DAKSHINA KANNADA
ಚಿಮಣಿ ಬೆಳಕಿನಲ್ಲಿ ದಿನ ಕಳೆಯುತ್ತಿದ್ದ ಇಲ್ಲಿನ ಕೊರಗ ಕುಟುಂಬಗಳಿಗೆ ಬೆಳಕಾದ ಡಾ. ಭರತ್ ಶೆಟ್ಟಿ..!
ಚಿಮಣಿ ಬೆಳಕಿನಲ್ಲಿ ದಿನ ಕಳೆಯುತ್ತಿದ್ದ ಇಲ್ಲಿನ ಕೊರಗ ಕುಟುಂಬಗಳಿಗೆ ಬೆಳಕಾದ ಡಾ. ಭರತ್ ಶೆಟ್ಟಿ..!
ಮಂಗಳೂರು :ಚಿಮಣಿ ಬೆಳಕಿನಲ್ಲಿ ದಿನ ಕಳೆಯುತ್ತಿದ್ದ ಕುಪ್ಪೆಪದವಿನ ಕೊರಗ ಕುಟುಂಬಗಳಿಗೆ ಶಾಸಕ ಡಾ. ಭರತ್ ಶೆಟ್ಟಿ ಬೆಳಕಾಗಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಇಲ್ಲಿನ ಎರಡು ಕೊರಗ ಕುಟುಂಬಗಳು ವಿದ್ಯುತ್ ಕಾಣದೆ ಚಿಮಣಿ ಬೆಳಕಿನಲ್ಲಿ ದಿನ ಕಳೆಯುತ್ತಿದ್ದರು. ಇದೀಗ ಎರಡು ಮನೆಗಳಿಗೆ ನೀಡಲಾದ ವಿದ್ಯುತ್ ಸಂಪರ್ಕ ನೀಡಲಾಗಿದ್ದು ಶಾಸಕ ದಾ. ಭರತ್ ಶೆಟ್ಟಿ ಅವರು ಶನಿವಾರ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕುಪ್ಪೆಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಡಕ್ಕೆರಿ ಎಂಬಲ್ಲಿ ವಾಸವಿರುವ ಲೀಲಾ ಎಂಬವರ ಮಕ್ಕಳಿಗೆ ಕಳೆದ ನಾಲ್ಕು ವರ್ಷಗಳ ಹಿಂದೆ ಸರಕಾರದಿಂದ ಎರಡು ಮನೆಗಳನ್ನು ನಿರ್ಮಿಸಲಾಗಿತ್ತು,
ಆದರೆ ಲೀಲಾ ಅವರ ಜಾಗ ಮಕ್ಕಳ ಜಂಟೀ ಹೆಸರಲ್ಲಿದ್ದ ಕಾರಣದಿಂದ ಭೂಪರಿವರ್ತನೆಯಾಗದೆ, ಪಂಚಾಯತ್ ವಿದ್ಯುತ್ ಸಂಪರ್ಕಕ್ಕೆ ಅಗತ್ಯವಾಗಿದ್ದ ನಿರಾಕ್ಷೇಪಣಾ ಪತ್ರ ನೀಡಿರಲಿಲ್ಲ ಈ ಕಾರಣದಿಂದಾಗಿ ವಿದ್ಯುತ್ ಸಂಪರ್ಕ ಸಾಧ್ಯವಾಗಿರಲಿಲ್ಲ.
ಈ ಬಗ್ಗೆ ಸ್ಥಳೀಯಮುಖಂಡರು ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ಧನ ಗೌಡ ಮತ್ತು ಶಾಸಕ ಭರತ್ ಶೆಟ್ಟಿ ಅವರ ಗಮನಕ್ಕೆ ತಂದಿದ್ದು, ಕುಪ್ಪೆಪದವು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಜಗದೀಶ್ ಕುಲಾಲ್ ಪಾಕಜೆ ಮತ್ತು ಅಕ್ರಮ ಸಕ್ರಮ ಸಮಿತಿ ಸದಸ್ಯ ಮತ್ತು ಉತ್ತರ ಮಂಡಲ ಬಿಜೆಪಿ ಕಾರ್ಯದರ್ಶಿ ಗಣೇಶ್ ಪಾಕಜೆ ಅವರ ಮೂಲಕ ವಿದ್ಯುತ್ ಸಂಪರ್ಕಕ್ಕೆ ಅಗತ್ಯ ಕ್ರಮ ಕೈಗೊಂಡು ಎರಡೂ ಮನೆಗಳಲ್ಲಿ ವಿದ್ಯುತ್ ಬೆಳಗುವಂತೆ ಮಾಡಿದ್ದಾರೆ.
ಜಗದೀಶ್ ಕುಲಾಲ್ ಪಾಕಜೆ ಅವರು ಎರಡೂ ಮನೆಗಳಿಗೆ ಉಚಿತವಾಗಿ ವಿದ್ಯುದೀಕರಣ ಕಾಮಗಾರಿಯನ್ನು ಮಾಡಿಕೊಟ್ಟಿದ್ದು, ಸ್ವತಃ ಶಾಸಕರೇ ವಿದ್ಯುತ್ ಸಂಪರ್ಕದ ವೆಚ್ಚ ವನ್ನು ಭರಿಸಿದ್ದಾರೆ.
ಶಾಸಕರು ವಿದ್ಯುತ್ ದೀಪ ಬೆಳಗಿಸಿ ಶುಭ ಹಾರೈಸಿದರು. ಶ್ರೀಮತಿ ಲೀಲಾ ಮತ್ತು ಮಕ್ಕಳು, ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ಧನ ಗೌಡ ಮುಚ್ಚೂರು, ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ,ಉತ್ತರ ಮಂಡಲ ಬಿಜೆಪಿ ಎಸ್ ಟಿ ಮೋರ್ಚಾ ಅಧ್ಯಕ್ಷ ಅಶೋಕ್ ನಾಯ್ಕ್, ಪ್ರಧಾನ ಕಾರ್ಯದರ್ಶಿ ರಾಜೇಶ್ ನಾಯ್ಕ್, ಎಡಪದವು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಸಾದ್ ಎಂ. ಕುಪ್ಪೆಪದವು ಶಕ್ತಿ ಕೇಂದ್ರದ ಅಧ್ಯಕ್ಷ ಜಗದೀಶ್ ಕುಲಾಲ್ ಪಾಕಜೆ, ಉಪಾಧ್ಯಕ್ಷ ಶಿವರಾಮ್ ಶೆಟ್ಟಿ ಉಳಿಪಾಡಿ, ಜತೆ ಕಾರ್ಯದರ್ಶಿ ಅಶೋಕ್ ಕಟ್ಟೆಮಾರ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
BELTHANGADY
ಸೈಕಲ್ ರಿಪೇರಿ ವಿಚಾರಕ್ಕೆ ಜೀ*ವಾಂತ್ಯಗೊಳಿಸಿದ ಬಾಲಕ..!
ಬೆಳ್ತಂಗಡಿ: ಕ್ಷುಲ್ಲಕ ಕಾರಣಕ್ಕೆ 8 ನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣಾದ ಘಟನೆ ಕರಾಯ ಗ್ರಾಮದ ಶಿವಗಿರಿ ದುಗಲಾಡಿ ಎಂಬಲ್ಲಿ ಏ.19ರಂದು ನಡೆದಿದೆ. ಉಪ್ಪಿನಂಗಡಿಯ ಖಾಸಗಿ ಶಾಲೆಯ ಮುಂದಿನ ಅವಧಿಯಲ್ಲಿ 8 ನೇ ತರಗತಿ ವಿದ್ಯಾರ್ಥಿಯಾಗಿದ್ದ ನಂದನ್ (13) ಎಂಬಾತ ಆತ್ಮಹತ್ಯೆಗೆ ಶರಣಾದ ಬಾಲಕ.
Read More..; ನಗರ ಸಭೆ ಉಪಾಧ್ಯಕ್ಷೆ ಮಗ ಸೇರಿ ನಾಲ್ವರ ಹ*ತ್ಯೆ! ಹಂ*ತಕರ ಪತ್ತೆಗೆ ವಿಶೇಷ ತಂಡ ರಚನೆ
ಪಂಜದ ದಿವಂಗತ ರೋಹಿತ್ ಗೌಡ ಎಂಬವರ ಮಗನಾಗಿದ್ದ ಈತ ತನ್ನ ತಂದೆಯ ನಿಧನದ ನಂತರ ದುಗಲಾಡಿಯ ಮಾವನ ಮನೆಯಲ್ಲಿದ್ದ. ಅಲ್ಲಿಂದಲೆ ಉಪ್ಪಿನಂಗಡಿಯ ಖಾಸಗಿ ಶಾಲೆಗೆ ಹೋಗುತ್ತಿದ್ದ. ಈತ ಈ ಬಾರಿ ಏಳನೇ ತರಗತಿ ಉತ್ತೀರ್ಣನಾಗಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ 8 ನೇ ತರಗತಿಗೆ ತೇರ್ಗಡೆ ಹೊಂದಿದ್ದ. ಏ.19ರಂದು ತನ್ನ ಕೆಟ್ಟು ಹೋಗಿದ್ದ ಸೈಕಲ್ ಅನ್ನು ರಿಪೇರಿ ಮಾಡಿಕೊಡಬೇಕೆಂದು ಮನೆಯಲ್ಲಿ ಒತ್ತಾಯಿಸಿದ್ದ. ಮನೆಯ ಇನ್ವಾರ್ಟರ್ ರಿಪೇರಿಗೆ ಬಂದಿರುವುದರಿಂದ ಇವತ್ತು ಬೇಡ ನಾಳೆ ಸೈಕಲ್ ರಿಪೇರಿ ಮಾಡಿಕೊಡಲಾಗುವುದೆಂದು ಮನೆಯವರು ಹೇಳಿದ್ದಾರೆ ಎನ್ನಲಾಗಿದೆ. ಇದೇ ನೆಪವನ್ನು ಇಟ್ಟುಕೊಂಡು ಮನನೊಂದ ಬಾಲಕ ಮನೆಯ ಕೋಣೆಯೊಳಗೆ ಹೋಗಿ ಚಿಲಕ ಹಾಕಿ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಎಲ್ಲಾ ವಿಚಾರವನ್ನು ಮನೆಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸದ್ಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.
DAKSHINA KANNADA
ತ್ರಿಶೂರ್ ಪೂರಂ..! ದೇಶದ ಹೆಮ್ಮೆಯ ಉತ್ಸವ..!
ವಿವಿಧತೆಯಲ್ಲಿ ಏಕತೆ ಕಾಣುವ ನಮ್ಮ ದೇಶ ಹಲವು ಸಂಸ್ಕೃತಿ, ಕಲೆ, ಆಚರಣೆ, ಭಾಷೆ, ಜಾತಿ, ಧರ್ಮದ ಮೂಲಕ ವಿಶ್ವದ ಗಮನ ಸೆಳೆದಿದೆ. ದಿಪಾವಳಿ, ಹೋಳಿ, ಈದ್ , ಕ್ರಿಸ್ಮಸ್, ಹೀಗೆ ಹಲವು ಹಬ್ಬಗಳು ರಾಷ್ಟ್ರೀಯ ಮಟ್ಟದಲ್ಲಿ ಆಚರಣೆ ಆದ್ರೆ, ಇನ್ನೂ ಕೆಲವು ಹಬ್ಬಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆಯಾಗಿದೆ. ಅದರಲ್ಲಿ ವಿಶೇಷ ಹಬ್ಬವಾಗಿ ಕೇರಳದಲ್ಲಿ ಆಚರಿಸುವ ತ್ರಿಶೂರ್ ಪೂರಂ ಸದ್ಯ ಏಷ್ಯಾದಲ್ಲೇ ಅತೀ ಹೆಚ್ಚು ಜನರು ಭಾಗವಹಿಸುವ ಉತ್ಸವವಾಗಿ ಜಗತ್ಪ್ರಸಿದ್ದಿಯನ್ನು ಪಡೆದುಕೊಂಡಿದೆ.
ಏನಿದು ತ್ರಿಶೂರ್ ಪೂರಂ ಹಬ್ಬ
ತ್ರಿಶೂರ್ ಪೂರಂ ಅನ್ನೋದು ತ್ರಿಶೂರಿನ ಶಿವ ದೇವಾಲಯದಲ್ಲಿ ನಡೆಯುವ ವಾರ್ಷಿಕ ಜಾತ್ರೋತ್ಸವ. ಮಲೆಯಾಳಂ ಕ್ಯಾಲೆಂಡರ್ ಪ್ರಕಾರ ಪೂರಂ ನಕ್ಷತ್ರದಲ್ಲಿ ಚಂದ್ರೋದಯದ ವೇಳೆಯಲ್ಲಿ ನಡೆಯುವ ಉತ್ಸವ ಇದು. ತ್ರಿಶೂರ್ ನಲ್ಲಿರೋ ವಡಕ್ಕುನಾಥನ್ ಅರ್ಥಾತ್ ಶಿವ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಜಾತ್ರೆ ಇದು. ಆನೆಗಳ ಮೂಲಕ ದೇವರನ್ನು ಹೊತ್ತುಕೊಂಡು ದೇವಸ್ಥಾನದ ಬಾಗಿಲು ಪ್ರವೇಶ ಮಾಡೋದು ಈ ಉತ್ಸವದ ವಿಶೇಷ. ಹೀಗಾಗಿ ಸಾವಿರಾರು ವಿದೇಶಿಗರು ಉತ್ಸವ ನೋಡಲು ಆಗಮಿಸ್ತಾರೆ ಅನ್ನೋದೇ ವಿಶೇಷ.
