ಮಂಗಳೂರು: ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಆಟೋರಿಕ್ಷಾದೊಳಗಿನ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂದಿಸಿದಂತೆ ಪ್ರಕರಣದ ತನಿಖೆ ತೀವ್ರವಾಗಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ದಾಖಲಾಗಿರುವ ಆರೋಪಿ ಶಾರೀಕ್ ಹಾಗೂ ಪುರುಷೋತ್ತಮ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಆರೋಪಿ ಶಾರೀಕ್‌ನ ಮೆಡಿಕಲ್ ಫಿಟ್ನೆಸ್ ಬಗ್ಗೆ ವೈದ್ಯಾಧಿಕಾರಿಗಳು ಖಚಿತಪಡಿಸಿದ ಬಳಿಕ ನಾವು ಆತನನ್ನು ಕಸ್ಟಡಿಗೆ ಪಡೆದುಕೊಂಡ ಬಳಿಕ ತನಿಖೆ ಎಲ್ಲಾ ಆಯಾಮಗಳಲ್ಲೂ ನಡೆಸಲಿದ್ದೇವೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.
ಮಾಧ್ಯಮಗಳಿಗೆ ಇಂದು ಪ್ರತಿಕ್ರಿಯೆ ನೀಡಿದ ಅವರು ಮಂಗಳೂರಿನ ವೈನ್‌ಶಾಪ್‌ನಲ್ಲಿ ಆರೋಪಿ ಇನ್ನೊಬ್ಬನ ಜೊತೆಗೆ ತೆರಳಿ ಹೊರಗೆ ಬರುವ ವಿಡಿಯೋ ಸಿಕ್ಕಿದೆ ಎನ್ನುವುದು ಸುಳ್ಳು ಸುದ್ದಿಯಾಗಿದ್ದು, ಈ ವಿಡಿಯೋಗೂ ಅಲ್ಲಿನ ವ್ಯಕ್ತಿಗಳಿಗೂ ಯಾವುದೇ ಸಂಬಂಧ ಇಲ್ಲ.
ಈ ಪ್ರಕರಣಕ್ಕೂ ಆ ವಿಡಿಯೋಗೂ ಸಂಬಂಧ ಇಲ್ಲ. ಸಾರ್ವಜನಿಕರು ಈ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳನ್ನು ನಂಬದೇ, ಅಧಿಕೃತವಾಗಿ ಸಿಗುವ ಮಾಹಿತಿಗಳನ್ನು ಮಾತ್ರ ನಂಬಬೇಕು ಎಂದವರು ಮನವಿ ಮಾಡಿದರು.
ನಗರದಲ್ಲಿನ ಬಾಂಬ್ ಸ್ಪೋಟದ ಹಿನ್ನೆಲೆಯಲ್ಲಿ ಗಡಿ ಪ್ರದೇಶ ಹಾಗೂ ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿಯಾಗಿ ಬಂದೋಬಸ್ತ್ ಮಾಡಲಾಗಿದೆ.
ಜನನಿಬಿಡ ಪ್ರದೇಶಗಳಾದ ಬಸ್ಸುನಿಲ್ದಾಣ, ಮಾಲ್‌ಗಳು, ಸಿನೆಮಾ ಮಂದಿರಗಳ ಬಳಿ ಹೆಚ್ಚುವರಿ ತಪಾಸಣೆ ಮಾಡಲಾಗುತ್ತಿದ್ದು, ಸಂಶಯಾಸ್ಪದವಾಗಿ ಕಾಣುವ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗುವುದು ಎಂದರು. ಬಾಂಬ್ ಸ್ಪೋಟ ನಡೆದ ರಿಕ್ಷಾ ಚಾಲಕ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದರು.