ಡಾ. ಡಿ ವೀರಂದ್ರ ಹೆಗ್ಗಡೆ ಜನ್ಮದಿನಾಚರಣೆ: ರಾಜ್ಯದಾದ್ಯಂತ ವಾತ್ಸಲ್ಯ ಸಹಾಯಹಸ್ತ ವಿತರಣೆ
ಬೆಳ್ತಂಗಡಿ: ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಜನ್ಮ ದಿನದ ಶುಭ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರಾಜ್ಯಾದ್ಯಂತ ವಾತ್ಸಲ್ಯ ಸಹಾಯಹಸ್ತ ವಿತರಣಾ ಕಾರ್ಯಕ್ರಮಕ್ಕೆ ಬುಧವಾರ ಧರ್ಮಸ್ಥಳದಲ್ಲಿ ಚಾಲನೆ ನೀಡಲಾಯಿತು.ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಸಹಾಯಹಸ್ತ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವಿ.ಹೆಗ್ಗಡೆ ಅವರು ಉದ್ಘಾಟಿಸಿದರು.
ಯೋಜನೆಯ ವತಿಯಿಂದ ಧರ್ಮಾಧಿಕಾರಿಗಳಿಗೆ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಗೌರವ ಸಮರ್ಪಣೆ ಮಾಡಲಾಯಿತು.ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ವಿ.ರಾಮಸ್ವಾಮಿ, ಶ್ರೀ ಕ್ಷೇತ್ರದ ಡಿ.ಹರ್ಷೇಂದ್ರ ಕುಮಾರ್, ಎಸ್.ಡಿ.ಎಂ.ಎಜ್ಯುಕೇಶನ್ ಟ್ರಸ್ಟ್ ಕಾರ್ಯದರ್ಶಿ ಡಾ.ಯಶೋವರ್ಮ ಉಪಸ್ಥಿತರಿದ್ದರು.
ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಸ್ವಾಗತಿಸಿದರು. ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಯಿಸ್ ವಂದಿಸಿದರು.
ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ನಿರ್ದೇಶಕಿ ಮಮತಾ ರಾವ್ ನಿರ್ವಹಿಸಿದರು. ಹಲವು ಕ್ಷೇತ್ರದ ಗಣ್ಯರು ಧರ್ಮಸ್ಥಳಕ್ಕೆ ಭೇಟಿ ನೀಡಿ ಪೂಜ್ಯ ಖಾವಂದರಿಗೆ ಹುಟ್ಟು ಶುಭಾಶಯ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಅರ್ಹರಿಗೆ ಮೂಲ ಸೌಕರ್ಯಗಳನ್ನೊಳಗೊಂಡ 7300 ಕಿಟ್ ಗಳನ್ನು ಒಳಗೊಂಡ ಟ್ರಕ್ ಗಳಿಗೆ ಚಾಲನೆ ನೀಡಲಾಯಿತು.