ದುಬೈನ ಕಡಲತೀರ ಪೋರ್ಟ್ ರಾಶೀದ್ ನಲ್ಲಿ ತೇಲಾಡುವ ಬೃಹತ್ ಐಶಾರಾಮಿ ಹಡಗೊಂದು ಗಮನಸೆಳೆಯುತ್ತಿದೆ. ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿರುವ ಈ ಹಡಗು ಅರಮನೆಯಂತೆ ಕಂಗೊಳಿಸುತ್ತಿದೆ. ಅದುವೇ ಕ್ವೀನ್ ಎಲಿಝಬೆತ್-2.
ದಾಖಲೆ ಬರೆದಿದ್ದ ಹಡಗು :
2008ರಲ್ಲಿ ಕ್ವೀನ್ ಎಲಿಝಬೆತ್-2 ತನ್ನ ಪ್ರಯಾಣಿಕರ ಕೊನೆಯ ಪ್ರಯಾಣದ ಅನಂತರ ಡಿ ಕಮಿಷನ್x ಎಂದು ಘೋಷಣೆ ಮಾಡಿತ್ತು. ಕೊನೆಯ ಪ್ರಯಾಣ ದುಬೈಗೆ ಪ್ರಯಾಣಿಸುವ ಸಲುವಾಗಿ ಮುಂಗಡ ಕಾಯ್ದಿರಿಸುವ ಟಿಕೆಟ್ ಕೇವಲ 20 ನಿಮಿಷದಲ್ಲಿಯೇ ಭರ್ತಿಯಾಗಿತ್ತು. ಇದು ದಾಖಲೆಯನ್ನೇ ಬರೆದಿತ್ತು.
ರಾಯಲ್ ನೇವಿ, ಎಚ್.ಎಂ.ಎಸ್. ಲಾಂಚೆಸ್ಟರ್ ಡ್ನೂಕ್ ಕ್ಲಾಸ್ ಬೋಟ್‌ಗಳು ಕ್ವೀನ್ ಎಲಿಝಬೆತ್-2ನ್ನು ಬೆಂಗಾವಲು ಪಡೆಗಳಾಗಿ ಎಸ್ಕಾರ್ಟ್ ಮಾಡಿಕೊಂಡು ದುಬೈಯ ಪೋರ್ಟ್ ರಾಶೀದ್‌ನಲ್ಲಿ ಗೌರವ ಪೂರ್ವಕವಾಗಿ ಬೀಳ್ಕೊಡಲಾಗಿತ್ತು.
ನವೀಕರಣಗೊಂಡ ಕ್ವೀನ್ ಎಲಿಝಬೆತ್-2 :
2018ರಲ್ಲಿ ದುಬೈಯ ಪೋರ್ಟ್ ರಾಶೀದ್‌ನಲ್ಲಿ ನಿಲುಗಡೆಯಾಗಿದ್ದ ಕ್ವೀನ್ ಎಲಿಝಬೆತ್-2 ಹಡಗನ್ನು ನವೀಕರಣಗೊಳಿಸಲಾಯಿತು. ಅತ್ಯಾಧುನಿಕವಾಗಿ ಹಾಗೂ ಆಕರ್ಷಣೀಯವಾಗಿ ತೇಲಾಡುವ ಐಶಾರಾಮಿ ವಿಲಾಸಿ ಹೊಟೇಲ್‌ನ್ನಾಗಿ ಪರಿವರ್ತಿಸಲಾಯಿತು.
ಅರಮನೆಯಂತೆ ಕಂಗೊಳಿಸಿದ ಐಷಾರಾಮಿ ಕ್ವೀನ್ ಎಲಿಝಬೆತ್-2 ಹಡಗು ವಿಶ್ವದಾದ್ಯಂತ ಪ್ರವಾಸಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಇನ್ನು ಇದರ ಒಳಾಂಗಣ ಪ್ರವೇಶಿಸುವಾಗ ಭವ್ಯ ವಾಸ್ತುಶಿಲ್ಪಗಳ ವೈಭವ ಕಣ್ಣಿಗೆ ಹಬ್ಬದಂತೆ ಭಾಸವಾಗುತ್ತದೆ.
ಹೇಗಿದೆ ಹಡಗು?
ವೀಕ್ಷಿಸಲು ಬರುವ ವೀಕ್ಷಕರು ಮತ್ತು ಹೆರಿಟೆಜ್ ಟೂರ್ ಪ್ಯಾಕೇಜ್‌ನಲ್ಲಿ ಬರುವ ಪ್ರವಾಸಿಗರು ನಿಗದಿತ ದರದಲ್ಲಿ ಒಳಾಂಗಣ ಪ್ರವೇಶ ಪಡೆದು ಒಂದೆರಡು ಗಂಟೆಯಲ್ಲಿ ಸಂಪೂರ್ಣವಾಗಿ ವೀಕ್ಷಿಸಬಹುದಾಗಿದೆ. ರಾತ್ರಿ ಉಳಿದುಕೊಳ್ಳಲು ಹೆಚ್ಚಿನ ದರ ಪಾವತಿಸಿ ಕೊಠಡಿಯನ್ನು ಪಡೆದುಕೊಳ್ಳಬಹುದಾಗಿದೆ. ರಾತ್ರಿಯ ಭೋಜನ ಮತ್ತು ಬೆಳಗಿನ ಉಪಹಾರ ಉಚಿತವಾಗಿ ದೊರೆಯುತ್ತದೆ.
