ರಿಯಾದ್: ಡ್ರೋನ್ ದಾಳಿಯಿಂದ 10 ಜನರು ತೀವ್ರ ಗಾಯಗೊಂಡ ಘಟನೆ ಸೌದಿ ದಕ್ಷಿಣ ನಗರದ ಜಿಜಾನ್‍ನ ಕಿಂಗ್ ಅಬ್ದುಲ್ಲಾ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಸೌದಿ ದಕ್ಷಿಣ ನಗರ ಜಿಜಾನ್‍ನ ಕಿಂಗ್ ಅಬ್ದುಲ್ಲಾ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಸ್ಫೋಟಕಗಳು ತುಂಬಿದ ಡ್ರೋನ್ ದಾಳಿ ನಡೆದಿದ್ದು, ಪರಿಣಾಮ 10 ಜನರಿಗೆ ತೀವ್ರ ಗಾಯವಾಗಿದೆ.
ಅದರಲ್ಲಿ 6 ಸೌದಿಗಳು, ಮೂವರು ಬಾಂಗ್ಲಾದೇಶಿ ಪ್ರಜೆಗಳು ಮತ್ತು ಓರ್ವ ಸುಡಾನ್ ಪ್ರಜೆ ಗಾಯಗೊಂಡಿದ್ದಾರೆ.
ಈ ದಾಳಿಯ ವೇಳೆ ವಿಮಾನ ನಿಲ್ದಾಣದ ಕೆಲವು ಮುಂಭಾಗದ ಕಿಟಕಿಗಳು ಸಹ ಛಿದ್ರಗೊಂಡಿವೆ ಎಂದು ಸೌದಿ ನೇತೃತ್ವದ ಒಕ್ಕೂಟದ ವಕ್ತಾರರು ತಿಳಿಸಿದ್ದಾರೆ.
ಸೌದಿ ನೇತೃತ್ವದ ಸೇನಾ ಒಕ್ಕೂಟವು 2015 ರಲ್ಲಿ ಯೆಮೆನ್‍ನಲ್ಲಿ ಮಧ್ಯಪ್ರವೇಶಿಸಿತು. ಈ ಪರಿಣಾಮ ಅಧ್ಯಕ್ಷ ಅಬ್ದ್ರಬ್ಬು ಮನ್ಸೂರ್ ಹಾದಿ ಅವರ ಉಚ್ಛಾಟಿತ ಸರ್ಕಾರದ ಬೆಂಬಲ ಪಡೆಗಳು ಮತ್ತು ಇರಾನ್-ಹೊಂದಿಕೊಂಡ ಹೌದಿ ಗುಂಪಿನ ವಿರುದ್ಧ ಹೋರಾಡುವುದು.
ಈ ಕೃತ್ಯ ಯಾರು ಮಾಡಿದ್ದು ಎಂದು ತಕ್ಷಣಕ್ಕೆ ಹೇಳಲು ಆಗುತ್ತಿಲ್ಲ.
ಆದರೆ ದಾಳಿ ಮಾಡಿದ ಗುಂಪು ನಿಯಮಿತವಾಗಿ ಗಲ್ಫ್ ಸಾಮ್ರಾಜ್ಯವನ್ನು ಗುರಿಯಾಗಿಸಿಕೊಂಡು ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ಮಂಗಳೂರು/ಮುಂಬೈ : ಜನವರಿ 22ರಿಂದ ಆರಂಭವಾಗುವ ಭಾರತ-ಇಂಗ್ಲೆಂಡ್ ಟಿ20 ಸರಣಿಗೆ ಭಾರತ ತಂಡ ಪ್ರಕಟವಾಗಿದೆ. ಟೀಂ ಇಂಡಿಯಾದಲ್ಲಿ ಈ ಬಾರಿ ನಿರೀಕ್ಷೆಯಂತೆ ಸ್ಟಾರ್ ಆಟಗಾರರಿಗೆ ಕೊಕ್ ಕೊಟ್ಟಿದ್ರೆ, ವಿಶ್ವಕಪ್ ಬಳಿಕ ಮೊಹಮ್ಮದ್ ಶಮಿ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ.
ಇಂಗ್ಲೆಂಡ್ ವಿರುದ್ದದ 5 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡ ಪ್ರಕಟವಾಗಿದೆ. ತಂಡದಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ಕೆ.ಎಲ್ ರಾಹುಲ್ ಮುಂತಾದ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.
