ಕಾಸರಗೋಡು : ದುಬೈನಿಂದ ಕೇರಳಕ್ಕೆ ಆಗಮಿಸಿದ ಏರ್ ಇಂಡಿಯಾ ಪ್ರಯಾಣಿಕರ ವಿಮಾನ ಕ್ಯಾಲಿಕಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅಪಘಾತಕ್ಕೀಡಾಗಿದೆ.
ಇಂದು ಸಂಜೆ 7.45 ಕ್ಕೇ ಈ ದುರ್ಘಟನೆ ಸಂಭವಿಸಿ. ಭಾರಿ ಮಳೆಯ ಕಾರಣ ವಿಮಾನ ರನ್ದೆ ವೇಯಲ್ಲಿ ಜಾರಿ ಹೋಗಿ ಪ್ರಪಾತಕ್ಕೆ ಬಿದ್ದಿದೆ.
ಭಾರಿ ಸಾವು ನೋವುಗಳು ಸಂಭವಿಸಿರುವ ಸಾಧ್ಯತೆಗಳಿದ್ದು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ.
ದುಬೈಯಿಂದ ಸುಮಾರು 191 ಮಂದಿ ಪ್ರಯಾಣಿಕರನ್ನು ಹೊತ್ತು ತಂದ ಎರ್ ಇಂಡಿಯಾ ವಿಮಾನ ಇದಾಗಿದೆ.ಈ ಘಟನೆಯ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಬರಬೇಕಾಗಿದೆ.
ಇದು ದಶಕಗಳ ಹಿಂದೆ ನಡೆದ ಮಂಗಳೂರು ಬಜ್ಪೆ ವಿಮಾನ ದುರಂತವನ್ನು ನೆನಪಿಸಿದೆ. ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2010ರ ಮೇ 22ರ ಬೆಳಗ್ಗೆ 6.15ಕ್ಕೆ ನಡೆದ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಈ ದುರಂತ ಸರಿಸಮನಾಗಿದೆ.ಈ ದುರಂತದಲ್ಲಿ ಪೈಲಟ್, ಸಿಬಂದಿ ಸೇರಿ 158 ಮಂದಿ ಮೃತಪಟ್ಟಿದ್ದರು. 135 ಮಂದಿ ವಯಸ್ಕರು, 19 ಮಕ್ಕಳು ಹಾಗೂ 4 ಶಿಶುಗಳು, 6 ಮಂದಿ ವಿಮಾನ ಸಿಬಂದಿ ಸೇರಿ ಒಟ್ಟು 166 ಮಂದಿ ಪ್ರಯಾಣಿಸುತ್ತಿದ್ದರು. ಈ ದುರ್ಘಟನೆಯಲ್ಲಿ 8 ಮಂದಿ ಬದುಕುಳಿದಿದ್ದರು. ಕ್ಯಾಲಿಕಟ್‌ನಂತೆ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ವಿಮಾನ ದುರಂತಕ್ಕೀಡಾಗಿತ್ತು. ರನ್‌ವೇಗೆ ಇಳಿದ ವಿಮಾನ ಸ್ವಲ್ಪ ದೂರ ಕ್ರಮಿಸಿ ನೋಡುತ್ತಿದ್ದಂತೆಯೇ ವಿಮಾನ ಎರಡು ತುಂಡಾಗಿ ಹೊತ್ತಿ ಉರಿದಿತ್ತು.ದುರಂತದಲ್ಲಿ ಪವಾಡಸದೃಶವೆಂಬಂತೆ ವಿಮಾಣದಲ್ಲಿದ್ದ ತಣ್ಣೀರು ಬಾವಿ ಪ್ರದೀಪ್, ಹಂಪನ್‍ಕಟ್ಟೆಯ ಮಹಮ್ಮದ್ ಉಸ್ಮಾನ್, ವಾಮಂಜೂರಿನ ಜುವೆಲ್ ಡಿ ಸೋಜಾ, ಕೇರಳ ಕಣ್ಣೂರು ಕಂಬಿಲ್ ಮಾಹಿನ್ ಕುಟ್ಟಿ, ಕಾಸರಗೋಡು ಉದುಮದ ಕೃಷ್ಣನ್, ಉಳ್ಳಾಲದ ಉಮ್ಮರ್ ಫಾರೂಕ್, ಪುತ್ತೂರು ಸಾಮೆತ್ತಡ್ಕದ ಅಬ್ದುಲ್ಲಾ, ಮಂಗಳೂರು ಕೆಎಂಸಿ ವಿದ್ಯಾರ್ಥಿನಿ ಬಾಂಗ್ಲಾದ ಸಬ್ರೀನಾ ಬದುಕಿ ಉಳಿದಿದ್ದರು.