವುದನ್ನು ಒಪ್ಪಲು ಸಾಧ್ಯವಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಈಗಲಾದರು ತಮ್ಮ ಸೋಮಾರಿತನ, ಜನರ ಸಂಕಷ್ಟಗಳ ಕುರಿತಾದ ನಿರ್ಲಕ್ಷ್ಯ ಧೋರಣೆಯನ್ನು ಬದಲಾಯಿಸಿ ರಾಜ್ಯ ಸರಕಾರಕ್ಕೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ತಕ್ಷಣದಿಂದಲೇ ದಕ್ಷಿಣ ಕನ್ನಡ ಜಿಲ್ಲೆಯ ಲಾಕ್ ಡೌನ್ ತೆರವುಗೊಳಿಸಲು ಮುಂದಾಗಬೇಕು ಎಂದು ಡಿವೈಎಫ್ಐ ದ ಕ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಇಲ್ಲದಿದ್ದಲ್ಲಿ ಈಗಾಗಲೆ ಹತಾಷೆಯಿಂದ ಆಕ್ರೋಶಿತರಾಗಿರುವ ಜನರ ತಾಳ್ಮೆಯ ಕಟ್ಟೆ ಒಡೆಯಲಿದೆ ಎಂದು ಡಿವೈಎಫ್ಐ ಎಚ್ಚರಿಸಿದೆ.