15 ಸದಸ್ಯರ ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಇನ್ನು ಉಪನಾಯಕನಾಗಿ ಅಕ್ಷರ್ ಪಟೇಲ್ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆ ಪ್ರಮುಖ ವೇಗಿ ಮೊಹಮ್ಮದ್ ಶಮಿ ಅವರನ್ನು ಸಹ ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಭಾರತ ಟಿ20 ತಂಡಕ್ಕೆ 34 ವರ್ಷದ ಮೊಹಮ್ಮದ್ ಶಮಿ ಕಂಬ್ಯಾಕ್ ಮಾಡಿದ್ದಾರೆ. ಅದು ಕೂಡ ಬರೋಬ್ಬರಿ 790 ದಿನಗಳ ದಿನಗಳ ಬಳಿಕ ಎಂಬುದೇ ಅಚ್ಚರಿ. ಅಂದರೆ ಮೊಹಮ್ಮದ್ ಶಮಿ ಕೊನೆಯ ಬಾರಿ ಟೀಮ್ ಇಂಡಿಯಾ ಪರ ಟಿ20 ಪಂದ್ಯವಾಡಿದ್ದು 2022 ರಲ್ಲಿ. ಇದೀಗ 2 ವರ್ಷಗಳ ಬಳಿಕ ಮತ್ತೆ ಅವರಿಗೆ ಭಾರತ ಟಿ20 ತಂಡದಲ್ಲಿ ಸ್ಥಾನ ನೀಡಿರುವುದೇ ಅಚ್ಚರಿ.
ಏಕೆಂದರೆ ಮೊಹಮ್ಮದ್ ಶಮಿ ಅವರು 2022 ರ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದ ಬಳಿಕ ಟೀಮ್ ಇಂಡಿಯಾ ಪರ ಒಂದೇ ಒಂದು ಟಿ20 ಪಂದ್ಯವಾಡಿಲ್ಲ. ಅಡಿಲೇಡ್ನಲ್ಲಿ ನಡೆದ ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲಿ 3 ಓವರ್ಗಳನ್ನು ಎಸೆದಿದ್ದ ಶಮಿ 39 ರನ್ ನೀಡಿ ದುಬಾರಿಯಾಗಿದ್ದರು.
ಈ ಕಳಪೆ ಪ್ರದರ್ಶನದ ಬಳಿಕ ಅವರನ್ನು ಟಿ20 ತಂಡದ ಆಯ್ಕೆಗೆ ಪರಿಗಣಿಸಿರಲಿಲ್ಲ. ಅಲ್ಲದೆ ಏಕದಿನ ಮತ್ತು ಟೆಸ್ಟ್ ತಂಡಗಳಲ್ಲಿ ಮಾತ್ರ ಸ್ಥಾನ ನೀಡಲಾಗುತ್ತಿತ್ತು. ಆದರೀಗ 790 ದಿನಗಳ ಬಳಿಕ ಮೊಹಮ್ಮದ್ ಶಮಿ ಅವರನ್ನು ಟಿ20 ತಂಡಕ್ಕೆ ಕರೆತರಲಾಗಿದೆ.
ಚಾಂಪಿಯನ್ಸ್ ಟ್ರೋಫಿಗೆ ಶಮಿ ಅವಶ್ಯಕ
ಶಮಿ 2023ರ ಏಕದಿನ ವಿಶ್ವಕಪ್ ಬಳಿಕ ಮೊಹಮ್ಮದ್ ಶಮಿ ಟೀಮ್ ಇಂಡಿಯಾ ಪರ ಕಣಕ್ಕಿಳಿದಿಲ್ಲ. ಇದೀಗ ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ಶಮಿ ಅವರ ಅವಶ್ಯಕತೆ ಟೀಮ್ ಇಂಡಿಯಾಗೆ ಇದೆ.
ಆದರೆ ಅದಕ್ಕೂ ಮುನ್ನ ಅವರ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಆಯ್ಕೆ ಸಮಿತಿ ನಿರ್ಧರಿಸಿದೆ. ಇದಕ್ಕಾಗಿಯೇ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಶಮಿ ಅವರನ್ನು ಕಣಕ್ಕಿಳಿಸಲಾಗುತ್ತಿದೆ. ಈ ಸರಣಿಯಲ್ಲಿ ಅವರು ಫಿಟ್ನೆಸ್ನೊಂದಿಗೆ ಸಂಪೂರ್ಣ ಓವರ್ಗಳನ್ನು ಎಸೆಯಲು ಯಶಸ್ವಿಯಾದರೆ, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಲಿದ್ದಾರೆ.
ಇನ್ನು ಇಂಗ್ಲೆಂಡ್ ವಿರುದ್ದದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಮೊಹಮ್ಮದ್ ಶಮಿ ಕಾಣಿಸಿಕೊಂಡರೆ, ಚಾಂಪಿಯನ್ಸ್ ಟ್ರೋಫಿ ತಂಡದಲ್ಲೂ ಅವರಿಗೆ ಸ್ಥಾನ ಸಿಗಲಿದೆ. ಹಾಗಾಗಿ ಮುಂಬರುವ 5 ಪಂದ್ಯಗಳ ಟಿ20 ಸರಣಿಯು ಶಮಿ ಪಾಲಿಗೆ ಅಗ್ನಿಪರೀಕ್ಷೆಯಾಗಲಿದೆ ಎಂದು ಹೇಳಿದರೆ ತಪ್ಪಾಗಲಾರದು.
ಮಂಗಳೂರು/ಪತ್ತನಂತಿಟ್ಟ: ಭಕ್ತರಿಬ್ಬರು ವಿಶ್ವಶಾಂತಿಗಾಗಿ ಪ್ರಾರ್ಥಿಸಿ ಸುಮಾರು 223 ದಿನಗಳ ಕಾಲ 8,000ಕಿ.ಮೀ ದೂರ ಬರಿಗಾಲಲ್ಲಿ ನಡೆದುಕೊಂಡು ಬಂದು ಶಬರಿಮಲೆಯ ಅಯ್ಯಪ್ಪ ದೇವಾಲಯವನ್ನು ನಿನ್ನೆ (ಜ.11) ತಲುಪಿದ್ದಾರೆ.
ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಯ ಮುಖಾಂತರ ಈ ವಿಚಾರ ತಿಳಿದಿದೆ.
ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳಲ್ಲಿ ಕೇರಳ ರಾಜ್ಯದ ಪತ್ತನಂತಿಟ್ಟ ಜಿಲ್ಲೆಯ ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯಲ್ಲಿರುವ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯವೂ ಒಂದು. ದಟ್ಟ ಕಾಡಿನ ನಡುವೆ ಈ ದೇವಾಲಯವಿದ್ದು, ಪ್ರಾಕೃತಿಕವಾಗಿ ಎಷ್ಟು ಸುಂದರವಾಗಿದೆಯೋ ಶ್ರದ್ಧಾ ಭಕ್ತಿಗೂ ಅಷ್ಟೇ ಪ್ರಸಿದ್ಧಿ ಪಡೆದಿದೆ. ಅಯ್ಯಪ್ಪ ಮಾಲೆ ಧರಿಸುವುದನ್ನು ಅತ್ಯಂತ ಪವಿತ್ರವಾದ ಕೆಲಸ ಎಂದು ಪರಿಗಣಿಸಲಾಗಿದೆ. ಮಾಲಾಧಾರಿಗಳು ಕಠೋರ ಜೀವನಶೈಲಿ ನಡೆಸಿ ಅಯ್ಯಪ್ಪನ ದರ್ಶನ ಪಡೆಯುತ್ತಾರೆ. ಆದರೆ ಈ ಭಕ್ತರಿಬ್ಬರು ಅತೀ ಕಠಿಣ ವೃತಾಚರಣೆ ಮಾಡಿ ಸ್ವಾಮಿಯ ದರ್ಶನ ಪಡೆಯುವ ಮೂಲಕ ಸುದ್ಧಿಯಲ್ಲಿದ್ದಾರೆ.
ಕಾಸರಗೋಡು ಜಿಲ್ಲೆಯ ರಾಮದಾಸ್ ನಗರದ ನಿವಾಸಿಗಳಾದ ಸನತ್‌ಕುಮಾರ್ ನಾಯಕ್ ಮತ್ತು ಸಂಪತ್‌ಕುಮಾರ್ ಶೆಟ್ಟಿ ಅವರು 2024ರ ಮೇ 26ರಂದು ಕೇರಳದಿಂದ ಬದರಿನಾಥಕ್ಕೆ ರೈಲಿನಲ್ಲಿ ಪ್ರಯಾಣಿಸಿದರು. ಜೂನ್ 3ರಂದು ತಮ್ಮ ‘ಇರುಮುಡಿ’ ಹೊತ್ತು ಅಲ್ಲಿಂದ ಶಬರಿಮಲೆಗೆ ಪ್ರಯಾಣ ಬೆಳಸಿದ್ದರು. ನಿನ್ನೆ ದೇವಸ್ಥಾನ ತಲುಪಿ ದೇವರ ದರ್ಶನ ಪಡೆದಿದ್ದಾರೆ.
ಮಂಗಳೂರು/ಕಾಜೀರಂಗ : ಭಾರತದ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಯಾಗುತ್ತಿದೆ. ದೇಶದಲ್ಲಿ ಈಗಾಗಲೇ ವಿದ್ಯುತ್ ಚಾಲಿತ ಬಸ್, ರೈಲು ಸಂಚರಿಸುತ್ತಿದೆ.
ಅದರಲ್ಲೂ ವಿಶೇಷವಾಗಿ ಸೌರ ವಿದ್ಯುತ್ ಅಥವಾ ಹಸಿರು ಇಂಧನವನ್ನು ಬಳಕೆ ಮಾಡಿಕೊಂಡು ಸಂಚರಿಸಲಿವೆ. ಈ ಬಗ್ಗೆ ಅಸ್ಸಾಂನ ಕಾಜೀರಂಗದಲ್ಲಿ ನಡೆದ ಒಳನಾಡು ಜಲಸಾರಿಗೆ ಅಭಿವೃದ್ದಿ ಸಮಿತಿ ಸಭೆಯಲ್ಲಿ ಮಾತನಾಡಿದ ಕೇಂದ್ರ ಬಂದರು ಮತ್ತು ನೌಕಾಯಾನ ಸಚಿವ ಸರ್ವಾನಂದ ಸೋನೋವಾಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಸ್ಸಾಂನ ಗುವಾಹಟಿ, ಕರ್ನಾಟಕದ ಮಂಗಳೂರು ಸೇರಿದಂತೆ ದೇಶದ 15 ನಗರಗಳಲ್ಲಿ ಕೇರಳದ ಕೊಚ್ಚಿಯಲ್ಲಿ ಅನುಷ್ಠಾನಗೊಳಿಸಲಾಗಿರುವ “ವಾಟರ್ ಮೆಟ್ರೋ” ಯೋಜನೆಯನ್ನು ಅನುಷ್ಠಾನ ಗೊಳಿಸಲಾಗುತ್ತದೆ ಎಂದು ಸೋನೋ ವಾಲ್ ಹೇಳಿದ್ದಾರೆ. ಇದಲ್ಲದೆ ವಿವಿಧ ರಾಜ್ಯಗಳಲ್ಲಿ ಬಂದರುಗಳಲ್ಲಿ 60 ಹೊಸ ಹಡಗುಕಟ್ಟೆಗಳನ್ನು ನಿರ್ಮಿಸಲಾಗುತ್ತದೆ.
ಅಗ್ಗದ ಸರಕು ಸಾಗಣೆಗಾಗಿ ಸರ್ಕಾರವು ಮೂಲಸೌಕರ್ಯ ಅಭಿವೃದ್ದಿಗೆ 50,000 ಕೋಟಿ ರೂ. ಹೂಡಿಕೆ ಮಾಡಲಿದೆ. ಕೇರಳದಲ್ಲಿ ಈಗಾಗಲೇ ಸೌರ ವಿದ್ಯುತ್ ಚಾಲಿತ ಬೋಟ್ ಸೇವೆ ನೀಡುತ್ತಿದೆ.