ತ್ರಿಶೂರ್ ಪೂರಂ ಹಬ್ಬದ ಹಿನ್ನೆಲೆ
ರಾಮವರ್ಮ ಕುಂಞಿಪಿಳ್ಳೆ ಎಂಬ ಕೊಚ್ಚಿನ್ ಮಹಾರಾಜ 17 ನೇ ಶತಮಾನದಲ್ಲಿ ಅರುಟ್ಟುಪುಳ ಪೂರಂ ಎಂಬ ಉತ್ಸವವನ್ನು ನಡೆಸಿಕೊಂಡು ಬಂದಿದ್ದರು. ಅರುಟ್ಟುಪುಳ ಪೂರಂ ಎಂಬ ಒಂದು ದಿನದ ಉತ್ಸವಕ್ಕೆ ತ್ರಿಶೂರು ಸೇರಿದಂತೆ ಸುತ್ತಮುತ್ತಲಿನ ದೇವಸ್ತಾನಗಳು ಇದರಲ್ಲಿ ಭಾಗಿ ಆಗುತ್ತಿದ್ದವು. 1796 ರಲ್ಲಿ ಮಳೆಯ ಕಾರಣಿದಿಂದ ತ್ರಿಶೂರ್ನಿಂದ ಹೊರಟಿದ್ದ ದೇವಾಲಯ ತಂಡಗಳಿಗೆ ಅರುಟ್ಟುಪುಳ ಪೂರಂ ಉತ್ಸವದಲ್ಲಿ ಭಾಗವಹಿಸಲು ಅವಕಾಶ ನಿರಾಕರಿಸಲಾಗಿತ್ತು. ಇದರಿಂದ ಕೋಪಗೊಂಡಿದ್ದ ತ್ರಿಶೂರಿನ ರಾಜ ಶಕ್ತನ್ 1796 ರಲ್ಲೇ ತ್ರಿಶೂರಿನಲ್ಲೇ ಈ ಪೂರಂ ಉತ್ಸವ ಆರಂಭಿಸಿದ್ರು ಅನ್ನೋ ಐತಿಹಾಸಿಕ ಕಥೆ ಇದೆ. ಅಂದಿನಿಂದ ತ್ರಿಶೂರಿನ ಹತ್ತು ದೇವಾಲಯಗಳು ಒಟ್ಟಾಗಿ ತ್ರಿಶೂರ್ ಪೂರಂ ಆಚರಿಸಲು ಆರಂಭವಾಯ್ತು ಅನ್ನೋ ದಾಖಲೆಗಳು ಸಿಗುತ್ತದೆ.
ಧರ್ಮಾತೀತವಾಗಿ ನಡೆಯುವ ಪೂರಂ ಉತ್ಸವ
ತ್ರಿಶೂರ್ ಪೂರಂ ಅಂದ ತಕ್ಷಣ ನೆನಪಾಗುವುದು ಅಲ್ಲಿ ಕಾಣಸಿಗುವ ಸರ್ವಧರ್ಮ ಸಮನ್ವಯತೆ. ಇಂತಹ ದೃಶ್ಯ ಬಹುಶಃ ದೇಶದ ಬೇರೆಲ್ಲೂ ಕಾಣಲು ಸಿಗಲಾರದು. ತ್ರಿಶೂರ್ ಪೂರಂ ಉತ್ಸವದಲ್ಲಿ ಪ್ರತಿ ವರ್ಷ ಹೊಸ ಕೊಡೆಗಳನ್ನು ತಯಾರಿಸಲಾಗುತ್ತದೆ. ಕುಡವಟ್ಟಂ ಎಂದು ಕರೆಯುವ ಈ ಕೊಡೆಗಳ ವಿಶೇಷ ಆಕರ್ಷಣೆಗೆ ಕ್ರೈಸ್ತ ಸಮೂದಾಯದವರ ಕೊಡುಗೆ ಇದ್ರೆ, ಪೂರಂಗೆ ಬೇಕಾದ ಪೆಂಡಾಲ್ ಹಾಕೋದು ಇಲ್ಲಿನ ಮುಸ್ಲಿಂ ಸಮೂದಾಯದವರು. ಇನ್ನು ಉತ್ಸವ ನೋಡಲು ಹಿಂದೂ ಮುಸ್ಲಿಂ ಕ್ರೈಸ್ತ ಹೀಗೆ ಎಲ್ಲಾ ಧರ್ಮದವರೂ ಆಗಮಿಸುವುದು ಇಲ್ಲಿನ ವಿಶೇಷ. ಇದೇ ಕಾರಣಕ್ಕೆ ಈ ತ್ರಿಶೂರ್ ಪೂರಂ ಇಂದು ಜಗತ್ಪ್ರಸಿದ್ಧಿಯನ್ನು ಪಡೆದುಕೊಂಡಿದೆ.