ಕ್ವೀನ್ ಎಲಿಝಬೆತ್-2 ಹಡಗಿನಲ್ಲಿ 447 ಐಷಾರಾಮಿ ಕೊಠಡಿಗಳಿದ್ದು, ಕ್ಲಾಸಿಕ್, ಸುಪಿರಿಯರ್ ಮತ್ತು ಡಿಲಕ್ಸ್ ಹೀಗೆ ವರ್ಗೀಕರಣಗೊಂಡಿದೆ. ಡಿಕಮಿಷನ್ಡ್ ಆಗುವ ಮೊದಲು 515 ಮಂದಿ ಆಸೀನರಾಗಲು ವ್ಯವಸ್ಥೆ ಇದ್ದ ಸಿನೆಮಾ ಹಾಲ್ ಇದೀಗ ಯಾವುದೇ ಸಭೆ ಸಮಾರಂಭಗಳನ್ನು, ಕಂಪೆನಿ ಮೀಟಿಂಗ್, ಕಾನ್ಫರೆನ್ಸ್ ನಡೆಸಬಹುದಾಗಿದೆ.
ಅಲ್ಲದೇ ಇಲ್ಲಿ ಹೆಸರಿಗೆ ತಕ್ಕಂತೆ ಕ್ವೀನ್ ಹಾಲ್ ಸಹ ಇದೆ. ಈ ಹಾಲ್‌ನಲ್ಲಿ ವಿವಾಹ ಸಮಾರಂಭ, ರಾಯಲ್ ವೆಡ್ಡಿಂಗ್ ಸಹ ನಡೆಯುತ್ತಿರುತ್ತದೆ. ಈ ಕ್ವೀನ್ ಹಾಲ್‌ನಲ್ಲಿ ಕೆಲವು ಭಾರತೀಯರ ವಿವಾಹ ಸಹ ನಡೆದಿದೆ. ವಿಶ್ವ ದರ್ಜೆಯ ಭೋಜನ ಹಾಲ್ ಮತ್ತು ವೈವಿಧ್ಯಮಯ ಭಕ್ಷ್ಯ ಭೋಜನಗಳು ದೊರೆಯುತ್ತದೆ. ಅತ್ಯಂತ ದುಬಾರಿ ಮದ್ಯಪಾನೀಯಗಳ ಕೌಂಟರ್ ಸಹ ಇಲ್ಲಿದೆ.
ಹಡಗಿನ ಸನ್ ಡೆಕ್‌ನಲ್ಲಿ ಕ್ಯಾಪ್ಟನ್ ಕೊಠಡಿ, ವಿಶಾಲವಾದ ಬಾಲ್ಕನಿ, ಹಡಗಿನ ನೌಕಾ ಅಧಿಕಾರಿಗಳ ಕೊಠಡಿಗಳನ್ನು ವೀಕ್ಷಿಸಬಹುದು. ಹಡಗಿನ ಅಮೂಲ್ಯ ವಸ್ತುಗಳ ಸಂಗ್ರಹಾಲಯ ವಿಭಾಗವಂತೂ ನಿಮಗೆ ಇಷ್ಟವಾಗಲಿದೆ. ಮೊದಲು ಪ್ರಯಾಣಿಸುವ ಸಂದರ್ಭದಲ್ಲಿ ಉಪಯೋಗಿಸಿದ್ದ ಕ್ಯಾಪ್ಟನ್‌ರವರ ಯೂನಿಫಾರ್ಮ್ ನ್ನು ಇಲ್ಲಿ ನೋಡಿ ಖುಷಿಪಡಬಹುದಾಗಿದೆ. ಹಡಗಿನ ಬೃಹತ್ ಎಂಜಿನ್ ರೂಮ್ ಇನ್ನಿತರ ಹಡಗಿಗೆ ಸಂಬಧಿಸಿದ ಸ್ಟೋರ್ ರೂಮ್ ಇದ್ದು, ಅದನ್ನೂ ವೀಕ್ಷಿಸಬಹುದಾಗಿದೆ.
ಹಲವು ದಾಖಲೆಗಳನ್ನು ನಿರ್ಮಿಸಿರುವ ದುಬೈ, ಕ್ವೀನ್ ಎಲಿಝಬೆತ್-2 ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದುಬರುತ್ತದೆ, ಅಂತಹ ಅದ್ಭುತ ಸಂಭ್ರಮವನ್ನು ನೀಡುವಲ್ಲಿ ಹಡಗು ಯಶಸ್ವಿಯಾಗಿರೋದು ಸುಳ್ಳಲ್ಲ.