ಕೇರಳದ ವಾಟರ್ ಮೆಟ್ರೋ ವಿಶೇಷತೆ
10 ದ್ವೀಪಗಳ ಮಧ್ಯೆ ಒಟ್ಟು 38 ಟರ್ಮಿನಲ್ಗಳನ್ನ ನಿರ್ಮಿಸಲಾಗಿದೆ. ಈ ಎಲ್ಲಾ ಟರ್ಮಿನಲ್ಗಳಲ್ಲೂ ವಾಟರ್ ಮೆಟ್ರೋ ಸ್ಟಾಪ್ ಕೊಡುತ್ತದೆ. ಇದೇ ಟರ್ಮಿನಲ್ಗಳ ಮೂಲಕ ಜನರು ಮೆಟ್ರೋ ಏರಬಹುದಾಗಿದೆ. ಇನ್ನು ಈ ಟರ್ಮಿನಲ್ಗಳು ಕೂಡ ಅಷ್ಟೇ, ವಾಟರ್ ಮೆಟ್ರೋದ ಲೆವೆಲ್ಗೆ ಇರುತ್ತೆ. ಹೀಗಾಗಿ ಮೆಟ್ರೋ ಹತ್ತುವಾಗ, ಇಳಿಯುವಾಗ ಯಾವುದೇ ರಿಸ್ಕ್ ಇರೋದಿಲ್ಲ.
ಇನ್ನು ವಾಟರ್ ಮೆಟ್ರೋ ಸೇವೆಗೆ ಎಲೆಕ್ಟ್ರಿಕ್ ಹೈಬ್ರೀಡ್ ಬೋಟ್ಗಳನ್ನ ಬಳಕೆ ಮಾಡಲಾಗುತ್ತಿದೆ. ಪರಿಸರ ಸ್ನೇಹಿಯಾಗಿರುವ ಈ ಬೋಟ್ ಅಷ್ಟೇ ಸುರಕ್ಷಿತ. ಈ ಬೋಟ್ನಲ್ಲಿ ಏರ್ಕಂಡೀಷನ್ ವ್ಯವಸ್ಥೆ ಕೂಡ ಇದೆ. ದೊಡ್ಡದಾದ ಕಿಟಕಿಗಳನ್ನ ಅಳವಡಿಸಲಾಗಿದ್ದು, ಹೀಗಾಗಿ ಕೊಚ್ಚಿನ್ ಬ್ಯಾಕ್ವಾಟರ್ ಸೌಂದರ್ಯವನ್ನ ಕೂಡ ಕಣ್ತುಂಬಿಕೊಳ್ಳಬಹುದು.
ವಾಟರ್ ಮೆಟ್ರೋ ಸಂಚಾರದ ಶುಲ್ಕ ಕೂಡ ಬಜೆಟ್ ಫ್ರೆಂಡ್ಲಿಯಾಗಿಯೇ ಇದೆ. ಸಿಂಗಲ್ ಜರ್ನಿ ಟಿಕೆಟ್, ವಾರದ, ತಿಂಗಳ ಮತ್ತು ಮೂರು ತಿಂಗಳಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಕೂಡ ಮಾಡಲಾಗಿದೆ. ಸಿಂಗಲ್ ಜರ್ನಿಗೆ ಮಿನಿಮಮ್ ಟಿಕೆಟ್ ದರ 20 ರೂಪಾಯಿ. ವಾರದ ಪಾಸ್ ಬೇಕು ಅನ್ನೋದಾದ್ರೆ, ಒಂದು ವಾರದ ಟ್ರಿಪ್ನಲ್ಲಿ ಒಟ್ಟು 12 ಬಾರಿ ವಾಟರ್ ಮೆಟ್ರೋದಲ್ಲಿ ಸಂಚರಿಸಬಹುದು. ಇದಕ್ಕೆ 180 ರೂಪಾಯಿ ವೆಚ್ಚವಾಗುತ್ತದೆ. ಇನ್ನು ತಿಂಗಳ ಟ್ರಿಪ್ ಪಾಸ್ಗೆ 50 ಬಾರಿ ಓಡಾಡಬಹುದು. ಇದರ ಟಿಕೆಟ್ ದರ 600 ರೂಪಾಯಿ. ಇನ್ನು ಮೂರು ತಿಂಗಳ ಪಾಸ್ಗೆ 1500 ರೂಪಾಯಿ ಚಾರ್ಜ್ ಮಾಡಲಾಗುತ್ತೆ. 90 ದಿನಗಳ ಕಾಲ 150 ಬಾರಿ ಓಡಾಡಬಹುದು. ಕ್ಯೂ ಆರ್ ಕೋಡ್ ಬಳಸಿ ಪ್ರಯಾಣಿಕರು ಟಿಕೆಟ್ ಬುಕ್ ಮಾಡಬಹುದು.