ತ್ರಿಶೂರ್ ಪೂರಂ ಹಬ್ಬ ಹೇಗೆ ನಡೆಯುತ್ತದೆ
ತ್ರಿಶೂರು ಹಾಗೂ ಸುತ್ತಮುತ್ತಲಿನ ಹತ್ತು ದೇವಲಾಯಗಳಿಂದ ಆನೆಯ ಮೂಲಕ ದೇವರನ್ನು ಹೊತ್ತು ಶಿವ ದೇವಾಲಯಕ್ಕೆ ತರಲಾಗುತ್ತದೆ. ಒಂದೊಂದು ದೇವಸ್ಥಾನದಿಂದ ದೇವರನ್ನು ಹೊತ್ತು ಬಾಗಿಲು ದಾಟಿ ಬರುವ ಆನೆಗಳನ್ನು ನೋಡಲು ಸಾವಿರಾರು ಭಕ್ತರು ಕಾತರದಿಂದ ಕಾಯುತ್ತಿರುತ್ತಾರೆ. ಈ ವೇಳೆ ಮೊಳಗುವ ಪಂಚ ವಾದ್ಯಗಳನ್ನು ಕೇಳಲೆಂದೇ ಕೆಲವರು ಬರುವುದಿದೆ. ಕಣಿಮಂಗಲಂ ಶಾಸ್ತಾವು ದೇವಾಲಯದಿಂದ ಆರಂಭವಾಗುವ ಈ ಉತ್ಸವ ಬಳಿಕ ಒಂದೊಂದೆ ದೇವಸ್ಥಾನದಿಂದ ಬರಲು ಆರಂಭವಾಗುತ್ತದೆ. ಚಂಡೆ, ಮದ್ದಳೆ, ಕಹಳೆ,ತಾಳ ಹಾಗೂ ಎಡಕ್ಕ ಹೀಗೆ ಪಂಚವಾದ್ಯದ ಮೆರವಣಿಗೆ ನಡೆಯುತ್ತದೆ. ಹತ್ತು ಆನೆಗಳು ದೇವಾಲಯದ ಮುಂದೆ ನಿಂತಿದ್ದರೆ , ಐವತ್ತಕ್ಕೂ ಹೆಚ್ಚು ಆನೆಗಳು ಉತ್ಸವದಲ್ಲಿ ಭಾಗಿಯಾಗುತ್ತದೆ. ಚಿನ್ನದ ಹಣೆಪಟ್ಟಿ, ಚಿನ್ನದ ಪ್ರಭಾವಳಿಯನ್ನು ಹಿಡಿದು , ಪಾರೆಮೆಕ್ಕಾವು ಮತ್ತು ತಿರುವಂಬಾಡಿ ಎಂಬ ಎರಡು ತಂಡಗಳು ಪೂರಂ ನಡೆಯುವ ಸ್ಥಳದಲ್ಲಿ ಮುಖಾಮುಖಿಯಾಗಿ ನಿಂತು ಛತ್ರಿ ವಿನಿಯಮ ಮಾಡಿಕೊಳ್ಳುವ ದೃಶ್ಯ ಪೂರಂನಲ್ಲಿ ವಿಶೇಷ ಅನುಭವ ನೀಡುವ ದೃಶ್ಯ ಕೂಡಾ ಹೌದು. ಕುಡಮಟ್ಟಂ ಅಂತ ಇದನ್ನು ಕರೆಯಲಾಗುತ್ತಿದ್ದು ಶಿವದೇವಲಾಯದ ಪಶ್ಚಿಮ ಗೋಪುರದ ಬಳಿ ಇದು ಸಂಪನ್ನಗೊಳ್ಳುತ್ತದೆ.
DAKSHINA KANNADA
MANGALURU : ಪೆಟ್ರೋಲ್ ಬಂಕ್ ಸಿಬ್ಬಂದಿ ಎಡವಟ್ಟು; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿ ಅನಾಹುತ
ಮಂಗಳೂರು : ಪೆಟ್ರೋಲ್ ಬಂಕ್ ಸಿಬ್ಬಂದಿ ಎಡವಟ್ಟಿನಿಂದ ಕಾರಿಗೆ ಪೆಟ್ರೋಲ್ ತುಂಬಿಸುವ ಬದಲು ಡೀಸೆಲ್ ತುಂಬಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪರಿಣಾಮ ಕಾರು ಇಂಜಿನ್ ಸಂಪೂರ್ಣ ಹಾಳಾಗಿ ಲಕ್ಷಾಂತರ ರೂ.ನಷ್ಟವಾಗಿದೆ ಎಂದು ಕಾರು ಮಾಲಕ ಆರೋಪಿಸಿದ್ದಾರೆ.
ಹೊಟೇಲ್ ಉದ್ಯಮಿ ಜೀವನ್ ಶೆಟ್ಟಿ ಎಂಬವರು ತಮ್ಮ ಹುಂಡೈ ಐ 10 ಗ್ರ್ಯಾಂಡ್ ಕಾರ್ ಗೆ ಪೆಟ್ರೋಲ್ ತುಂಬಿಸುವ ಸಲುವಾಗಿ, ಎಪ್ರಿಲ್ 5 ರಂದು ಮಧ್ಯಾಹ್ನ 12 ರ ಸುಮಾರಿಗೆ ಬಲ್ಮಠದ ಜ್ಯೂಸ್ ಜಂಕ್ಷನ್ ಮುಂಭಾಗದ ಹೆಚ್ ಪಿ ಪೆಟ್ರೋಲ್ ಬಂಕ್ ಗೆ ಬಂದಿದ್ದರು. ಕ್ಯಾಪ್ ಮೇಲೆ ಪೆಟ್ರೋಲ್ ಎಂದು ಬರೆದಿದ್ದರೂ, ಸಿಬ್ಬಂದಿ ಮಾತ್ರ ಕಾರಿಗೆ ಡೀಸೆಲ್ ತುಂಬಿಸಿದ್ದಾರೆ.
ಪರಿಣಾಮ ಕಾರು ಕೆಲವೇ ಕಿಲೋ ಮೀಟರ್ ಸಂಚರಿಸಿ ಮುಂದಕ್ಕೆ ಹೋಗದೆ ನಿಂತಿದೆ. ಪರಿಶೀಲಿಸಿದಾಗ ಬಂಕ್ ಸಿಬ್ಬಂದಿ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ತುಂಬಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ ಪೆಟ್ರೋಲ್ ಬಂಕ್ ಮ್ಯಾನೇಜರ್ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂದು ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾರು ಇಂಜಿನ್ ದುರಸ್ಥಿಗೆ 2 ಲಕ್ಷಕ್ಕೂ ಅಧಿಕ ಖರ್ಚು ಆಗಲಿದೆ. ಆದರೆ, ಪೆಟ್ರೋಲ್ ಬಂಕ್ ಮಾಲಕ ಬರೀ 30 ಸಾವಿರ ಕೊಟ್ಟು ಸುಮ್ಮನಾಗಿದ್ದಾರೆ ಎಂದು ಜೀವನ್ ಶೆಟ್ಟಿ ದೂರಿದ್ದಾರೆ. ಕಡಿಮೆ ಸಂಬಳಕ್ಕೆ ಅನುಭವವಿಲ್ಲದ ಕಾರ್ಮಿಕರನ್ನು ನೇಮಿಸುತ್ತಾರೆ. ಇಂತಹ ಸಮಸ್ಯೆಯಾದಾಗ ತಮ್ಮ ಇನ್ಶೂರೆನ್ಸ್ ನಲ್ಲಿ ಪರಿಹಾರ ನೀಡುವ ಅವಕಾಶವಿದ್ದರೂ ಬಂಕ್ ಮಾಲಕರು ಮಾತ್ರ ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ತಾನು ಪರಿಹಾರಕ್ಕಾಗಿ ಗ್ರಾಹಕ ನ್ಯಾಯಾಲಯದ ಮೊರೆ ಹೋಗುವುದಾಗಿ ಜೀವನ್ ಶೆಟ್ಟಿ ಹೇಳಿದ್ದಾರೆ.