ಮಂಗಳೂರು: ನಗರದ ಹೃದಯ ಭಾಗದಲ್ಲಿರುವ ಬಲ್ಮಠ ಸರಕಾರಿ ಹಿರಿಯ ಪ್ರಾಥಮಿಕ (ಟಿಟಿಐ) ಶಾಲೆಯಲ್ಲಿ ಯಾವುದೇ ಕನಿಷ್ಟ ಮೂಲಭೂತ ಸೌಕರ್ಯಗಳಿಲ್ಲದೆ ಅಲ್ಲಿನ ವಿದ್ಯಾರ್ಥಿಗಳು ದಿನನಿತ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.
ಈ ಶಾಲೆಯಲ್ಲಿ ಕಲಿಯುತ್ತಿರುವ ಒಂದನೇ ತರಗತಿಯಿಂದ ಏಳನೇ ತರಗತಿವರೆಗಿನ ಸುಮಾರು 43 ವಿದ್ಯಾರ್ಥಿಗಳಿಗೆ ಸರಿಯಾದ ಕೊಠಡಿಗಳಿಲ್ಲ, ಎಲ್ಲಾ ವಿದ್ಯಾರ್ಥಿಗಳನ್ನು ಒಂದೇ ಕೊಠಡಿಯೊಳಗೆ ಸೇರಿಸಿ ತರಗತಿಗಳನ್ನು ನಡೆಸಲಾಗುತ್ತಿದೆ.
ಕನಿಷ್ಟ ತರಗತಿಗೆ ಒಂದರಂತೆ ಶಿಕ್ಷಕರ ವ್ಯವಸ್ಥೆಯೂ ಇಲ್ಲದೆ ಕೇವಲ ಮೂರು ಶಿಕ್ಷಕರು ಅದರಲ್ಲಿ ಇಬ್ಬರು ಖಾಯಂ ಹಾಗೂ ಒಬ್ಬರು ಅತಿಥಿ ಶಿಕ್ಷಕಿ ಒಂದೇ ಕೊಠಡಿಯಲ್ಲಿ ತರಗತಿಗಳನ್ನು ನಡೆಸುತ್ತಿದ್ದು,
ಇದು ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುತ್ತಿದೆ. ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ ಸರಿಯಾದ ಶೌಚಾಲಯದ ವ್ಯವಸ್ಥೆ ಇರುವುದಿಲ್ಲ.
ಶಿಕ್ಷಕರಿಗೆ ಪ್ರತ್ಯೇಕ ಕೊಠಡಿಗಳು ಇಲ್ಲ, ಆಟದ ಮೈದಾನ ಇಲ್ಲ, ದೈಹಿಕ ತರಗತಿ ನೀಡಲು ದೈಹಿಕ ಶಿಕ್ಷಕರಿಲ್ಲ, ಬಿಸಿ ಊಟ ಕಲ್ಪಿಸಲು ಸರಿಯಾದ ವ್ಯವಸ್ಥೆಗಳಿಲ್ಲದೆ ಒಟ್ಟು ಶಿಕ್ಷಕರು ಸಂಕಷ್ಟ ಪಡುವ ಸ್ಥಿತಿ ಒಂದೆಡೆಯಾದರೆ ಮತ್ತೊಂದೆಡೆ
ವಿದ್ಯಾರ್ಥಿಗಳಿಗೆ ಏಕಾಗ್ರತೆಯಿಂದ ಕಲಿಯುವ ವಾತಾವರಣವೂ ಇಲ್ಲದೆ ಅವರ ಶಿಕ್ಷಣದ ಮೇಲೆ ಕೆಟ್ಟ ಪರಿಣಾಮ ಬೀಳುವಂತಾಗಿದೆ. ಈ ರೀತಿಯ ಸಮಸ್ಯೆಯಿಂದ ಬಡವರ ಮಕ್ಕಳು ಶಿಕ್ಷಣದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಬಲ್ಮಠ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿ, ಶಿಕ್ಷಕರು, ಶೌಚಾಲಯ ಸಹಿತ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಕೂಡಲೇ ಒದಗಿಸಿಕೊಡಬೇಕೆಂದು ಒತ್ತಾಯಿಸುತ್ತಿದ್ದೇವೆ.
ಇಲ್ಲದಿದ್ದಲ್ಲಿ ಮುಂದಿನ ದಿನ ಶಾಲಾ ವಿದ್ಯಾರ್ಥಿಗಳನ್ನು ಮತ್ತವರ ಪೋಷಕರುಗಳನ್ನು ಸಂಘಟಿಸಿ ಸಮಸ್ಯೆ ಬಗೆಹರಿಸುವವರೆಗೂ ಹೋರಾಟ ನಡೆಸಲಿದ್ದೇವೆ ಎಂದು ಮಂಗಳೂರು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗೆ ಡಿವೈಎಫ್ಐ ಮತ್ತು ಎಸ್ಎಫ್ಐ ಜಂಟಿಯಾಗಿ ಮನವಿ ಸಲ್ಲಿಸಿದೆ.