Saturday, August 20, 2022

ದೇಶಾದ್ಯಂತ ಮಾ. 27ರಿಂದ ಪೂರ್ಣ ಪ್ರಮಾಣದ ಡೊಮೆಸ್ಟಿಕ್ ವಿಮಾನ ಯಾನ ಆರಂಭ

ಮಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಈಗಾಗಲೇ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಸಂಚಾರ ನಿರ್ವಹಣೆ ಮಾಡುತ್ತಿದೆ. ಆದರೆ ಕೊರೊನಾ, ಒಮಿಕ್ರಾನ್‌ ಹಿನ್ನೆಲೆಯಲ್ಲಿ ಪೂರ್ಣಪ್ರಮಾಣದ ದೇಶೀಯ ಸೇವೆ ಆರಂಭಗೊಂಡಿರಲಿಲ್ಲ.

ಇದೀಗ ಇದನ್ನು ಆರಂಭಿಸಲು ನಾಗರಿಕ ವಿಮಾನಯಾನ ಮಹಾನಿರ್ದೇಶಕರು ಅನುಮತಿ ನೀಡಿದ್ದು, ಮಂಗಳೂರು ನಿಲ್ದಾಣದಲ್ಲಿ ಆಂತರಿಕ ವಿಮಾನಯಾನಗಳ ಸೇವೆ ಮಾ. 27ರಿಂದ ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳಲಿದೆ. ಹೀಗಾಗಿ ವಿಮಾನಯಾನ ಸೇವೆ ಈ ಹಿಂದಿನಂತೆ ಸಾಮಾನ್ಯ ಸ್ಥಿತಿಗೆ ಮರಳಲಿದೆ.

ಮಂಗಳೂರು ನಿಲ್ದಾಣದಲ್ಲಿ ಇಂಡಿಗೋ, ಸ್ಪೈಸ್‌ಜೆಟ್‌, ಏರ್‌ ಇಂಡಿಯಾ, ಗೋಫಸ್ಟ್‌ ವಿಮಾನಯಾನ ಸಂಸ್ಥೆಗಳ ವಿಮಾನಗಳು ಪ್ರಸ್ತುತ ಮಂಗಳೂರಿನಿಂದ ಬೆಂಗಳೂರು, ಮುಂಬಯಿ, ಹೈದರಾಬಾದ್‌, ಚೆನ್ನೈ ಹಾಗೂ ಕೊಯಮತ್ತೂರಿಗೆ ಸಂಚರಿಸುತ್ತಿವೆ.

ಇಂಡಿಗೋ ಸಂಸ್ಥೆಯ ವಿಮಾನಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಬೆಂಗಳೂರು, ಮುಂಬಯಿ, ಹೈದರಾಬಾದ್‌ ಹಾಗೂ ಚೆನ್ನೈಗೆ ವಾರಕ್ಕೆ 57 ಸಂಚಾರಗಳನ್ನು ನಡೆಸುತ್ತಿವೆ.

ಸ್ಪೈಸ್‌ಜೆಟ್‌ ಬೆಂಗಳೂರು ಮತ್ತು ಹೈದರಾಬಾದ್‌ಗೆ ತಲಾ 4, ಏರ್‌ಇಂಡಿಯಾ ಕೊಯಮತ್ತೂರಿಗೆ 7 ಗೋಫಸ್ಟ್‌ ಮುಂಬಯಿಗೆ 6 ಸಂಚಾರಗಳನ್ನು ನಡೆಸುತ್ತಿವೆ.

ಪ್ರಸ್ತುತ ಉದ್ದೇಶಿತ ಹೊಸ ಸಂಚಾರ ಶೆಡ್ಯೂಲ್‌ನಂತೆ ಇಂಡಿಗೋ 77, ಸ್ಪೈಸ್‌ಜೆಟ್‌ 14, ಗೋಫಸ್ಟ್‌ 14ಕ್ಕೇರಲಿದೆ. ಏರ್‌ ಇಂಡಿಯಾದ ಯಾನ ಈ ಹಿಂದಿನಂತೆ ಇರಲಿದೆ. ಒಟ್ಟಾರೆಯಾಗಿ ವಾರದ ಒಟ್ಟು ಅಂತರಿಕ ವಿಮಾನಯಾನ ಸಂಚಾರ ಪ್ರಸ್ತುತ ಇರುವ 78ರಿಂದ 112ಕ್ಕೇರಲಿದೆ.

ಇದರ ಜತೆ ಇಂಡಿಗೋ ಹೊಸದಾಗಿ ಪುಣೆಗೆ ವಾರಕ್ಕೆ 5 ಯಾನಗಳನ್ನು ನಡೆಸುವ ಪ್ರಸ್ತಾವನೆ ಸಲ್ಲಿಸಿದೆ. ಸ್ಪೈಸ್‌ಜೆಟ್‌ ಕೂಡ ಹೊಸದಿಲ್ಲಿಗೆ ದಿನನಿತ್ಯ ವಿಮಾನಯಾನ ಆರಂಭಿಸುವ ಪ್ರಸ್ತಾವ ಹೊಂದಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಫೆಬ್ರವರಿಯಲ್ಲಿ 1 ಲಕ್ಷ 3 ಸಾವಿರದ 273 ಮಂದಿ ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics