ಮಾಲೀಕನ ನೆನಪಲ್ಲೇ ಕೊರಗಿ ಪ್ರಾಣ ಬಿಟ್ಟ ನಾಯಿ : ಬೆಳಗಾವಿಯಲ್ಲೊಂದು ಮನ ಕಲುವ ಘಟನೆ..!
ಬೆಳಗಾವಿ: ಅಗಲಿದ ಮಾಲೀಕನ ನೆನಪಲ್ಲಿ ಅನ್ನ, ನೀರು ತ್ಯಜಿಸಿ ಶ್ವಾನವೊಂದು ಪ್ರಾಣಬಿಟ್ಟ ಮನಕಲುಕುವ ಘಟನೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ನಡೆದಿದೆ.
ಸಾಕಿ ಸಲುಹಿದ ಮಾಲೀಕನ ಅಗಲಿಕೆಯಿಂದ ಅನ್ನ, ನೀರು ತ್ಯಜಿಸಿ ಮಾಲೀಕನಿಗಾಗಿ ಹುಡುಕಾಟ ನಡೆಸಿದ್ದ ಶ್ವಾನ ತನ್ನ ಮಾಲೀಕನ ನೆನಪಲ್ಲೇ ಈಗ ಅವರ ದಾರಿ ಹಿಡಿದಿದೆ.
ಈ ಶ್ವಾನವನ್ನು ಅವರಾದಿ ಗ್ರಾಮದ ಶಂಕ್ರೆಪ್ಪ ಮಡಿವಾಳರ ಎಂಬುವರು ಸಾಕಿದ್ದರು. ಪ್ರೀತಿಯಿಂದ ಕಡ್ಡಿ ಎಂದು ಹೆಸರಿಟ್ಟಿದ್ದರು. ಅವರು ಈಚೆಗೆ ಮೃತಪಟ್ಟಿದ್ದರು.
ತನ್ನ ಮಾಲೀಕ ಸುತ್ತುತ್ತಿದ್ದ ಜಾಗವನ್ನೆಲ್ಲ ಸುತ್ತಿ ಅವನಿಗಾಗಿ ಹುಡುಕಾಟ ನಡೆಸಿ ಗಲ್ಲಿ ಗಲ್ಲಿಯಲ್ಲೂ ಆತನಿಗಾಗಿ ಮೊರೆ ಇಡುತ್ತಿತ್ತು. ಮಾಲೀಕನಿಲ್ಲದ ಕೊರಗಲ್ಲೇ ಆರು ದಿನಗಳಿಂದ ಊಟವನ್ನೂ ಬಿಟ್ಟಿತ್ತು.
ಇಂದು ಈ ಪ್ರೀತಿಯ ನಾಯಿ ಮೃತಪಟ್ಟಿದೆ.ಹಾಲು ವ್ಯಾಪಾರಿ ಆಗಿದ್ದ ಶಂಕ್ರಪ್ಪ ಮಡಿವಾಳರ ಹೃದಯಾಘಾತದಿಂದ ಮೃತಪಟ್ಟಿದ್ದರು. ಶಂಕ್ರಪ್ಪ ಹಾಲು ಸಂಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರಕ್ಕೆ ಹಾಲು ಮಾರಾಟ ಮಾಡುತ್ತಿದ್ದರು.
ಅವರು ಸತ್ತ ನಂತರ, ಶಂಕ್ರಪ್ಪ ಅಲ್ಲಿಗೆ ಹೋಗಿರಬಹುದು ಎಂದು ಈ ಶ್ವಾನ ಅಲ್ಲಿಗೆ ಹೋಗಿ ಸಹ ಹುಡುಕಾಟ ನಡೆಸಿತ್ತು. ದುರದೃಷ್ಟವಶಾತ್ ಇಂದು ಈ ಕಡ್ಡಿ ಮಹಾಲಿಂಗಪುರದಲ್ಲಿ ಶವವಾಗಿ ಪತ್ತೆಯಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಶ್ವಾನದ ಮೃತದೇಹವನ್ನು ಊರಿಗೆ ತಂದು ಊರಿನ ಪ್ರಮುಖರ ಸಮ್ಮುಖದಲ್ಲಿ ಮೆರವಣಿಗೆ ಮಾಡಿ ವಿಧಿವಿಧಾನಗಳೊಂದಿಗೆ ಮಾಲೀಕ ಶಂಕ್ರೆಪ್ಪರವರ ಸಮಾಧಿ ಪಕ್ಕದಲ್ಲೇ ಶ್ವಾನದ ಅಂತ್ಯಕ್ರಿಯೆಯನ್ನೂ ನಡೆಸಲಾಯಿತು.